ನೇರವಾಗಿಯೇ ಲಂಚ ಕೇಳುತ್ತಾರೆ: ಸಚಿವ, ಶಾಸಕರ ವಿರುದ್ಧ ಗುತ್ತಿಗೆದಾರರ ‘ಬಾಂಬ್‌’, ಪ್ರಮುಖರ ಹೆಸರು ಬಹಿರಂಗ!

Published : Apr 14, 2022, 04:31 AM ISTUpdated : Apr 14, 2022, 04:40 AM IST
ನೇರವಾಗಿಯೇ ಲಂಚ ಕೇಳುತ್ತಾರೆ: ಸಚಿವ, ಶಾಸಕರ ವಿರುದ್ಧ ಗುತ್ತಿಗೆದಾರರ ‘ಬಾಂಬ್‌’, ಪ್ರಮುಖರ ಹೆಸರು ಬಹಿರಂಗ!

ಸಾರಾಂಶ

* ಕಮಿಷನ್‌ ದಾಖಲೆ ಬಿಡುಗಡೆ ಎಚ್ಚರಿಕೆ * ಸಚಿವ, ಶಾಸಕರ ವಿರುದ್ಧ ಗುತ್ತಿಗೆದಾರರ ‘ಬಾಂಬ್‌’ * 1 ತಿಂಗಳು ಗುತ್ತಿಗೆ ಕಾಮಗಾರಿ ಸ್ಥಗಿತ

ಬೆಂಗಳೂರು(ಏ.14): ರಾಜ್ಯ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಕಮಿಷನ್‌ ದಂಧೆಯಿಂದ ನರಳುತ್ತಿರುವ ಗುತ್ತಿಗೆದಾರರ ಸಮಸ್ಯೆಗಳನ್ನು ಆಲಿಸಿ 15 ದಿನದೊಳಗೆ ಪರಿಹಾರ ನೀಡದಿದ್ದರೆ ಐದಾರು ಸಚಿವರು, 25 ಶಾಸಕರ ಭ್ರಷ್ಟಾಚಾರವನ್ನು ದಾಖಲೆ ಸಹಿತ ಬಯಲಿಗೆಳೆಯುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ರಾಜ್ಯ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದೆ.

ಅಲ್ಲದೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಕಮಿಷನ್‌ ದಂಧೆ ವಿರುದ್ಧ ಮೇ 25ಕ್ಕೆ ರಾಜ್ಯದ 50 ಸಾವಿರ ಗುತ್ತಿಗೆದಾರರನ್ನು ಸೇರಿಸಿ ಬೃಹತ್‌ ಪ್ರತಿಭಟನೆ ನಡೆಸುತ್ತೇವೆ. ಇದಕ್ಕೂ ಮುನ್ನ ಇನ್ನೊಂದು ವಾರದಲ್ಲಿ ಸಂಘದ ಕಾರ್ಯಕಾರಿ ಮಂಡಳಿ ಸಭೆ ನಡೆಸಿ ಪ್ರತಿಭಟನಾ ಸೂಚಕವಾಗಿ ಒಂದು ತಿಂಗಳ ಕಾಲ ಸರ್ಕಾರದ ಎಲ್ಲ ಟೆಂಡರ್‌ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸಂಘದ ಪದಾಧಿಕಾರಿಗಳ ಸಭೆ ತೀರ್ಮಾನಿಸಿದೆ.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಹಿನ್ನೆಲೆಯಲ್ಲಿ ನಗರದ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಬುಧವಾರ ಪದಾಧಿಕಾರಿಗಳ ತುರ್ತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು, ಸರ್ಕಾರದ ಟೆಂಡರ್‌ಗಳಲ್ಲಿ ಕಮಿಷನ್‌ ದಂಧೆ ಇಂದು, ನಿನ್ನೆಯದಲ್ಲ. ಆದರೆ, ಇಷ್ಟುಪ್ರಮಾಣದ ಕಮಿಷನ್‌ ಹಿಂದೆ ಯಾವ ಸರ್ಕಾರದಲ್ಲೂ ಇರಲಿಲ್ಲ. ಹಿಂದಿನ ಸರ್ಕಾರಗಳಲ್ಲಿ ಇದು ಶೇಕಡಾ ಹತ್ತು ಹದಿನೈದರಷ್ಟು, ಕೆಲವು ದೊಡ್ಡ ಕಾಮಗಾರಿಗಳಲ್ಲಿ ಶೇ.20ರಷ್ಟುನಡೆಯುತ್ತಿತ್ತು. ಆದರೆ, 2019ರ ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಶೇ.40ರಷ್ಟುಆಗಿದೆ. ಇದರ ಜೊತೆಗೆ ಶೇ.15ರಷ್ಟುತೆರಿಗೆ ಪಾವತಿಸಿ ನಾವು ಯಾವ ರೀತಿ ಕಾಮಗಾರಿ ಮಾಡೋಣ ಎಂದು ಪ್ರಶ್ನಿಸಿದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಬಳಿಕ ಹಲವು ಗುತ್ತಿಗೆದಾರರು ವಿವಿಧ ಸಚಿವರು ಹಾಗೂ ಶಾಸಕರ ಭ್ರಷ್ಟಾಚಾರ, ಕಮಿಷನ್‌ ದಂಧೆಗೆ ಪೂರಕ ದಾಖಲೆಗಳನ್ನು ಸಂಘಕ್ಕೆ ನೀಡಿದ್ದಾರೆ. ಸರ್ಕಾರಕ್ಕೆ ಇನ್ನು 15 ದಿನ ಕಾಲಾವಕಾಶ ಕೊಡುತ್ತೇವೆ. ಅಷ್ಟರೊಳಗೆ ಗುತ್ತಿಗೆದಾರರ ಸಭೆ ಕರೆದು ಬಾಕಿ ಬಿಲ್‌ ಸೇರಿದಂತೆ ಎಲ್ಲಾ ಇತರೆ ಸಮಸ್ಯೆಗಳನ್ನು ಬಗೆಹರಿಸದೆ ಹೋದರೆ ಆ ಸಚಿವ, ಶಾಸಕರ ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.

ಕೆಲ ಪ್ರಮುಖ ಇಲಾಖಾ ಸಚಿವರ ಹೆಸರು ಉಲ್ಲೇಖಿಸಿದ ಕೆಂಪಣ್ಣ ಅವರು ಅವರೆಲ್ಲಾ ನೇರವಾಗಿಯೇ ಲಂಚ ಕೇಳುತ್ತಾರೆ. ಕಮಿಷನ್‌ ಕೊಡದಿದ್ದರೆ ಟೆಂಡರ್‌ ಯಾವುದೇ ಕಾರಣಕ್ಕೂ ಸಿಗುವುದಿಲ್ಲ. ಆದರೂ, ಸರ್ಕಾರ ವರ್ಷಗಳು ಕಳೆದರೂ ಬಿಲ್‌ ಮೊತ್ತ ಬಿಡುಗಡೆ ಮಾಡುವುದಿಲ್ಲ. ಅದಕ್ಕೂ ಕಮಿಷನ್‌ ಕೇಳಲಾಗುತ್ತಿದೆ. ಇದನ್ನು ತಪ್ಪಿಸದಿದ್ದರೆ ಇವತ್ತು ಸಂತೋಷ್‌ಗೆ ಬಂದ ಸ್ಥಿತಿಯನ್ನು ಮುಂದೆ ಇನ್ನಷ್ಟುಗುತ್ತಿಗೆದಾರರೂ ಎದುರಿಸಬೇಕಾಗುತ್ತದೆ ಎಂದರು.

ಟೆಂಡರ್‌ಗೆ ಅನುಮೋದನೆ ಪಡೆಯಲು ಆರಂಭದಲ್ಲೇ ಶೇ.5ರಷ್ಟು, ನಂತರ ಟೆಂಡರ್‌ ಮೊತ್ತ ಅನುಮೋದನೆಗೆ ಶೇ.15ರಷ್ಟು, ಮೊತ್ತ ಬಿಡುಗಡೆಗೆ ಶೇ.5ರಷ್ಟುಸೇರಿದಂತೆ ಪ್ರತಿ ಟೆಂಡರ್‌ಗೆ ಒಟ್ಟು ಶೇ.40ರಷ್ಟುಕಮಿಷನ್‌ ನೀಡಬೇಕು. ಇಲ್ಲಿ ಆಯಾ ಇಲಾಖಾ ಸಚಿವರು, ಸ್ಥಳೀಯ ಶಾಸಕರು, ಮುಖ್ಯ ಎಂಜಿನಿಯರ್‌ಗಳು ಹೀಗೆ ಒಬ್ಬೊಬ್ಬರಿಗೂ ಇಂತಿಷ್ಟುಎಂದು ಕಮಿಷನ್‌ನಲ್ಲಿ ಪಾಲು ಹೋಗುತ್ತದೆ ಎಂದು ದೂರಿದರು.

ನನಗೂ ಬೆದರಿಕೆ ಬಂದಿದೆ!

ಕಮಿಷನ್‌ ವಿಚಾರದ ಬಗ್ಗೆ ದನಿ ಎತ್ತಿರುವುದಕ್ಕೆ ನನಗೂ ಕೆಲವೆಡೆಯಿಂದ ಪರೋಕ್ಷ ಬೆದರಿಕೆ ಬಂದಿವೆ. ಕೆಲವರು ನನ್ನ ಮನೆಯವರ ಮೂಲಕ ಸರ್ಕಾರ, ಯಾವುದೇ ಸಚಿವರ ವಿರುದ್ಧ ಏನೂ ಮಾತನಾಡದಂತೆ ಬೆದರಿಕೆ ಹಾಕಿದ್ದರು. ಇದರಿಂದಾಗಿ ಮನೆಯವರೂ ಭಯ ಬಿದ್ದಿದ್ದಾರೆ. ನನಗೆ ವಯಸ್ಸಾಗಿದೆ ಏನು ಮಾಡುತ್ತಾರೋ ಮಾಡಲಿ. ಸತ್ತರೂ ಪರವಾಗಿಲ್ಲ. ಗುತ್ತಿಗೆದಾರರ ಪರ ಹೋರಾಟ ಮಾಡುತ್ತೇನೆ.

- ಡಿ.ಕೆಂಪಣ್ಣ, ಅಧ್ಯಕ್ಷ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ

ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌: ಸುಧಾಕರ್‌

 

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌. ಭ್ರಷ್ಟಾಚಾರದ ಬಗ್ಗೆ ಯಾವುದೇ ಪುರಾವೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಕೂಡಲೇ ಅವರ ಗುತ್ತಿಗೆ ಲೈಸೆನ್ಸ್‌ ರದ್ದುಪಡಿಸಿ, ಕಪ್ಪುಗೆ ಪಟ್ಟಿಗೆ ಸೇರಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಆಗ್ರ​ಹಿ​ಸಿ​ದ್ದಾರೆ. ಜತೆಗೆ, ಕೆಂಪಣ್ಣ ವಿರುದ್ಧ ಮಾನನಷ್ಟಮೊಕ್ದಮೆ ಹೂಡುವುದಾಗಿಯೂ ತಿಳಿ​ಸಿ​ದ್ದಾರೆ.

ತಾಲೂಕಿನ ಮಂಚನಬಲೆಯಲ್ಲಿ ಬುಧವಾರ ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿ, ರಾಜ್ಯ ಸರ್ಕಾರವನ್ನು ಮಾನಸಿಕವಾಗಿ ಕುಗ್ಗಿಸುವ ಕಾಂಗ್ರೆಸ್‌ ಪ್ರಯತ್ನಕ್ಕೆ ನಾವು ಸೊಪ್ಪು ಹಾಕಲ್ಲ. ಮೇಲಿಂದ ಕೆಳಗೆ ಯಾರಿ​ದ್ದಾ​ರೆಂಬುದು ನಮಗೂ ಗೊತ್ತಿದೆ. ಈ ಬಗ್ಗೆ ಮಾತನಾಡುವ ಕಾಲ ನಮಗೂ ಬರುತ್ತದೆ. ಕಾಂಗ್ರೆ​ಸ್ಸಿ​ಗರು ನಿರ್ವಹಿಸಿದ ಇಲಾಖೆಗಳಲ್ಲಿ ಏನು ಮಾಡಿದ್ದಾರೆಂಬುದನ್ನು ಅಂಕಿ-ಅಂಶಗಳ ಸಮೇತ ನೀಡುತ್ತೇವೆ. ಆ ಬಗ್ಗೆ ಸರ್ಕಾ​ರ​ ತನಿಖೆಯನ್ನೂ ಮಾಡಲಿದೆ. ಇನ್ನು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ಎಂದ​ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ