ಬೆಂಗಳೂರಿನಲ್ಲಿ ಮುಂದುವರೆದ ಇ-ಖಾತಾ ಗೊಂದಲ: ಅಡಮಾನ ಸಾಲಕ್ಕೂ ತೊಂದರೆ

By Kannadaprabha News  |  First Published Oct 19, 2024, 8:57 AM IST

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ಧತೆ ಇಲ್ಲದೆ ಆಸ್ತಿ ನೋಂದಣಿ ವ್ಯವಹಾರಗಳಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಪರಿಣಾಮ ಆಸ್ತಿ ನೋಂದಣಿ ವಹಿವಾಟು ಭಾರಿ ಪ್ರಮಾಣದಲ್ಲಿ ಕುಸಿದಿದೆ. 


ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು (ಅ.19): ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ಧತೆ ಇಲ್ಲದೆ ಆಸ್ತಿ ನೋಂದಣಿ ವ್ಯವಹಾರಗಳಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಪರಿಣಾಮ ಆಸ್ತಿ ನೋಂದಣಿ ವಹಿವಾಟು ಭಾರಿ ಪ್ರಮಾಣದಲ್ಲಿ ಕುಸಿದಿದೆ. ಮುಖ್ಯವಾಗಿ ನೂತನ ಅಪಾರ್ಟ್‌ಮೆಂಟ್‌ ಫ್ಲ್ಯಾಟ್ ಖರೀದಿ, ಮಾರಾಟಕ್ಕೆ ಪೆಟ್ಟು ಬಿದ್ದಿದೆ. ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ನೋಂದಣಿಗಳು ಶೇ.60 ರಷ್ಟು ಕುಸಿದಿವೆ. ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಸಲುವಾಗಿ ಕಂದಾಯ ಇಲಾಖೆಯು ಬಿಬಿಎಂಪಿ ವ್ಯಾಪ್ತಿಯಲ್ಲೂ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಬಿಬಿಎಂಪಿ ವೆಬ್‌ಸೈಟ್‌ ಜತೆ ಕಾವೇರಿ-2 ತಂತ್ರಾಂಶವನ್ನು ಸಮನ್ವಯಗೊಳಿಸಲಾಗಿದೆ.

Latest Videos

ಫ್ಲ್ಯಾಟ್‌ಗಳ ನೋಂದಣಿಗೆ ಪೆಟ್ಟು: ಈ ಮೊದಲು ಅಪಾರ್ಟ್‌ಮೆಂಟ್‌ ನಿರ್ಮಾಣ ಸಂಸ್ಥೆಗಳು ಅಪಾರ್ಟ್‌ಮೆಂಟ್‌ ಕಟ್ಟಿ ಮುಗಿಸಿದ ಬಳಿಕ ಬಿಬಿಎಂಪಿಯಿಂದ ಒಸಿ (ಸ್ವಾಧೀನಾನುಭವ ಪತ್ರ) ಪಡೆದು ಫ್ಲ್ಯಾಟ್‌ಗಳನ್ನು ಖರೀದಿದಾರರಿಗೆ ನೋಂದಣಿ ಮಾಡಿಕೊಡುತ್ತಿದ್ದವು. ಬಳಿಕ ಫ್ಲ್ಯಾಟ್‌ ಖರೀದಿಸಿದವರು ತಮ್ಮ ಹೆಸರಿಗೆ ಇ-ಖಾತಾ ಮಾಡಿಸಿಕೊಳ್ಳುತ್ತಿದ್ದರು. ಇದೀಗ ಎಲ್ಲಾ ರೀತಿಯ ಆಸ್ತಿ ನೋಂದಣಿಗೂ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಹೀಗಾಗಿ ನಿರ್ಮಾಣ ಸಂಸ್ಥೆಗಳ ಮಾಲೀಕರು ಎಷ್ಟೇ ಫ್ಲ್ಯಾಟ್ ನಿರ್ಮಾಣ ಮಾಡಿದ್ದರೂ ಪ್ರತಿಯೊಂದು ಫ್ಲ್ಯಾಟ್‌ನ ಇ-ಖಾತಾವನ್ನು ಮೊದಲು ತಮ್ಮ ಹೆಸರಿಗೆ ಮಾಡಿಸಿಕೊಳ್ಳಬೇಕು. ಬಳಿಕ ಆ ಇ-ಖಾತಾ ಆಧಾರದ ಮೇಲೆಯೇ ಫ್ಲ್ಯಾಟ್‌ ಖರೀದಿಸುವವರಿಗೆ ನೋಂದಣಿ ಮಾಡಿಕೊಡಬಹುದು. ಇದು ಆಸ್ತಿ ನಕಲು ಹಾಗೂ ವಂಚನೆ ತಡೆಗೆ ನೆರವಾಗಬಲ್ಲ ಒಳ್ಳೆಯ ಯೋಜನೆ. ಆದರೆ, ಈ ರೀತಿ ಫ್ಲ್ಯಾಟ್‌ಗಳ ಖಾತಾ ಮಾಡಿಸಿಕೊಳ್ಳಲು ಕಂಪೆನಿಗಳಿಗೆ ಬಿಬಿಎಂಪಿ ಅವಕಾಶ ನೀಡಿಲ್ಲ. ಜತೆಗೆ ಪೂರ್ವ ಸಿದ್ಧತೆ ಇಲ್ಲದೆ ಏಕಾಏಕಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಹೀಗಾಗಿ ಫ್ಲ್ಯಾಟ್‌ಗಳ ನೋಂದಣಿ ಸ್ಥಗಿತಗೊಂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ./

ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್‌ನಿಂದ ಸಿ.ಪಿ.ಯೋಗೇಶ್ವರ್ ಮನವೊಲಿಕೆಗೆ ಕಸರತ್ತು

ಮುಂದುವರೆದ ಸರ್ವರ್‌ ಸಮಸ್ಯೆ: ಅಪಾರ್ಟ್‌ಮೆಂಟ್‌ ಮಾಲೀಕರು ಇ-ಖಾತಾ ಪಡೆಯಲು ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗೆ ಹೋದರೆ ಸರ್ವರ್‌ ಸಮಸ್ಯೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಫ್ಲ್ಯಾಟ್‌ಗಳ ನೋಂದಣಿಗೆ ಖರೀದಿದಾರರು ಪರದಾಡುವಂತಾಗಿದೆ. ಮುಖ್ಯವಾಗಿ ಎನ್‌ಆರ್‌ಐಗಳು ವಿಳಂಬದಿಂದ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರತಿಷ್ಠಿತ ನಿರ್ಮಾಣದಾರ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

ಅಡಮಾನ ಸಾಲಕ್ಕೂ ಸಮಸ್ಯೆ: ಇ-ಖಾತಾ ಸಮಸ್ಯೆಯಿಂದ ಕೇವಲ ಆಸ್ತಿ ನೋಂದಣಿಗೆ ಮಾತ್ರವಲ್ಲ ಅಡಮಾನ ಸಾಲ, ಅಡಮಾನ ಸಾಲ ಬಿಡುಗಡೆ, ಶಿಕ್ಷಣ ಸಾಲ, ಹಕ್ಕು ಬಿಡುಗಡೆ ನೋಂದಣಿ, ವಿಭಾಗ ಕರಾರು ನೋಂದಣಿ ಸೇರಿದಂತೆ ಎಲ್ಲಾ ನೋಂದಣಿ ವ್ಯವಹಾರಗಳಿಗೂ ಸಮಸ್ಯೆಯಾಗಿದೆ. ಇನ್ನು ಅಡಮಾನ ಸಾಲದಿಂದ ಕಟ್ಟಡ ಬಿಡುಗಡೆ ಮಾಡಿಕೊಳ್ಳಲೂ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಸಮಯಕ್ಕೆ ಸರಿಯಾಗಿ ಅಡಮಾನದಿಂದ ಆಸ್ತಿ ಬಿಡುಗಡೆ ಮಾಡಿಸಿಕೊಳ್ಳಲೂ ಸಾರ್ವಜನಿಕರು ಪರದಾಡುವಂತಾಗಿದೆ.ಐಜಿಆರ್‌ ಭೇಟಿಗೆ ನಿರ್ಮಾಣ ಕಂಪನಿಗಳ ನಿರ್ಧಾರ

ಇನ್ನು ಕಟ್ಟಡ ನಿರ್ಮಾಣ ಕಂಪನಿಗಳು ಅಪಾರ್ಟ್‌ಮೆಂಟ್‌ ಅಥವಾ ವಾಣಿಜ್ಯ ಸಂಕೀರ್ಣ ನಿರ್ಮಾಣದ ವೇಳೆ ಕಟ್ಟಡದ ಮೇಲೆ ಅಡಮಾನ ಮಾಡಿ ಸಾಲ ಪಡೆದಿರುತ್ತವೆ. ಅಡಮಾನದಿಂದ ಆಸ್ತಿ ಬಿಡುಗಡೆ ಮಾಡಿಕೊಳ್ಳಲೂ ಪ್ರತಿ ಫ್ಲ್ಯಾಟ್‌ಗೆ ಇ-ಖಾತಾ ಕಡ್ಡಾಯ ಇದೆ. ಇದರಿಂದ ವಹಿವಾಟಿಗೆ ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರನ್ನು ಭೇಟಿ ಮಾಡಲು ರಿಯಲ್‌ ಎಸ್ಟೇಟ್‌ ಕಂಪೆನಿಗಳ ಪ್ರತಿನಿಧಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೊಂದು ಜನಪರ ಕ್ರಮ, ಸಹಕರಿಸಿ: ಈ ನಿಯಮ ಬರುವವರೆಗೆ ಯಾವುದೇ ದಾಖಲೆಗಳಿಲ್ಲದ ಕಂದಾಯ ನಿವೇಶನಗಳಿಗೂ ಉಪ ನೋಂದಣಾಧಿಕಾರಿಗಳು ಇತರೆ ಎಂದು ನಮೂದಿಸಿ ನೋಂದಣಿ ಮಾಡಿಕೊಡುತ್ತಿದ್ದರು. ಆ ನಿವೇಶನಗಳ ಒಟ್ಟು ಭೂಮಿಯ ಆರ್‌ಟಿಸಿ ಮೂಲ ಮಾಲೀಕರ ಹೆಸರಿನಲ್ಲೇ ಇರುತ್ತಿತ್ತು. ಈ ರೀತಿ ಹಲವರು ಕಡಿಮೆ ಹಣದ ನಿವೇಶನದ ಆಸೆಗೆ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇಂತಹವರನ್ನು ರಕ್ಷಿಸಲು ಇ-ಖಾತಾ ಕಡ್ಡಾಯ ನೆರವಾಗಲಿದೆ. ಬೆಂಗಳೂರಿನಲ್ಲಿ ಮಾತ್ರ ಸ್ವಲ್ಪ ಸಮಸ್ಯೆಯಿದ್ದು, ಶೀಘ್ರವಾಗಿ ಇತ್ಯರ್ಥಗೊಳಿಸುತ್ತೇವೆ. ಸಾರ್ವಜನಿಕರು ಸಹಕರಿಸಬೇಕು ಎಂದು ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರಾದ ಕೆ.ಎ. ದಯಾನಂದ ಹೇಳಿದ್ದಾರೆ.

ಆಸ್ತಿ ಮಾರುವವರಿಗೆ ಒಂದೇ ದಿನದಲ್ಲಿ ಇ-ಖಾತಾ: ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯದಿಂದ ತುರ್ತು ಮಾರಾಟಕ್ಕೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಆಸ್ತಿ ಮಾರಾಟಕ್ಕೆ ಮುಂದಾಗುವವರಿಗೆ ಸಮರ್ಪಕ ದಾಖಲೆ ಒದಗಿಸಿದರೆ ಒಂದೇ ದಿನದಲ್ಲಿ ಇ-ಖಾತಾ ನೀಡಲು ಸೂಚಿಸಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇ-ಖಾತಾ ಕಡ್ಡಾಯದಿಂದ ಆಸ್ತಿ ನೋಂದಣಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಶುಕ್ರವಾರ ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಬೆನ್ನಲ್ಲೇ ಆಸ್ತಿ ಮಾರಾಟಕ್ಕೆ ಒಂದೇ ದಿನದಲ್ಲಿ ತುರ್ತು ಇ-ಖಾತಾ ನೀಡುವಂತೆ ಆಯುಕ್ತರು ಆದೇಶಿಸಿದ್ದಾರೆ.

ಬಾಲ್ಯ ವಿವಾಹ ನಿಷೇಧ ಎಲ್ಲಾ ಧರ್ಮಕ್ಕೆ ಅನ್ವಯ: ಸುಪ್ರೀಂಕೋರ್ಟ್ ಮಹತ್ವದ ಆದೇಶ

ತುರ್ತು ಖಾತಾಗೆ ಮಾಡಬೇಕು?: ಆನ್‌ಲೈನ್‌ https://BBMPeAsthi.karnataka.gov.in ನಲ್ಲಿ ವಾರ್ಡ್‌ವಾರು ಇ-ಖಾತಾ ಪಟ್ಟಿಯಿಂದ ನಿಮ್ಮ ಕರಡು ಇ-ಖಾತಾ ಅನ್ನು ಡೌನ್‌ಲೋಡ್‌ ಮಾಡಿ. ಅಂತಿಮ ಇ-ಖಾತಾ ಪಡೆಯಲು ಸ್ವತ್ತಿನ ಆಸ್ತಿ ತೆರಿಗೆ ಅರ್ಜಿಯ 10-ಅಂಕಿಗಳು, ಮಾಲೀಕರ ಆಧಾರ್‌ ಆಧಾರಿತ ಇ-ಕೆವೈಸಿ (ಇ-ಖಾತಾದಲ್ಲಿರುವ ಎಲ್ಲಾ ಮಾಲೀಕರು ಇ-ಕೆವೈಸಿ ಮಾಡಿರಬೇಕು), ಮಾಲೀಕರು ಆಸ್ತಿಯನ್ನು ಪಡೆದ ನೋಂದಾಯಿತ ಪತ್ರ ಸಂಖ್ಯೆ (ಕ್ರಯ/ದಾನ ಪತ್ರ ಇತ್ಯಾದಿ), ಆಸ್ತಿಯ ಋಣಭಾರ ಪತ್ರ, ಆಸ್ತಿಯ ಮಾಲೀಕರು ಆಸ್ತಿಯ ಹೊರಗೆ ಹಾಗೂ ಮುಂದೆ ನಿಂತಿರುವ ಆಸ್ತಿಯ ಛಾಯಾಚಿತ್ರ, ಬೆಸ್ಕಾಂ 10 ಅಂಕಿಯ ಅಕೌಂಟ್‌ ಐಡಿ ಅಪ್ಲೋಡ್ ಮಾಡಬೇಕು. ಬಳಿಕ ಒಂದೇ ದಿನದಲ್ಲಿ ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿ ಅವರನ್ನು ಭೇಟಿ ಮಾಡಿ ಅಂತಿಮ ಇ-ಖಾತಾ ಪಡೆಯಬಹುದು ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗೆ 1533 ಸಹಾಯವಾಣಿಗೆ ಕರೆ ಮಾಡಬಹುದು.

click me!