ಮೇಕೆದಾಟು ಆರಂಭಿಸಿ ನಾವು ಸಹಕಾರ ಕೊಡ್ತೀವಿ: ಡಿಕೆಶಿ

By Kannadaprabha NewsFirst Published Aug 1, 2021, 11:29 AM IST
Highlights

*  ರಾಜ್ಯ ಸರ್ಕಾರ ಯೋಜನೆ ಆರಂಭಿಸಲಿ 
*  ಕೆಲಸ ಆರಂಭಿಸಬೇಡಿ ಎಂದು ಯಾವುದಾದರೂ ಆದೇಶ ಇದೆಯಾ? 
*  ತಮಿಳುನಾಡಿನ ಬಿಜೆಪಿ, ಡಿಎಂಕೆ ಅಥವಾ ಬೇರೆ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ 

ಬೆಂಗಳೂರು(ಆ.01):  ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಯೋಜನೆ ಪ್ರಯೋಜನಕಾರಿಯಾಗಿದೆ. ಈ ಯೋಜನೆ ಮಾಡಬಾರದು ಎಂದು ಯಾವ ಆದೇಶವೂ ಇಲ್ಲ. ತಮಿಳುನಾಡಿನ ಬಿಜೆಪಿ, ಡಿಎಂಕೆ ಅಥವಾ ಬೇರೆ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ರಾಜ್ಯ ಸರ್ಕಾರ ಯೋಜನೆ ಆರಂಭಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯಿಂದ ಒಂದು ಎಕರೆಗೂ ನೀರು ಬಳಸಿಕೊಳ್ಳುವುದಿಲ್ಲ. ವಿದ್ಯುತ್‌ ಉತ್ಪಾದನೆ ಹಾಗೂ ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ ಸಚಿವರಾಗಿದ್ದವರು. ಅವರಿಗೆ ಈ ಯೋಜನೆ ಬಗ್ಗೆ ಅರಿವಿದೆ. ಅವರು ಯೋಜನೆ ಆರಂಭಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ತಿರುಗೇಟು ಕೊಟ್ಟ ಸಿಎಂ ಬೊಮ್ಮಾಯಿ

ಪರಿಸರ ಇಲಾಖೆ ಅನುಮತಿ ಸಿಕ್ಕಿರುವಾಗ ಬೊಮ್ಮಾಯಿ ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು, ಇತರೆ ಇಲಾಖೆಗಳ ಅನುಮತಿ ಪಡೆಯಲಿ. ಆದಷ್ಟು ಬೇಗ ಗುದ್ದಲಿ ಪೂಜೆ ಮಾಡಿ, ಕೆಲಸ ಆರಂಭಿಸಲಿ. ಬೇರೆಯವರ ಮೇಲೆ ದೂರುತ್ತಾ ಕೂರುವುದಲ್ಲ. ಕೆಲಸ ಆರಂಭಿಸಬೇಡಿ ಎಂದು ಯಾವುದಾದರೂ ಆದೇಶ ಇದೆಯಾ? ನೀವು ಕೆಲಸ ಆರಂಭಿಸಿ. ಸಹಕಾರ ನೀಡುತ್ತೇವೆ ಎಂದು ಹೇಳುತ್ತಿದ್ದರೂ ಏಕೆ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಸುದ್ದಿಗಾರರು ಪ್ರಶ್ನಿಸಿದಾಗ, ಅವರು ಸಂಪುಟ ವಿಸ್ತರಣೆ ಬಗ್ಗೆ ಏನಾದರೂ ಮಾಡಿಕೊಳ್ಳಲಿ. ಯೋಜನೆ ಬಗ್ಗೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಉತ್ತರಿಸಿದರು.
 

click me!