ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಬೇರೊಂದು ರಾಜ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿದ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ.
ಬೆಂಗಳೂರು/ಹುಬ್ಬಳ್ಳಿ(ಮಾ.16): ಕರ್ನಾಟಕ ರಾಜ್ಯಕ್ಕೆ ಸೇರಿದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲು ಮುಂದಾಗಿದ್ದು, ರಾಜ್ಯದ ಹಿತ ಕಾಯಲು ವಿಫಲವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಬೇರೊಂದು ರಾಜ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಡಿ.ಕೆ.ಶಿವಕುಮಾರ್, ನಮ್ಮ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರ ಯೋಜನೆ ಜಾರಿಗೆ ಮುಂದಾಗಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣುಮುಚ್ಚಿ ಕುಳಿತಿರುವುದು ಬಿಜೆಪಿ ಸರ್ಕಾರದ ದೌರ್ಬಲ್ಯಕ್ಕೆ ಸಾಕ್ಷಿ. ಮೊದಲಿಂದಲೂ ಬಿಜೆಪಿ ಸರ್ಕಾರ ಇಂತಹ ಮರ್ಯಾದೆಗೇಡು ನಡೆಯನ್ನೇ ಮುಂದುವರಿಸಿಕೊಂಡು ಬಂದಿದೆ. ಹೀಗಾಗಿ ಬೊಮ್ಮಾಯಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯತೆಯಾಗಲಿ, ನೈತಿಕ ಹಕ್ಕಾಗಲಿ ಇಲ್ಲ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಈ ಸರ್ಕಾರ ವಿಸರ್ಜನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹುಟ್ಟಿದ ಮನೆ, ಬಾಲ್ಯ ಸ್ನೇಹಿತರನ್ನು ಕಂಡು ಕಣ್ಣೀರಿಟ್ಟ ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಬೇರೆ ರಾಜ್ಯದ ಸರ್ಕಾರ ಆರೋಗ್ಯ ವಿಮಾ ಯೋಜನೆ ಜಾರಿಗೆ ಮುಂದಾಗಿರುವುದು ನಮ್ಮ ರಾಜ್ಯಕ್ಕೆ ಆದ ಅವಮಾನ. ನಮ್ಮ ಜನರ ಆರೋಗ್ಯ ರಕ್ಷಿಸಲು ನಮಗೆ ತಾಕತ್ತು ಇಲ್ಲವೇ? ನಮ್ಮ ನೆಲದಲ್ಲಿ ಯೋಜನೆ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರಕ್ಕೆ ಅನುಮತಿ ಕೊಟ್ಟವರು ಯಾರು? ನಮ್ಮ ಜನರ ಆರೋಗ್ಯ ರಕ್ಷಣೆಗೆ ರಾಜ್ಯ ಬಿಜೆಪಿ ಸರ್ಕಾರದ ಬಳಿ ಹಣವಿಲ್ಲವೇ? ರಾಜ್ಯ ಸರ್ಕಾರ ದಿವಾಳಿ ಆಗಿದೆಯೇ ಎಂದು ಕಿಡಿ ಕಾರಿದ್ದಾರೆ.
ಇದೇ ವೇಳೆ ನಮ್ಮ ಪ್ರಾಣ ಹೋದರೂ ಸರಿ ನಮ್ಮ ನೆಲ, ಜಲ, ಭಾಷೆ ರಕ್ಷಣೆ ಮಾಡಿಕೊಳ್ಳುತ್ತೇವೆ. ನಾವು ಗಡಿ ಭಾಗದ ಒಂದೇ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವುದಿಲ್ಲ. ಅವರ ಯೋಜನೆ ನಮ್ಮ ನೆಲದಲ್ಲಿ ಜಾರಿಗೆ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಚಿತ್ರರಂಗದವರು, ಕಲಾವಿದರು, ಬುದ್ಧಿಜೀವಿಗಳು ಧ್ವನಿ ಎತ್ತಬೇಕು ಎಂದು ಶಿವಕುಮಾರ್ ಕರೆ ನೀಡಿದ್ದಾರೆ.
ಸಿಎಂ ರಾಜೀನಾಮೆ ನೀಡಲಿ-ಸಿದ್ದು:
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ 865 ಹಳ್ಳಿಗಳಿಗಾಗಿ ಆರೋಗ್ಯ ವಿಮೆ ಜಾರಿಗೊಳಿಸುವುದಾಗಿ ಮಹಾರಾಷ್ಟ್ರದ ಸಚಿವರೊಬ್ಬರು ಹೇಳಿದ್ದಾರೆ. ನಮ್ಮ ರಾಜ್ಯದ ಜನರಿಗೆ ಯೋಜನೆ ಘೋಷಿಸಲು ಅವರಾರಯರು? ಇಷ್ಟಾದರೂ ಸುಮ್ಮನಿರುವ ನಮ್ಮ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮಹಾರಾಷ್ಟ್ರ ಸರ್ಕಾರವನ್ನು ಕೇಂದ್ರ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿಚಾರಕ್ಕೆ ಸಂಬಂಧಿಸಿ ಮಹಾಜನ ವರದಿಯೇ ಅಂತಿಮ. ಇಷ್ಟಾದರೂ ಗಡಿ ವಿಷಯವಾಗಿ ಮಹಾರಾಷ್ಟ್ರ ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದೆ. ಮಹಾರಾಷ್ಟ್ರದಲ್ಲಿನ ಕೆಲವೊಂದಿಷ್ಟುಹಳ್ಳಿಗಳು ಸಹ ಕರ್ನಾಟಕ ಸೇರುತ್ತೇವೆ ಎಂದು ಹೇಳುತ್ತಿವೆ. ಹಾಗಂತ ನಾವು ಅಲ್ಲಿನ ಜನರಿಗಾಗಿ ಯೋಜನೆಗಳನ್ನು ಘೋಷಿಸಿದರೆ ನಡೆಯುತ್ತದೆಯೇ? ಇದು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸವಲ್ಲವೇ? ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸತ್ತಿವೆಯೇ? ಎಂದು ಪ್ರಶ್ನಿಸಿದರು.
ಕರ್ನಾಟಕದ ಒಂದಿಂಚೂ ಜಾಗ ಕೊಡಲು ಸಾಧ್ಯವೇ ಇಲ್ಲ. ಇದನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಸ್ಪಷ್ಟಪಡಿಸಬೇಕು. ನಾವು ಶಾಂತವಾಗಿದ್ದೇವೆ ಎಂದರೆ ಅಸಹಾಯಕತೆ ಅಂತ ಅರ್ಥವಲ್ಲ. ಇದನ್ನು ಕರ್ನಾಟಕದ ಜನತೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ಸಂದೇಶ ನೀಡಿದರು
ಕಲ್ಯಾಣನಗರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೆ ಸಿದ್ಧ: ಧಾರವಾಡಕ್ಕೆ ಮತ್ತೊಮ್ಮೆ ಮೋದಿ ಬರ್ತಾರಾ?
ಇಂದು ಬೆಳಗಾವಿಗೆ ಹೋಗಿ ಹೋರಾಟದ ಬಗ್ಗೆ ಚರ್ಚೆ: ಡಿಕೆಶಿ
ಇಷ್ಟೆಲ್ಲಾ ಆಗುತ್ತಿದ್ದರೂ ಕೇಂದ್ರ ಗೃಹ ಸಚಿವರು ಸ್ಪಂದಿಸುತ್ತಿಲ್ಲ. ಬೇರೆ ರಾಜ್ಯದವರು ನಮ್ಮ ರಾಜ್ಯದಲ್ಲಿ ಅವರ ಯೋಜನೆ ಜಾರಿ ಮಾಡಲು ಮುಂದಾಗಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಾಯಿ ಮುಚ್ಚಿ ಕುಳಿತಿವೆ. ಮಹಾರಾಷ್ಟ್ರ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ. ನಾನು ನಾಳೆಯೇ (ಗುರುವಾರ) ಬೆಳಗಾವಿಗೆ ಹೋಗಿ ಅಲ್ಲಿನ ನಾಯಕರ ಜತೆ ಚರ್ಚೆ ಮಾಡುತ್ತೇನೆ. ನಮ್ಮ ನೆಲ ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಏನಿದು ವಿವಾದ?
ಕರ್ನಾಟಕದ 865 ಗ್ರಾಮಗಳು ತನಗೇ ಸೇರಿದ್ದು ಎಂದು ವಾದಿಸುತ್ತಿರುವ ಮಹಾರಾಷ್ಟ್ರ ಸರ್ಕಾರ, ಇಲ್ಲಿನ ಜನರಿಗೆ ‘ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆ’ಯನ್ನು 54 ಕೋಟಿ ರು. ವೆಚ್ಚದಲ್ಲಿ ಜಾರಿಗೆ ತರಲು ಮಾ.2ರಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ.