ಸಿದ್ಧಗಂಗಾ ಶ್ರೀಗೆ ಭಾರತರತ್ನ ಸಿಗದ್ದಕ್ಕೆ ಕಾಂಗ್ರೆಸ್‌ ಆಕ್ರೋಶ

By Web DeskFirst Published Jan 27, 2019, 12:39 PM IST
Highlights

ಸಿದ್ಧಗಂಗಾ ಶ್ರೀಗೆ ಭಾರತರತ್ನ ಸಿಗದ್ದಕ್ಕೆ ಕಾಂಗ್ರೆಸ್‌ ಆಕ್ರೋಶ| ಪಾರ್ಥಿವ ಶರೀರದ ಬಳಿ ಇರುವ ಬದಲು ಒತ್ತಡ ಹೇರಬೇಕಿತ್ತು| ಯಡಿಯೂರಪ್ಪಗೆ ಸಿದ್ದರಾಮಯ್ಯ ಪರೋಕ್ಷವಾಗಿ ಟಾಂಗ್‌

ಬೆಂಗಳೂರು[ಜ.27]: ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ‘ಭಾರತ ರತ್ನ’ ನೀಡದ ಕೇಂದ್ರ ಸರ್ಕಾರದ ನಿಲುವಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನೇಕ ಸಚಿವರು ಸೇರಿ ಹಲವು ಕಾಂಗ್ರೆಸ್‌ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಅನೇಕ ಬಾರಿ ಈ ಕುರಿತು ಮನವಿ ಸಲ್ಲಿಸಿದರೂ ಕೇಂದ್ರ ಸರ್ಕಾರ ‘ನಡೆದಾಡುವ ದೇವರನ್ನು’ ಭಾರತ ರತ್ನಕ್ಕೆ ಪರಿಗಣಿಸದಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಶ್ರೀಗಳಿಗೆ ಭಾರತರತ್ನ ನೀಡದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ‘ಶ್ರೀಗಳ ಪಾರ್ಥಿವ ಶರೀರದ ಮುಂದೆ ಕೂರುವ ಬದಲು, ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು’ ಎಂದು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಪರೋಕ್ಷ ವಾಗ್ದಾಳಿ ನಡೆಸಿದರು.

ಸಿದ್ಧಗಂಗಾ ಶ್ರೀಗಳ ಸಾಧನೆಗೆ ಭಾರತರತ್ನ ನೀಡಬೇಕಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಶ್ರೀಗಳಿಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. ಈ ಬಾರಿಯಾದರೂ ಶ್ರೀಗಳಿಗೆ ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ನೀಡಬೇಕಿತ್ತು. ಭಾರತರತ್ನ ನೀಡಿದ್ದರೆ ಅದರ ಘನತೆ ಹೆಚ್ಚಾಗುತ್ತಿತ್ತು. ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರಿಗೆ ಭಾರತರತ್ನ ನೀಡಿರುವುದು ಸ್ವಾಗತಾರ್ಹ. ಆದರೆ ಸಿದ್ಧಗಂಗಾ ಶ್ರೀಗಳಿಗೆ ಏಕೆ ನೀಡಲಿಲ್ಲ ಎಂಬುದು ಗೊತ್ತಿಲ್ಲ. ಶ್ರೀಗಳ ಪಾರ್ಥಿವ ಶರೀರದ ಮುಂದೆ ದಿನವಿಡೀ ಕೂರುವುದು ಗೌರವವಲ್ಲ. ಅವರಿಗೆ ಭಾರತರತ್ನ ಕೊಡಿಸಲೂ ಸಹ ಪ್ರಯತ್ನ ಮಾಡಬೇಕಿತ್ತು ಎಂದರು.

ಎಂಬಿಪಾ ಅಸಮಾಧಾನ: ಗೃಹ ಸಚಿವ ಎಂ.ಬಿ. ಪಾಟೀಲ್‌ ಅವರು, ಕೇಂದ್ರದ ಪದ್ಮ ವಿಭೂಷಣ, ಕರ್ನಾಟಕ ಸರ್ಕಾರದ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜೀವಮಾನ ಸೇವೆಗೆ ಕೇಂದ್ರ ಸರ್ಕಾರವೇ ಸ್ವಯಂಪ್ರೇರಿತವಾಗಿ ಭಾರತರತ್ನ ನೀಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಮುಂದಾಗದಿರುವುದು ತೀವ್ರ ಬೇಸರ ತಂದಿದೆ ಎಂದು ಹೇಳಿದ್ದಾರೆ.

ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ಅಸಡ್ಡೆ ಮುಂದುವರೆಸಿರುವುದಲ್ಲದೆ ಶ್ರೀಗಳಿಗೆ 2015ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತ ಕಾರಣ 5 ವರ್ಷ ಮತ್ತೊಂದು ನಾಗರಿಕ ಪ್ರಶಸ್ತಿ ನೀಡುವಂತಿಲ್ಲ ಎಂಬ ನಿಯಮವನ್ನು ಮುಂದಿಟ್ಟು ಸಮರ್ಥನೆಗೆ ಇಳಿದಿದ್ದಾರೆ. ಇದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಕೂಡ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲು ವಿಧಾನಸಭೆಯಲ್ಲೇ ನಿರ್ಣಯ ಮಾಡುತ್ತೇವೆ. ಈಗಾಗಲೇ ಸ್ವಾಮೀಜಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿಗಳು ಮತ್ತು ಸಂಸದರು ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ಕೇಂದ್ರದ ಮೇಲೆ ಮತ್ತಷ್ಟುಒತ್ತಡ ಹೇರುತ್ತೇವೆ ಎಂದು ಶನಿವಾರ ರಾಮನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಖರ್ಗೆಯೂ ಅಸಮಾಧಾನ:

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಸಿಗಬೇಕೆಂಬ ಕೂಗಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ದನಿಗೂಡಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘ ಶ್ರೀಗಳಿಗೆ ಭಾರತರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿತ್ತು. ಈ ಹಿಂದೆಯೂ ರಾಜ್ಯದ ಸಂಸದರ ನಿಯೋಗ ಮನವಿ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಯಾರಿಗೆ ಪುರಸ್ಕಾರ ನೀಡಬೇಕಿತ್ತೋ ಅವರಿಗೆ ನೀಡದೆ, ತಮಗೆ ಬೇಕಾದ ವ್ಯಕ್ತಿಗಳಿಗೆ ಪುರಸ್ಕಾರ ನೀಡಲಾಗಿದೆ. ಇದು ಬೇಸರ ತಂದಿದೆ. ಶ್ರೀಗಳು ಶಿಕ್ಷಣ, ದಾಸೋಹ ಸೇರಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಅದು ಮೋದಿ ಅವರ ಲೆಕ್ಕಕ್ಕೇ ಬಂದಿಲ್ಲ. ಗಾಯಕರಿಗೆ, ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳವರಿಗೆ ಪ್ರಶಸ್ತಿ ನೀಡಿದ್ದಾರೆ ಎಂದು ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಸಚಿವರಾದ ರಾಜಶೇಖರ ಪಾಟೀಲ, ವೆಂಕಟರಾವ್‌ ನಾಡಗೌಡ, ಜಯಮಾಲಾ ಸೇರಿದಂತೆ ಹಲವು ಸಚಿವರು ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಭವನದ ಎದುರು ಸತ್ಯಾಗ್ರಹ:

ಶಿವೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರ ಭಾರತರತ್ನ ಘೋಷಿಸದೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗೌರವ ತೋರಿದೆ. ಇದನ್ನು ಖಂಡಿಸಿ ಕನ್ನಡಪರ ಒಕ್ಕೂಟದ ವಿವಿಧ ಸಂಘಟನೆಗಳಿಂದ ಭಾನುವಾರ ರಾಜಭವನದ ಎದುರು ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದ್ದಾರೆ.

ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮೆಜಸ್ಟಿಕ್‌ನಲ್ಲಿ ಪ್ರತಿಭಟನೆ ನಡೆಸಿದ ಅವರು, ಶಿವಕುಮಾರ ಸ್ವಾಮೀಜಿ ಅವರಿಗೆ ಪ್ರಶಸ್ತಿ ನೀಡದೆ ಕರ್ನಾಟಕಕ್ಕೆ ಅಗೌರವ ತೋರಿರುವ ಬಗ್ಗೆಯೂ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

click me!