
ಬೆಂಗಳೂರು (ಆ.19): ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ (B. Nagendra) ಅವರ ಸುತ್ತ ಕಾನೂನಿನ ಉರುಳು ಮತ್ತಷ್ಟು ಬಿಗಿಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ (CID), ಇ.ಡಿ (ED) ಹಾಗೂ ಸಿಬಿಐ (CBI) ಮೂರೂ ತನಿಖಾ ಸಂಸ್ಥೆಗಳು ತಮ್ಮ ತನಿಖೆಯನ್ನು ಪೂರ್ಣಗೊಳಿಸಿದ್ದು, ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ (Chargesheet) ಬೆಚ್ಚಿಬೀಳಿಸುವ ಅಂಶಗಳು ಬಹಿರಂಗಗೊಂಡಿವೆ.
ಕಳೆದ ವರ್ಷ ಇ.ಡಿ ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿ, ರಾಜ್ಯಪಾಲರಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆದಿದ್ದರು. ಇದೀಗ ಎರಡು ತಿಂಗಳ ಹಿಂದೆ ಸಿಬಿಐ ಕೂಡ ಚಾರ್ಜ್‌ಶೀಟ್ ಸಲ್ಲಿಸಿದ್ದು, ಸದ್ಯ ಬಿ. ನಾಗೇಂದ್ರ ವಿರುದ್ಧ ವಿಚಾರಣೆಗೆ ರಾಜ್ಯಪಾಲರ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ.
ಸಿಬಿಐ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಸಚಿವ ಬಿ. ನಾಗೇಂದ್ರ ಅವರೊಂದಿಗೆ ಒಟ್ಟು 13 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ:
₹89.63 ಕೋಟಿ ಅಕ್ರಮ ವರ್ಗಾವಣೆ: ನಿಗಮಕ್ಕೆ ಸೇರಿದ ಬರೋಬ್ಬರಿ ₹89.63 ಕೋಟಿ ಸಾರ್ವಜನಿಕರ ಹಣವನ್ನು ನಕಲಿ ಚೆಕ್‌ಗಳು ಮತ್ತು ಆರ್‌ಟಿಜಿಎಸ್ (RTGS) ಮೂಲಕ ಅಕ್ರಮವಾಗಿ ವರ್ಗಾಯಿಸಲಾಗಿದೆ.
600 ಬ್ಯಾಂಕ್ ಖಾತೆಗಳ ಜಾಲ: ತನಿಖಾಧಿಕಾರಿಗಳ ಕಣ್ಣು ತಪ್ಪಿಸಲು ಈ ಬೃಹತ್ ಮೊತ್ತವನ್ನು ಹೈದರಾಬಾದ್ ಮತ್ತು ಇತರ ನಗರಗಳ ಸುಮಾರು 600 ನಕಲಿ ಹಾಗೂ ಬೇನಾಮಿ ಖಾತೆಗಳಿಗೆ ಹಂಚಿಕೆ ಮಾಡಲಾಗಿತ್ತು.
ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆ: ಅಕ್ರಮವಾಗಿ ಲೂಟಿ ಮಾಡಿದ ಹಣದ ಬಹುಪಾಲು ಮೊತ್ತವನ್ನು ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಚುನಾವಣೆಯ ವೆಚ್ಚಕ್ಕಾಗಿ ಮತ್ತು ಮತದಾರರಿಗೆ ಹಂಚಲು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಿಬಿಐ ಉಲ್ಲೇಖಿಸಿದೆ.
ಕಾರು, ಬೆಳ್ಳಿ ಖರೀದಿ: ಹಣವನ್ನು ನಗದಾಗಿ ಡ್ರಾ ಮಾಡಿ ಐಷಾರಾಮಿ ವಾಹನಗಳು, ಅಪಾರ ಪ್ರಮಾಣದ ಬೆಳ್ಳಿ ಆಭರಣಗಳು ಮತ್ತು ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ತನಿಖೆಯಲ್ಲಿ ಸಾಬೀತಾಗಿದೆ.
ಇದುವರೆಗೂ ಸಿಬಿಐ 3 ಚಾರ್ಜ್ ಶೀಟ್ ಸಲ್ಲಿಸಿದೆ. ಆದರೆ, ಇದೀಗ ಸಚಿವ ಬಿ. ನಾಗೇಂದ್ರ ವಿರುದ್ಧ ಚಾರ್ಜ್ ಫ್ರೇಮ್ ಮಾಡಲು ರಾಜ್ಯಪಾಲರ ಅನುಮತಿ ಕೋರಲಾಗಿದೆ. ಪ್ರಸ್ತುತ ನಾಗೇಂದ್ರ ಅವರು ಹಾಲಿ ಸಚಿವರಾಗಿದ್ದು, ಜನಪ್ರತಿನಿಧಿಯಾಗಿ ಸೇವೆ ಮಾಡುತ್ತಿರುವುದರಿಂದ ಸೆಕ್ಷನ್ 19ರ ಅಡಿಯಲ್ಲಿ ಗವರ್ನರ್ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ 3 ದಿನದ ಹಿಂದೆಯೇ ಗವರ್ನರ್ ಗೆ ಪತ್ರ ಬರೆದಿರುವ ಸಿಬಿಐ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಸಿಬಿಐ ಸಲ್ಲಿಸಿರುವ ಪ್ರಾಸಿಕ್ಯೂಷನ್ ಅನುಮತಿಗೆ ಗ್ರೀನ್ ಸಿಗ್ನಲ್ ನೀಡಿದರೆ, ಬಿ. ನಾಗೇಂದ್ರ ಅವರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ಅಧಿಕೃತ ವಿಚಾರಣೆ ಆರಂಭವಾಗಲಿದ್ದು, ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗುವುದು ನಿಶ್ಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ