ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಲಿಂಗಪ್ಪ ಸುದ್ದಿಗೋಷ್ಠಿ! ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ತುಂಬಾ ವಿಶೇಷ! ಮಗನಿಂದ ದುರಂತ ನಾಯಕನ ಪಾತ್ರ ಎಂದ ಲಿಂಗಪ್ಪ! ನನ್ನ ಮನೆಯಲ್ಲಿ ಇವತ್ತಿಗೂ ಸೂತಕದ ಛಾಯೆ ಇದೆ! ಸಾವಿರಾರು ಜನರಿಗೆ ಅವನಿಂದ ಅವಮಾನ, ನಿರಾಶೆಯಾಗಿದೆ! ಸಾಯುವವರೆಗೂ ಮಗನೊಂದಿಗೆ ಮಾತಾಡಲ್ಲ ಎಂದ ಲಿಂಗಪ್ಪ
ರಾಮನಗರ(ನ.7): ತಮ್ಮ ಮಗ ಪಕ್ಷದ ಟಿಕೆಟ್ ಪಡೆದು ಕಡೆ ಗಳಿಗೆಯಲ್ಲಿ ಪಲಾಯನ ಮಾಡಿದ್ದಕ್ಕಾಗಿ ತಾವು ಬಿಜೆಪಿ ಕ್ಷಮೆ ಕೋರುವುದಾಗಿ ಎಂಎಲ್ ಸಿ ಸಿಎಂ ಲಿಂಗಪ್ಪ ಹೇಳಿದ್ದಾರೆ.
ರಾಮನಗರದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಲಿಂಗಪ್ಪ, ಈ ಬಾರಿಯ ಉಪ ಚುನಾವಣೆಯಲ್ಲಿ ತಮ್ಮ ಮಗ ಎಲ್. ಚಂದ್ರಶೇಖರ್ ದುರಂತ ನಾಯಕನ ಪಾತ್ರ ಮಾಡಿದ್ದಾನೆ ಎಂದು ಖೇದ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ತೀವ್ರ ಭಾವುಕರಾದಂತೆ ಕಂಡು ಬಂದ ಲಿಂಗಪ್ಪ, ಮಗ ಮಾಡಿದ ತಪ್ಪಿಗೆ ನಾನು ಜನತೆಯಲ್ಲಿ ಕ್ಷಮೆ ಕೋರುತ್ತೇನೆ ಎಂದು ಎದ್ದು ನಿಂತು ಕೈ ಮುಗಿದರು.
ಮಗ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದ್ದು ಡಿಕೆ ಬದ್ರರ್ಸ್ ಕುತಂತ್ರ ಎಂದ ಲಿಂಗಪ್ಪ, ತಾವು ಬದುಕಿರುವವರೆಗೂ ತಮ್ಮ ಮಗನೊಂದಿಗೆ ಮಾತನಾಡುವುದಿಲ್ಲ ಎಂದು ವಾಗ್ದಾನ ಮಾಡಿದರು.
ಇನ್ನು ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ದಾಖಲೆ ಮತಗಳ ಅಂತರದಿಂದ ಗೆದ್ದಿರುವ ಕುರಿತು ಪ್ರತಿಕ್ರಿಯೆ ನೀಡಿದ ಲಿಂಗಪ್ಪ, ರೇಸ್ ನಲ್ಲಿ ಅವರೊಬ್ಬರೇ ಇದ್ದಿದ್ದರಿಂದ ಈ ಗೆಲುವು ದೊರೆತಿದೆ ಎಂದು ಲೇವಡಿ ಮಾಡಿದರು.