
ನವದೆಹಲಿ(ಫೆ.14): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಹಲವು ಸ್ಥಳಗಳಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಸೇರಿ ಇಬ್ಬರ ಆಸ್ತಿಪಾಸ್ತಿಗಳಲ್ಲಿ ಶೋಧ ನಡೆಸಿದ ವೇಳೆ 31 ಲಕ್ಷ ರು. ನಗದು ಹಣ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ರೆಡ್ಡಿ ಅವರು ವಿಧಾನಸಭೆ ಚುನಾವಣೆಗೂ ಮುನ್ನ 42 ಕೋಟಿ ರು. ಅಕ್ರಮ ಹಣ ಸಂಗ್ರಹಿಸಿ ಬಳಕೆ ಮಾಡಿದ್ದರು ಎಂದು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೇಳಿದೆ. ಇತ್ತೀಚೆಗೆ ಬಳ್ಳಾರಿ ಹಾಗೂ ಆಂಧ್ರದಲ್ಲಿ ರೆಡ್ಡಿ ಆಸ್ತಿಗಳ ಮೇಲೆ ಇ.ಡಿ. ದಾಳಿ ಮಾಡಿತ್ತು. ಅದರ ಅಧಿಕೃತ ಮಾಹಿತಿಯನ್ನು ಮಂಗಳವಾರ ಅದು ಪ್ರಕಟಿಸಿದೆ.
ಸೂರ್ಯ ನಾರಾಯಣ ರೆಡ್ಡಿ ಮತ್ತು (ಕಾಂಗ್ರೆಸ್ ಶಾಸಕ) ಭರತ್ ರೆಡ್ಡಿ ವಿರುದ್ಧ ಕರ್ನಾಟಕದ ಬಳ್ಳಾರಿಯಲ್ಲಿ 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.10 ರಂದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸೂರ್ಯನಾರಾಯಣ ರೆಡ್ಡಿ ಅವರು ಭರತ್ ರೆಡ್ಡಿಯ ತಂದೆ.
ಬಳ್ಳಾರಿ: ಸಚಿವ ನಾಗೇಂದ್ರ ವರ್ಸಸ್ ಶಾಸಕ ಭರತ್ ರೆಡ್ಡಿ?, ಮುಸಕಿನ ಗುದ್ದಾಟದ ಮಧ್ಯೆ ಚುನಾವಣೆ ಮುಂದೂಡಿಕೆ
'ತನಿಖೆ ವೇಳೆ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಭರತ್ ರೆಡ್ಡಿ ಸುಮಾರು 42 ಕೋಟಿ ರು. ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣವನ್ನು ಕಾನೂನುಬಾಹಿರ ವಹಿವಾಟುಗಳಿಗೆ ಬಳಸಿದ್ದಾರೆ ಎಂಬುದನ್ನು ಸೂಚಿಸುವ ಅನೇಕ ಪುರಾವೆಗಳು ಕಾರ್ಯಾಚರಣೆಯಲ್ಲಿ ದೊರೆತಿವೆ.
31 ಲಕ್ಷ ರು. ನಗದು ಹಣದೊಂದಿಗೆ, ಆರೋಪಿಗಳ ವಿರುದ್ಧದ ಆರೋಪ ಸಾಬೀತು ಮಾಡುವಂತಹ ಅನೇಕ ಸಾಕ್ಷಿಗಳು, ಸ್ಥಿರಾಸ್ತಿ ಮತ್ತು ಚರಾಸ್ಥಿಗಳ ವಿವರಗಳು ಮತ್ತು ಕೆಲ ನಿರ್ಣಾಯಕ ವಿವರಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ಇ.ಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಭರತ್ ರೆಡ್ಡಿ ಅವರ ಸಹಾಯಕರಾದ ರತ್ನ ಬಾಬು ಹಾಗೂ ಇತರರು ಅಕ್ರಮ ವಹಿವಾಟಿಗೆ ಗಣನೀಯ ಪ್ರಮಾಣದಲ್ಲಿ ಹಣವನ್ನು ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಭರತ್ ರೆಡ್ಡಿ ಸಹೋದರ ಶರತ್ ರೆಡ್ಡಿ, ವಿದೇಶಿ ಮೂಲದ ಸಂಸ್ಥೆಗಳಲ್ಲಿ ಅಘೋಷಿತ ಹೂಡಿಕೆ ಮಾಡಿರುವುದು ಹಾಗೂ ಬೇನಾಮಿ ಆಸ್ತಿಯನ್ನು ಹೊಂದಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿಗಳು ಸಂಬಂಧಿಕರಿಂದ ಅನುಮಾನಾಸ್ಪದವಾಗಿ ಸಾಲ ಪಡೆದಿರುವುದು ಹಾಗೂ ಸಂಬಂಧಿಗಳಿಗೆ ತಿಳಿಯದೇ ಅವರ ಬ್ಯಾಂಕ್ ಖಾತೆ ಬಳಕೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ