
ಬೆಂಗಳೂರು[ಜ.12]: ಬಹು ಭಾಷಾ ನಟ ಪ್ರಕಾಶ್ ರೈ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದರೂ, ಅವರಿಗೆ ಕಾಂಗ್ರೆಸ್ನ ಬೆಂಬಲ ಈ ಕ್ಷೇತ್ರದಲ್ಲಿ ದೊರೆಯುವ ಯಾವುದೇ ಸಾಧ್ಯತೆಯಿಲ್ಲ.
ಏಕೆಂದರೆ, ಕಾಂಗ್ರೆಸ್ ಈ ಬಾರಿ ತಾನು ಗೆಲ್ಲುವ ಸಾಧ್ಯತೆ ಹೊಂದಿರುವ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರವೂ ಒಂದು ಎಂದು ಭಾವಿಸಿದೆ. ಅಷ್ಟೇ ಅಲ್ಲ, ಬಿಜೆಪಿಯ ಪಿ.ಸಿ.ಮೋಹನ್ ಹಾಲಿ ಸಂಸದರಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಘಟಾನುಘಟಿಗಳು ಸಜ್ಜಾಗಿದ್ದಾರೆ.
ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್‌ಗೆ ಭಾರಿ ಪೈಪೋಟಿಯಿದೆ. ಮಾಜಿ ಸಚಿವ ಹಾಗೂ ಹಾಲಿ ಶಾಸಕ ರೋಷನ್ ಬೇಗ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲು ತೀವ್ರ ಪೈಪೋಟಿ ನಡೆಸಿದ್ದರೆ, ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಕೂಡ ಭರ್ಜರಿ ಲಾಬಿ ನಡೆಸಿದ್ದಾರೆ. ಜತೆಗೆ, ಹೈಕಮಾಂಡ್ನಲ್ಲಿ ಪ್ರಭಾವಿಯಾಗಿರುವ ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್ ಅವರು ತೀವ್ರ ಕೂಡ ಲಾಬಿಯಲ್ಲಿ ಹಿಂದೆ ಬಿದ್ದಿಲ್ಲ.
ಇವರೆಲ್ಲರ ನಡುವೆ, ನೇರವಾಗಿ ಸೋನಿಯಾ ಗಾಂಧಿ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ ಅವರು ಇದೇ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ. ಇಷ್ಟೊಂದು ಮಂದಿ ಪ್ರಭಾವಿಗಳು ಟಿಕೆಟ್ಗಾಗಿ ಪೈಪೋಟಿ ನಡೆಸಿರುವ ಈ ಕ್ಷೇತ್ರವನ್ನು ಕಾಂಗ್ರೆಸ್ ಬೇರೆ ಯಾರಿಗೂ ಬಿಟ್ಟುಕೊಡುವ ಸಾಧ್ಯತೆಯೇ ಇಲ್ಲ ಎಂದು ಮೂಲಗಳು ಹೇಳುತ್ತವೆ.
ಇಷ್ಟಕ್ಕೂ ಈ ಕ್ಷೇತ್ರ ಕಾಂಗ್ರೆಸ್ ಗೆಲ್ಲುವ ನೆಚ್ಚಿನ ಕ್ಷೇತ್ರಗಳ ಪೈಕಿಯೊಂದು. ಮುಸ್ಲಿಮರು ಹಾಗೂ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ, ಶಿವಾಜಿನಗರ, ಸರ್ವಜ್ಞ ನಗರ, ಚಾಮರಾಜಪೇಟೆ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಮತ್ತು ಗೆದ್ದಿರುವ ಈ ಐವರಲ್ಲಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೆ, ಕೆ.ಜೆ. ಜಾಜ್‌ರ್ ಹಾಗೂ ಜಮೀರ್ ಅಹ್ಮದ್ ಸಚಿವರಾಗಿದ್ದಾರೆ. ಇನ್ನು ಶಾಂತಿನಗರದ ಎನ್.ಎ. ಹ್ಯಾರಿಸ್ ಬಿಎಂಟಿಸಿ ಅಧ್ಯಕ್ಷರಾಗಿದ್ದಾರೆ. ಇಂತಹ ಪ್ರಭಾವಿಗಳನ್ನು ಹೊಂದಿರುವ ಕಾರಣಕ್ಕೆ ಈ ಬಾರಿ ಕ್ಷೇತ್ರದಲ್ಲಿ ಗೆಲ್ಲುವ ನಂಬಿಕೆ ಕಾಂಗ್ರೆಸ್ನದ್ದು.
ಹೀಗಾಗಿಯೇ ಘಟಾನುಘಟಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಇಂತಹ ಪರಿಸ್ಥಿತಿಯಿರುವಾಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಕಾಶ್ ರೈ ಅವರಿಗೆ ಕಾಂಗ್ರೆಸ್ ಈ ಕ್ಷೇತ್ರವನ್ನು ಬಿಟ್ಟುಕೊಡುವ ಅಥವಾ ಪರೋಕ್ಷವಾಗಿ ಬೆಂಬಲ ನೀಡುವ ಯಾವುದೇ ಸಾಧ್ಯತೆ ಇಲ್ಲ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ