ವಿಶೇಷ ಪ್ಯಾಕೇಜ್: ಸಿಎಂಗೆ ಪ್ರತಿಪಕ್ಷ ನಾಯಕರ ಶ್ಲಾಘನೆ| ಆರ್ಥಿಕ ಸಂಕಷ್ಟನಡುವೆ ದೇಶಕ್ಕೇ ಮಾದರಿ ಆಗುವ ಕೆಲಸ| ಸಿದ್ದು, ಡಿಕೆಶಿ, ಎಸ್.ಆರ್.ಪಾಟೀಲ್, ಕೋಡಿಹಳ್ಳಿ ಹೊಗಳಿಕೆ
ಬೆಂಗಳೂರು(ಮೇ.09): ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿರುವ ವಿವಿಧ ವರ್ಗಗಳ ಜನರಿಗೆ ನೆರವು ನೀಡುವುದಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಿರುವುದನ್ನು ಪ್ರತಿಪಕ್ಷಗಳು ಮುಕ್ತ ಕಂಠದಿಂದ ಪ್ರಶಂಸಿಸಿವೆ.
ಶುಕ್ರವಾರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ಒಳಗೊಂಡ ನಿಯೋಗವು ಭೇಟಿ ಮಾಡಿ ಚರ್ಚೆ ನಡೆಸುವ ವೇಳೆ ಮಾತನಾಡಿದ ಮುಖಂಡರು ಯಡಿಯೂರಪ್ಪ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು ಎಂದು ತಿಳಿದುಬಂದಿದೆ.
undefined
ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕತೆ ತೀವ್ರ ದಯನೀಯ ಪರಿಸ್ಥಿತಿಯಲ್ಲಿದೆ. ಆದರೂ 1610 ಕೋಟಿ ರು. ವಿಶೇಷ ಪ್ಯಾಕೇಜ್ ನೀಡುವ ಮೂಲಕ ದೇಶದಲ್ಲೇ ಮಾದರಿ ಕೆಲಸ ಮಾಡಿದ್ದೀರಿ ಎಂದು ನಿಯೋಗದಲ್ಲಿದ್ದ ಬಹುತೇಕ ಎಲ್ಲ ಮುಖಂಡರೂ ಮೆಚ್ಚುಗೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಆರಂಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ದೇಶ ತೀವ್ರ ಸಂಕಷ್ಟಕಾಲದಲ್ಲಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಲಾಕ್‌ಡೌನ್‌ನಿಂದ ಲಕ್ಷಾಂತರ ಜನರು ತೊಂದರೆಗೆ ಒಳಗಾಗಿದ್ದಾರೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದರೂ ಹಲವು ಶ್ರಮಿಕ ವರ್ಗಗಳ ನೆರವಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸಿರುವುದು ನಿಜಕ್ಕೂ ಶ್ಲಾಘನೀಯವಾದದ್ದು. ಇದಕ್ಕಾಗಿ ನಾನು ಹೃದಯ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.
ದೇಶದ ಇತರ ರಾಜ್ಯಗಳು ಮಾಡದ ಪರಿಹಾರದ ನೆರವನ್ನು ನೀವು ಮಾಡಿದ್ದೀರಿ. ಇನ್ನಷ್ಟುವರ್ಗಗಳ ಜನರು ನೆರವಿಗಾಗಿ ಕಾದು ಕುಳಿತಿದ್ದಾರೆ. ಅವರಿಗೆ ತಕ್ಷಣ ನೆರವು ಘೋಷಿಸಬೇಕು ಎಂದು ಮನವಿ ಮಾಡಿದರು.
ಅದೇ ರೀತಿ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಮಾತನಾಡಿ, ಬಸವಣ್ಣನವರು ಹೇಳಿದಂತೆ ಕಾಯಕ ಜೀವಿಗಳಿಗೆ ನೆರವು ನೀಡುವ ಸಂಬಂಧ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ನೀವು ಅಭಿನವ ಬಸವಣ್ಣನಂತೆ ಆಗಿದ್ದೀರಿ ಎಂದು ಪ್ರಶಂಸಿಸಿದರು ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ 60000 ಗಡಿಗೆ ಕೊರೋನಾ ಸೋಂಕಿತರು!
ಕೊರೋನಾ ಸೋಂಕು ನಿಯಂತ್ರಣ ಮತ್ತು ಲಾಕ್‌ಡೌನ್‌ನಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಇದುವರೆಗೆ ಸರ್ಕಾರ ಸರಿಯಾದ ಹಾದಿಯಲ್ಲಿಯೇ ನಿಭಾಯಿಸಿಕೊಂಡು ಬಂದಿದೆ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಒಳ್ಳೆಯ ಕೆಲಸ. ಇನ್ನೂ ಹಲವು ವರ್ಗಗಳ ಶ್ರಮಿಕರು ಪರಿಹಾರದ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದಾರೆ. ಅವರೆಲ್ಲರಿಗೂ ಸಾಧ್ಯವಾದಷ್ಟುನೆರವು ಘೋಷಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು ಎನ್ನಲಾಗಿದೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ರೈತರು ಬೆಳೆದ ಬೆಳೆಗಳ ಸಾಗಣೆಗೆ ವ್ಯವಸ್ಥೆ ಮಾಡಿಕೊಟ್ಟಿರುವುದು ಮೆಚ್ಚುವಂಥದ್ದು. ಹೂ ಬೆಳೆಗಾರರಿಗೆ ಪ್ಯಾಕೇಜ್‌ನಲ್ಲಿ ನೆರವು ಘೋಷಿಸಿರುವುದು ಅಭಿನಂದನೀಯ. ಆದರೆ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತಾಗಬೇಕು. ಜೊತೆಗೆ ರೈತರಿಗೆ ಹೊಸ ಸಾಲ ಕೂಡ ಸಿಗುವಂತಾಗಬೇಕು ಎಂದು ಸಭೆಯಲ್ಲಿ ಹೇಳಿದ್ದಾಗಿ ಮೂಲಗಳು ತಿಳಿಸಿವೆ.