ಅಕ್ರಮ ಸಿಗರೆಟ್ ಮಾರಾಟ: ಎಸಿಪಿಗೆ 62 ಲಕ್ಷ ಲಂಚ!

By Kannadaprabha NewsFirst Published May 9, 2020, 2:03 PM IST
Highlights

ಸಿಗರೆಟ್‌ ಡೀಲ್‌: ಎಸಿಪಿಗೆ 62 ಲಕ್ಷ ಲಂಚ!| ಅಕ್ರಮವಾಗಿ ಸಿಗರೆಟ್‌ ಮಾರಲು ತೊಂದರೆ ನೀಡೋದಿಲ್ಲ ಎಂದು ನಂಬಿಸಿದ್ದ ಸಿಸಿಬಿ ಎಸಿಪಿ|  ಹಣ ನೀಡಿದ್ದ ವ್ಯಾಪಾರಿಗಳು| ಸಿಸಿಬಿ ಇನ್‌ಸ್ಪೆಕ್ಟರ್‌ಗಳಿಂದ ದಾಳಿ| ತಿರುಗಿಬಿದ್ದ ವ್ಯಾಪಾರಿಗಳು| ಈ ವೇಳೆ ಲಂಚದ ವಿಚಾರ ಬೆಳಕಿಗೆ| ಎಸಿಪಿ ವಿರುದ್ಧ ವರದಿ

ಬೆಂಗಳೂರು(ಮೇ.09): ಲೌಕ್‌ಡೌನ್‌ ಸಂದರ್ಭದಲ್ಲಿ ಸಿಗರೆಟ್‌ ಮಾರಾಟಕ್ಕೆ ಅನುಮತಿ ನೀಡುವುದಾಗಿ ನಂಬಿಸಿ ವ್ಯಾಪಾರಿಗಳಿಂದ .62.5 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿ ಸಿಸಿಬಿ ಎಸಿಪಿಯೊಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಶುಕ್ರವಾರ ಆಯುಕ್ತ ಎಸ್‌.ಭಾಸ್ಕರ್‌ರಾವ್‌ ಅವರಿಗೆ ಅಧಿಕೃತ ವರದಿ ಸಲ್ಲಿಕೆಯಾಗಿದೆ.

ವಂಚನೆ ಮತ್ತು ದುರುಪಯೋಗ ನಿಗ್ರಹ ದಳದ ಎಸಿಪಿ ಪ್ರಭುಶಂಕರ್‌ ಮೇಲೆ ಆರೋಪ ಬಂದಿದ್ದು, ಅವರಿಂದ .25 ಲಕ್ಷ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಕೆ.ಆರ್‌.ಪುರದಲ್ಲಿ ಸಿಗರೆಟ್‌ ವ್ಯಾಪಾರಿಗಳ ಮೇಲೆ ಸಿಸಿಬಿ ದಾಳಿ ನಡೆಸಿದಾಗ ಪ್ರಭುಶಂಕರ್‌ ಲಂಚಾವತಾರ ಬೆಳಕಿಗೆ ಬಂದಿದೆ. ಇನ್ನು ಇಲಾಖಾ ಮಟ್ಟದ ಆಂತರಿಕ ವಿಚಾರಣೆಯಲ್ಲಿ ಎಸಿಪಿ ತಪ್ಪೊಪ್ಪಿಕೊಂಡಿದ್ದು, ಲಂಚ ನೀಡಿದ ವ್ಯಾಪಾರಿ ಅದಿಲ್‌ ಅಜೀಜ್‌ ಎಂಬುವರಿಂದ ಹೇಳಿಕೆ ಸಹ ಪಡೆಯಲಾಗಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಪ್ರಭು ‘ಧೂಮ’ಲೀಲೆ:

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರ್ಕಾರ ನಗರದಲ್ಲಿ ಸಿಗರೆಟ್‌ ಮಾರಾಟ ನಿಷೇಧಿಸಿದ್ದರೂ ಕೆಲವು ಸಿಗರೆಟ್‌ ವ್ಯಾಪಾರಿಗಳು, ಅಕ್ರಮವಾಗಿ ಸಿಗರೆಟ್‌ ಮಾರಾಟ ಮುಂದುವರಿಸಿದ್ದರು. ಈ ವಿಚಾರ ತಿಳಿದ ಎಸಿಪಿ ಪ್ರಭುಶಂಕರ್‌, ತನ್ನ ನಂಬಿಕಸ್ಥ ರಿಯಲ್‌ ಏಜೆಂಟ್‌ ಮೂಲಕ ಸಿಗರೆಟ್‌ ವ್ಯಾಪಾರಿಗಳಿಂದ ಹಣ ಸುಲಿಗೆ ಸಂಚು ರೂಪಿಸಿದ್ದರು. ಅಂತೆಯೇ ನಗರದ ಪ್ರಮುಖ ಸಿಗರೆಟ್‌ ಸಗಟು ವ್ಯಾಪಾರಿಗಳಾದ ಎಂಕೆ ಆ್ಯಂಡ್‌ ಸನ್ಸ್‌ನ ಅದಿಲ್‌ ಅಜೀಜ್‌ ಸೇರಿ ಎಂಟು ಮಂದಿಯನ್ನು ಸಂಪರ್ಕಿಸಿದ ಎಸಿಪಿ, ‘ನಿಮಗೆ ಸಿಗರೆಟ್‌ ಮಾರಾಟಕ್ಕೆ ಅವಕಾಶ ನೀಡುತ್ತೇನೆ. ಸಿಸಿಬಿಯಿಂದ ದಾಳಿ ನಡೆಸುವುದಿಲ್ಲ. ಪೊಲೀಸರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ಭರವಸೆ ನೀಡಿದ್ದರು.

ಇದಕ್ಕೆ ಒಪ್ಪಿದ ವ್ಯಾಪಾರಿಗಳು, ಏಪ್ರಿಲ್‌ ಮೊದಲ ವಾರದಲ್ಲಿ .32.5 ಲಕ್ಷ ಲಂಚವನ್ನು ಎಸಿಪಿಗೆ ನೀಡಿದ್ದರು. ಈ ಹಣವನ್ನು ತನ್ನ ನಂಬಿಕಸ್ಥನ ಮುಖಾಂತರ ಎಸಿಪಿ ವಸೂಲಿ ಮಾಡಿದ್ದರು. ಹೀಗಿರುವಾಗ ಏ.30ರಂದು ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಅಜಯ್‌ ಹಾಗೂ ನಿರಂಜನ್‌ ಅವರು, ಅಕ್ರಮವಾಗಿ ಸಿಗರೆಟ್‌ ವಹಿವಾಟು ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಕೆ.ಆರ್‌.ಪುರದಲ್ಲಿ ದಾಳಿ ನಡೆಸಿದ್ದರು. ಆಗ ಇನ್‌ಸ್ಪೆಕ್ಟರ್‌ಗಳ ವಿರುದ್ಧ ತಿರುಗಿ ಬಿದ್ದ ವ್ಯಾಪಾರಿಗಳು, ‘ಸಿಸಿಬಿಯವರು ಹಣ ಪಡೆದು ದಾಳಿ ಮಾಡುತ್ತೀರಾ’ ಎಂದೆಲ್ಲ ಕಿಡಿಕಾರಿದ್ದರು. ಇದರಿಂದ ತೀವ್ರ ಅವಮಾನಕ್ಕೆ ಒಳಗಾದ ಪೊಲೀಸರು, ತಕ್ಷಣವೇ ಡಿಸಿಪಿ ಕೆ.ಪಿ.ರವಿಕುಮಾರ್‌ ಅವರಿಗೆ ಲಂಚದ ವಿಚಾರ ಗಮನಕ್ಕೆ ತಂದಿದ್ದರು.

ಆಗ ಡಿಸಿಪಿ, ತಕ್ಷಣವೇ ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಈ ಬಗ್ಗೆ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಸಹ ಡಿಸಿಪಿ ವರದಿ ನೀಡಿದರು. ಅಷ್ಟರಲ್ಲಿ ತನ್ನ ಡೀಲ್‌ ಬಹಿರಂಗವಾಗಲಿದೆ ಎಂದು ಭೀತಿಗೊಳಗಾದ ಎಸಿಪಿ ಪ್ರಭುಶಂಕರ್‌, ಮತ್ತೆ ಸಿಗರೆಟ್‌ ವ್ಯಾಪಾರಿಗಳಿಗೆ ಪ್ರಕರಣದಲ್ಲಿ ಸಹಕರಿಸುವುದಾಗಿ ನಂಬಿಸಿ .30 ಲಕ್ಷ ಸುಲಿಗೆ ಮಾಡಿದ್ದರು. ಅದರಲ್ಲಿ ವ್ಯಾಪಾರಿ ಅದಿಲ್‌ ಅಜೀಜ್‌ ಅವರು ಎಸಿಪಿಗೆ .25 ಹಣ ಕೊಟ್ಟಿದ್ದರು.

ಈ ಲಂಚದ ವ್ಯವಹಾರದ ಬಗ್ಗೆ ತಿಳಿದು ಆಯುಕ್ತರು, ಆಂತರಿಕ ವಿಚಾರಣೆ ನಡೆಸುವಂತೆ ಡಿಸಿಪಿ ರವಿಕುಮಾರ್‌ ಅವರಿಗೆ ಆದೇಶಿಸಿದರು. ಅದರಂತೆ ವಿಚಾರಣೆ ನಡೆಸಿದ ಡಿಸಿಪಿ ರವಿಕುಮಾರ್‌ ಅವರು, ಎಸಿಪಿ ಹಾಗೂ ಅವರ ವಿಶ್ವಾಸಿ ರಿಯಲ್‌ ಎಸ್ಟೇಟ್‌ ಉದ್ಯಮಿ, ಸಿಗರೆಟ್‌ ವ್ಯಾಪಾರಿಗಳಿಂದ .62.5 ಲಕ್ಷ ಪಡೆದಿದ್ದಾರೆ ಎಂದು ಪುರಾವೆಗಳ ಸಮೇತ ವರದಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಪಿಯಿಂದ ತಪ್ಪೊಪ್ಪಿಗೆ

ಸಿಗರೆಟ್‌ ವ್ಯಾಪಾರಿಗಳು ನೀಡಿದ್ದ 25 ಲಕ್ಷವಿದ್ದ ಬ್ಯಾಗನ್ನು ಎಸಿಪಿ ಪ್ರಭುಶಂಕರ್‌ ಅವರಿಂದ ಜಪ್ತಿ ಮಾಡಲಾಗಿದೆ. ತನಿಖೆಗೆ ಹೆದರಿದ ಎಸಿಪಿ, ಸ್ವಯಂ ಹಣ ತಂದು ಡಿಸಿಪಿ ರವಿಕುಮಾರ್‌ ಅವರಿಗೆ ಒಪ್ಪಿಸಿದ್ದಾರೆ ಎಂದು ಗೊತ್ತಾಗಿದೆ.

click me!