50 ಕೋಟಿ ರು.ಗೆ ಮಾರಾಟ ಆರೋಪ| ಸಾಬೀತುಪಡಿಸಿದ್ರೆ ಆತ್ಮಹತ್ಯೆ: ಜಾಧವ್| ಹಿಂದೆ ಧರ್ಮಸಿಂಗ್ ಕೈ ಹಿಡಿದಿದ್ರು, ಜಿಲ್ಲೆ ಆಳುವವರು ಕೈ ಬಿಟ್ಟರು
ಕಲಬುರಗಿ[ಫೆ.18]: ‘ತನ್ನ ಬಗ್ಗೆ ಬೇಕೆಂದೇ ಅಪಪ್ರಚಾರ ಮಾಡಲಾಗುತ್ತಿದೆ, ಯಾವುದೇ ಹಣ ಮುಟ್ಟಿಲ್ಲ, ಹಾಗೇನಾದರೂ 50 ಕೋಟಿ ರು. ಹಣ ಪಡೆದಿದ್ದೇನೆ ಎಂಬುದನ್ನು ಯಾರಾದರೂ ಸಾಬೀತು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ’
- ಆಪರೇಶನ್ ಕಮಲ ಹೆಸರಲ್ಲಿ ಕೋಟಿಗಟ್ಟಲೆ ಹಣ ಪಡೆದಿರುವುದಾಗಿ ಕೇಳಿ ಬಂದಿರುವ ವದಂತಿ ಬಗ್ಗೆ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಭಾವುಕರಾಗಿ ಹೇಳಿದ್ದು ಹೀಗೆ.
ವಾಡಿ ಪಟ್ಟಣದ ಸೇವಾಲಾಲ ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೆಂಡತಿಗೆ ಆಪರೇಷನ್ ಆಗಿದ್ದರಿಂದ ನಾನು ಆಸ್ಪತ್ರೆಯಲ್ಲಿ ಇದ್ದೆ. ಇದರಿಂದ ನನಗೆ ಸಕಾಲಕ್ಕೆ ಅಧಿವೇಶನಕ್ಕೆ ಹೋಗಲು ಸಾಧ್ಯವಾಗಿಲ್ಲ. ಸಮ್ಮಿಶ್ರ ಸರ್ಕಾರದ ಬಜೆಟ್ ಅನ್ನು ಪಾಸ್ ಮಾಡುವುದಕ್ಕೆ ನಾನು ಕೊನೆಯ ಹಂತದಲ್ಲಿ ಸದನಕ್ಕೆ ಆಗಮಿಸಿದ್ದೇನೆಯೇ ಹೊರತು ಯಾವುದೇ ವಿಪ್‌ಗೆ ಹೆದರಿ ಅಲ್ಲ ಎಂದರು.
ಖರ್ಗೆಗೆ ಪರೋಕ್ಷ ಟಾಂಗ್: ಕೇಂದ್ರ ಸರ್ಕಾರಿ ನೌಕರನಾಗಿದ್ದಾಗ ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರಿಂದ ರಾಜಕೀಯಕ್ಕೆ ಬಂದೆ, ರಾಜಕೀಯಕ್ಕೆ ಬಂದ ಮೇಲೆ ಧರ್ಮಸಿಂಗ್ ಅವರು ಕೈ ಹಿಡಿದರೆ, ಇಂದು ಜಿಲ್ಲೆಯನ್ನು ಆಳುವ ನಾಯಕರು ನನ್ನ ಕೈ ಬಿಟ್ಟರು. ಇಂದು ಜಿಲ್ಲೆಯನ್ನು ಆಳುವವರು ತಮ್ಮ ಕ್ಷೇತ್ರದ ಎಲ್ಲಾ ಕೆಲಸಗಳಲ್ಲೂ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಖರ್ಗೆ ದ್ವಯರಿಗೆ ಟಾಂಗ್ ನೀಡಿದರು.
ಮಾರ್ಚ್ ಮೊದಲ ವಾರ ಬಿಜೆಪಿ ಸೇರ್ಪಡೆ ನಿರ್ಧಾರ
ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ, ಸದ್ಯಕ್ಕೆ ಕಾಂಗ್ರೆಸ್‌ನಲ್ಲೇ ಇದ್ದೇನೆ. ಆ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ನಾನೀಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ತುಂಬಾ ಗೊಂದಲಮಯ ವಾತಾವರಣದಲ್ಲಿ ಇರುವುದರಿಂದ ಮಾಚ್‌ರ್ ತಿಂಗಳ ಮೊದಲ ವಾರದಲ್ಲಿ ನನ್ನ ಅಂತಿಮ ನಿರ್ಧಾರ ಕೈಕೊಳ್ಳುವೆ. ಅಭಿಮಾನಿಗಳ, ಮತದಾರರ ಅಭಿಪ್ರಾಯ ಕೇಳುತ್ತಿದ್ದು, ಜನರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು. ಜನರ ಅಭಿಪ್ರಾಯ, ಗುರುಗಳಾದ ರಾಮರಾವ್ ಮಹಾರಾಜರ ಆಶೀರ್ವಾದ ಇದ್ದಲ್ಲಿ ಲೋಕಸಭೆಗೆ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.