2022ನೇ ಸಾಲಿನ ಉತ್ತಮ ಶಾಸಕ ಪ್ರಶಸ್ತಿ ಪ್ರದಾನ, ಈ ಗೌರವ ಸಂಪಾದಿಸಿದ 2ನೇ ಶಾಸಕ ದೇಶಪಾಂಡೆ
ವಿಧಾನಸಭೆ(ಡಿ.29): ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ, ಹಳಿಯಾಳದ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಅವರು ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ವರ್ಷ ಅತ್ಯುತ್ತಮ ಪ್ರಶಸ್ತಿ ಪ್ರದಾನ ಸಂಪ್ರದಾಯ ಪುನಾರಂಭಿಸಿದ ಬಳಿಕ ಈ ಪ್ರಶಸ್ತಿಗೆ ಭಾಜನರಾದ ಎರಡನೇ ಶಾಸಕ ದೇಶಪಾಂಡೆ ಅವರಾಗಿದ್ದಾರೆ. ಕಳೆದ ವರ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಪ್ರಶಸ್ತಿ ಪಡೆದಿದ್ದರು.
ಬೆಳಗಾವಿಯ ಸುವರ್ಣ ಸೌಧದಲ್ಲಿ ಪ್ರಸ್ತುತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬುಧವಾರ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದೇಶಪಾಂಡೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಘೋಷಿಸಿದರು. ಇಡೀ ಸದನದ ಎಲ್ಲ ಸದಸ್ಯರೂ ಮೇಜು ತಟ್ಟುವ ಮೂಲಕ ಅವರ ಆಯ್ಕೆಯನ್ನು ಸ್ವಾಗತಿಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಮಾಧುಸ್ವಾಮಿ ಸೇರಿದಂತೆ ಹಿರಿಯ ನಾಯಕರನ್ನು ತಮ್ಮ ಪೀಠದ ಬಳಿಗೆ ಆಹ್ವಾನಿಸಿ ಇಡೀ ಸದನದ ಸಮ್ಮುಖದಲ್ಲಿ ದೇಶಪಾಂಡೆ ಅವರಿಗೆ ಸ್ಪೀಕರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಯಡಿಯೂರಪ್ಪಗೆ ಪ್ರಶಸ್ತಿ ಕೊಟ್ಟಿದ್ದು ಯಾವ ಸಾಧನೆಗೆ: ಸಿದ್ದು
ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ, ‘ದೇಶಪಾಂಡೆ ಅವರು ಈ ಸದನ ಪ್ರವೇಶಿಸಿದಂದಿನಿಂದಲೂ ಸದನದ ಚೌಕಟ್ಟು ಮೀರದೆ ನಿಯಮಾವಳಿಗೆ ಬದ್ಧವಾಗಿ ನಡೆದುಕೊಂಡು ಬಂದ ಒಬ್ಬ ಮುತ್ಸದ್ಧಿ ನಾಯಕರು. ಸಾರ್ವಜನಿಕ ಜೀವನದ ಜತೆಗೆ ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರಗಳಲ್ಲೂ ತೊಡಗಿದವರು. ವಿಶೇಷವಾಗಿ ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದವರು’ ಎಂದು ಶ್ಲಾಘಿಸಿದರು.
ರಾಜಕಾರಣಿಗಳು ಸ್ನೇಹಜೀವಿ ಆಗಿರಬೇಕು:
ನನ್ನ ಇದುವರೆಗಿನ ಬೆಳವಣಿಗೆಗೆ ದೇವರು, ತಂದೆ ತಾಯಿ, ಕುಟುಂಬದವರ ಆಶೀರ್ವಾದ, ಸ್ನೇಹಿತರು, ಸಹಪಾಠಿಗಳ ಸಹಕಾರ ಕಾರಣ ಎಂದು ಆರ್.ವಿ. ದೇಶಪಾಂಡೆ ಕೃತಜ್ಞತೆ ಸಲ್ಲಿಸಿದರು. ‘ರಾಜಕಾರಣಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಿಂದೆ ಇದ್ದಂತ ಉತ್ತಮ ಅಭಿಪ್ರಾಯ, ಅಭಿಮಾನ ಈಗಿಲ್ಲ. ಪ್ರತಿಯೊಬ್ಬರೂ ಸ್ನೇಹಜೀವಿಗಳಾಗಿರಬೇಕು, ಯಾರನ್ನೂ ದ್ವೇಷ ಮಾಡಿ ಏನೂ ಸಾಧಿಸುವುದಿಲ್ಲ. ತಮ್ಮ ಸಹಪಾಠಿಗಳು ಯಾರಾದರೂ ಸಚಿವರಾದರೆ, ಮುಖ್ಯಮಂತ್ರಿ ಆದರೆ ಖುಷಿ ಪಡಬೇಕು ಎಂದು ದೇಶಪಾಂಡೆ ಹೇಳಿದರು.
ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ
ಸರಳ ಸಜ್ಜನಿಕೆ, ದಕ್ಷ ಪ್ರಾಮಾಣಿಕ ವ್ಯಕ್ತಿತ್ವ- ಬೊಮ್ಮಾಯಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶಪಾಂಡೆ ಅವರದ್ದು ಸರಳ ಸಜ್ಜನಿಕೆ ಮತ್ತು ಪ್ರಮಾಣಿಕತೆಯ ವ್ಯಕ್ತಿತ್ವ. 1980ರಲ್ಲಿ ಸಾರ್ವಜನಿಕ ಜೀವನ ಪ್ರವೇಶಿಸಿದವರು ಹಿಂದುರುಗಿ ನೋಡಿಲ್ಲ. 8 ಭಾರಿ ಶಾಸಕರಾಗಿ ಆಯ್ಕೆಯಾಗಿ ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿ ಜತೆಗೆ, ವಿವಿಧ ಸರ್ಕಾರಗಳಲ್ಲಿ ಅನೇಕ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ದಕ್ಷತೆಯಿಂದ ನಿಭಾಯಿಸಿ ರಾಜ್ಯದ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಅದರಲ್ಲೂ ಕೈಗಾರಿಕಾ ಇಲಾಖೆಯನ್ನು 12 ವರ್ಷಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದವರು. ಅತ್ಯಂತ ಸ್ನೇಹಜೀವಿಯಾದ ಅವರು ಅನೇಕ ಮುಖ್ಯಮಂತ್ರಿಗಳ ಜತೆಗೆ, ಆಡಳಿತ ಪಕ್ಷದವರು ಮಾತ್ರವಲ್ಲ ಪ್ರತಿಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವವರು. ಅಂಹತ ನಾಯಕರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಸಂದಿರುವುದು ಅತ್ಯಂತ ಸಮಂಜಸವಾಗಿದೆ. ಪ್ರಶಸ್ತಿಯ ಗೌರವವೂ ಹೆಚ್ಚಾಗಿದೆ ಎಂದು ಕೊಂಡಾಡಿದರು.
ದೇಶಪಾಂಡೆ ಉತ್ತಮ ಆಯ್ಕೆ: ಸಿದ್ದು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾನು ಮತ್ತು ದೇಶಪಾಂಡೆ ಇಬ್ಬರೂ ಒಟ್ಟಿಗೆ ವಿಧಾನಸಭೆ ಪ್ರವೇಶಿಸಿದವರು. ನಾನು ಏಳು ಬಾರಿ ಶಾಸಕನಾಗಿದ್ದರೆ ದೇಶಪಾಂಡೆ ನನಗಿಂತ ಒಂದು ಬಾರಿ ಹೆಚ್ಚಿಗೆ 8 ಬಾರಿ ಶಾಸಕರಾಗಿ ಆಯ್ಕೆಯಾದವರು. ಒಮ್ಮೆ ಮಾತ್ರ ಸೋತ. ಹೇಗೆ ಸೋತ ಎಂಬುದು ನನಗೆ ಆಶ್ಚರ್ಯ. ನನಗಾದರೂ ರಾಜಕೀಯದಲ್ಲಿ ಶತ್ರುಗಳಿದ್ದಾರೆ. ಆದರೆ ಅವರು ಅಜಾತಶತ್ರು. ಕ್ರಿಯಾಶೀಲ ವ್ಯಕ್ತಿ ಮಾತ್ರವಲ್ಲ ತಾವು ವಹಿಸಿಕೊಂಡ ಎಲ್ಲ ಇಲಾಖೆಗಳಲ್ಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ನ್ಯಾಯ ಒದಗಿಸಿದವರು. ಅವರ ರಾಜಕೀಯ ಜೀವನ ಎಲ್ಲ ಹೊಸ ಶಾಸಕರಿಗೂ ಪ್ರೇರಣೆ ಆಗುತ್ತದೆ. ಈ ಬಾರಿಯ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಅವರ ಆಯ್ಕೆ ಉತ್ತಮವಾಗಿದೆ ಎಂದು ಹೇಳಿದರು.