'ಲಸಿಕೆ 75% ಜನಕ್ಕೆ ಉಚಿತ, 25% ಜನಕ್ಕೆ ಶುಲ್ಕ ಏಕೆ?'

By Kannadaprabha NewsFirst Published Jun 23, 2021, 8:39 AM IST
Highlights

* ಎಲ್ಲರಿಗೂ ಉಚಿತ ಲಸಿಕೆ ನೀಡಲಿ
*  25% ಜನ ಏನು ಪಾಪ ಮಾಡಿದ್ದರು?
* ಕೋವಿಡ್‌ ಮೊದಲ ಅಲೆ ಬಂದಾಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು
 

ಬೆಂಗಳೂರು(ಜೂ.23): ಕೇಂದ್ರ ಸರ್ಕಾರ ಲಸಿಕೆ ನೀಡುವ ವಿಚಾರದಲ್ಲಿ ಗೊಂದಲ ಮೂಡಿಸದೆ, ದೇಶದ ಪ್ರತಿಯೊಬ್ಬ ಪ್ರಜೆಗೂ ಸರ್ಕಾರವೇ ಉಚಿತವಾಗಿ ಲಸಿಕೆ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಒತ್ತಾಯಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ಕೊಡುತ್ತೇವೆ ಎಂದು ಕೇಂದ್ರದ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಈಗ ದೇಶದ ಶೇ.75ರಷ್ಟು ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತೇವೆ. ಉಳಿದ ಶೇ.25ರಷ್ಟುಜನಕ್ಕೆ ಖಾಸಗಿ ಆಸ್ಪತ್ರೆಗಳ ಮೂಲಕ ಲಸಿಕೆ ನೀಡುತ್ತೇವೆ ಎನ್ನುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಲಸಿಕೆಗೆಂದು ಬಜೆಟ್‌ನಲ್ಲಿ 35 ಸಾವಿರ ಕೋಟಿ ಮೀಸಲಿಟ್ಟಿದ್ದು, ಇನ್ನು 19 ಸಾವಿರ ಕೋಟಿಯನ್ನು ಕೊಟ್ಟರೆ ಈ ಶೇ.25ರಷ್ಟು ಜನರಿಗೂ ಉಚಿತವಾಗಿ ಸರ್ಕಾರವೇ ಲಸಿಕೆ ನೀಡಬಹುದಾಗಿದೆ. ಆಗ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲು ಸಾಧ್ಯ. ಒಂದು ವೇಳೆ ಶೇ.25ರಷ್ಟು ಜನರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದರೆ ಒಬ್ಬರಿಗೆ ಕನಿಷ್ಠ 2 ಸಾವಿರ ರು.ನಂತೆ ಎಷ್ಟುಕೋಟಿ ರು. ಖರ್ಚಾಗುತ್ತದೆ ಎಂಬುದನ್ನು ಗಮನಿಸಬೇಕು. ಈ ಶೇ.25ರಷ್ಟು ಜನ ಯಾವ ಪಾಪ ಮಾಡಿದ್ದರು? ಅವರಿಗೆ ಸರ್ಕಾರ ಯಾಕೆ ಉಚಿತ ಲಸಿಕೆ ನೀಡಲು ನಿರಾಕರಿಸುತ್ತಿದೆ ಎಂದು ಕಿಡಿಕಾರಿದರು.

ಒಂದೇ ದಿನ ಗರಿಷ್ಠ ಲಸಿಕೆ ದಾಖಲೆ; ಅಂತಾರಾಷ್ಟೀಯ ಯೋಗದಿನದಂದು ಲಸಿಕೆ ಯೋಗ!

ಮುಖ್ಯಮಂತ್ರಿ ಹುದ್ದೆ ಚರ್ಚೆ ಬೇಡ:

ಕಾಂಗ್ರೆಸ್‌ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರದ ಚರ್ಚೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ಬಹಿರಂಗವಾಗಿ ಚರ್ಚಿಸದಂತೆ ಎಲ್ಲರಿಗೂ ಸೂಚನೆ ನೀಡಿದ್ದಾರೆ. ಪ್ರತಿಯೊಬ್ಬರೂ ಅವರ ನಿರ್ದೇಶನವನ್ನು ಪಾಲಿಸಬೇಕು ಎಂದಷ್ಟೇ ಹೇಳುತ್ತೇನೆ. ಅದನ್ನು ಹೊರತಾಗಿ ಬೇರೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಕೋವಿಡ್‌ ಮೊದಲ ಅಲೆ ಬಂದಾಗಲೇ ಸರ್ಕಾರ ಎಚ್ಚರ ವಹಿಸಬೇಕಿತ್ತು. ಜೊತೆಗೆ ಲಸಿಕೆ ತಯಾರಿಕೆ ವಿಚಾರವಾಗಿ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕಿತ್ತು. ಲಸಿಕೆ ಉತ್ಪಾದಿಸಲು ಇತರ ಕಂಪನಿಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಆದರೆ ಎರಡನೇ ಅಲೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ಇದ್ದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಆರೋಪಿಸಿದರು.

ಉಚಿತ ಲಸಿಕೆ ಕೊಡುವುದರ ಬಗ್ಗೆ ಪ್ರಧಾನಮಂತ್ರಿ ಘೋಷಣೆ ಮಾಡುವ ಮುನ್ನ ಕಾಂಗ್ರೆಸ್‌ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಒತ್ತಾಯಿಸಬೇಕಾಯಿತು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ ಲಸಿಕೆಗೆ ಮೀಸಲಿಟ್ಟ 35 ಸಾವಿರ ಕೋಟಿ ರು. ಹಣದ ಲೆಕ್ಕ ಕೇಳಬೇಕಾಯಿತು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವೈದ್ಯಕೀಯ ಸಮಿತಿಯು ಆರೋಗ್ಯ ಮಂತ್ರಿಗಳಿಗೆ ನಿದ್ದೆಯಿಂದ ಎದ್ದೇಳಿ ಎಂದು ಪತ್ರ ಬರೆಯಬೇಕಾಯಿತು. ಇದು ವಿಪರಾರ‍ಯಸ ಎಂದು ಟೀಕಿಸಿದರು.
 

click me!