
ಬೆಳಗಾವಿ (ಫೆ.15): ಈ ರ್ಕಾರ ಬಹಳ ದಿನ ಉಳಿಯಲ್ಲ, ಶೀಘ್ರವೇ ಪತನವಾಗಲಿದೆ ಕಾದು ನೋಡಿ ಎಂದು ಮಾಜಿ ಸಚಿವ ಮುರುಗೇಶ ಆರ್ ನಿರಾಣಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಮೇಯರ್ ಉಪಮೇಯರ್ ಚುನಾವಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ಅನುದಾನ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ನಾವು ಸ್ವಾಗತ ಮಾಡಿದ್ವಿ. ಆದರೆ ಈಗ ಕಂಡಿಷನ್ ಹಾಕಿದ್ದಾರೆ. ಗ್ಯಾರಂಟಿ ಜಾರಿಯಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆ ಆಗ್ತಿಲ್ಲ, ಹೀಗಾಗಿ ಸರ್ಕಾರದ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲೇ ಈ ಸರ್ಕಾರ ಏನಾಗುತ್ತೆ ಎಂದು ಕಾದು ನೋಡಿ ಎಂದರು.
ಬಿಜೆಪಿ ನಾಯಕರೇನು ಈ ಸರ್ಕಾರ ಪತನವಾಗಲೆಂದು ಬಯಸುತ್ತಿಲ್ಲ. ಆದರೆ ಅನುದಾನದ ವಿಚಾರದಲ್ಲಿ ಶಾಸಕರೇ ಅಸಮಾಧಾನಿತರಾಗಿ ಸರ್ಕಾರ ಕೆಡವಲು ತುದಿಗಾಲಮೇಲೆ ನಿಂತಿದ್ದಾರೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಶಾಸಕರಿಂದಲೇ ಈ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಇನ್ನು ಬಿಎಸ್ ವೈ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ ಹೇಳಿಕೆ ವಿಚಾರ ಸಂಬಂಧ ಮಾತನಾಡಿದ ಅವರು, ಕೆಲವೊಬ್ಬರು ಅಸಾಧಾರಣ ವ್ಯಕ್ತಿಗಳಿರ್ತಾರೆ ಅವರ ಬಗ್ಗೆ ನಾನು ಮಾತನಾಡಲ್ಲ ಎನ್ನುವ ಮೂಲಕ ಯತ್ನಾಳಗೆ ಟಾಂಗ್ ನೀಡಿದ ಮುರಗೇಶ ನಿರಾಣಿ ಮುಂದುವರಿದು, ನೀವು ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ತಯಾರಿ ನಡೆಸ್ತಿದ್ದಿರಾ ಎಂಬ ಪ್ರಶ್ನೆಗೆ, ನಾನು ವಿಜಯಪುರದಿಂದ ಇಲ್ಲಿಗೆ ಬಂದಿದ್ದೇನೆ, ಹಾಗೇ ತಯಾರಿ ನಡೆಸ್ತಿದ್ರೆ ಇಲ್ಲಿಯೇ ಇರ್ತಿದ್ದೆ ಎಂದರು. ಇದೇ ವೇಳೆ ಬಾಗಲಕೋಟೆ ಟಿಕೆಟ್ ಆಕಾಂಕ್ಷಿಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಾನು ಆ ಜವಾಬ್ದಾರಿಯನ್ನು ನೀಗಿಸುತ್ತೇನೆ. ಬಿಜೆಪಿಯಲ್ಲಿ ಯಾರಿಗೆ ಯಾವ ಸರ್ಪೈಸ್ ಆಗುತ್ತೋ ಗೊತ್ತಿಲ್ಲ. ಆದರೆ ಪಕ್ಷ ವಹಿಸಿದ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ