
ಬೆಂಗಳೂರು (ಸೆ.24): ಮೈಸೂರಿನ ಮುಡಾ ಅಧ್ಯಕ್ಷ ಸ್ಥಾನ ಸೇರಿ 35-37 ಮಂದಿ ಕಾಂಗ್ರೆಸ್ ನಾಯಕರಿಗೆ ದಸರಾ ಉಡುಗೊರೆಯಾಗಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಪ್ರಕಟವಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ ನಾಯಕ ಎಂ.ಎಲ್.ಮೂರ್ತಿಗೆ ಮೈಸೂರಿನ ಮುಡಾ ಅಧ್ಯಕ್ಷ ಸ್ಥಾನ ದೊರೆಯುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದಲ್ಲದೆ, ಮಾಜಿ ಶಾಸಕ ಎನ್.ಸಂಪಂಗಿ, ಆಸ್ಕರ್ ಫರ್ನಾಂಡಿಸ್ ಆಪ್ತ ಗಫೂರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಘಾ ಸುಲ್ತಾನ್, ಸೇವಾದಳದ ಮಾಜಿ ಅಧ್ಯಕ್ಷೆ ಪ್ಯಾರೇಜಾನ್ ಸೇರಿ 35 ರಿಂದ 37 ಮಂದಿಗೆ ನಿಗಮ-ಮಂಡಳಿ ಭಾಗ್ಯ ಒಲಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದಸರಾದಲ್ಲಿ 3000 ಡ್ರೋನ್ ಗಿನ್ನೆಸ್ ದಾಖಲೆಗೆ ಪ್ರಯತ್ನ, ಯಾವ ದಿನ ನೋಡಬಹುದು? ಇಲ್ಲಿದೆ ವಿವರ
ಈ ಕುರಿತ ಪಟ್ಟಿ ಈಗಾಗಲೇ ಹೈಕಮಾಂಡ್ ಬಳಿ ಸೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಸುದೀರ್ಘ ಚರ್ಚೆ ನಡೆಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಹಿಂದೆಯೇ ಪಟ್ಟಿ ಸಲ್ಲಿಸಿದ್ದರು.
ಎರಡು ದಿನಗಳ ಹಿಂದೆ ಕೆ.ಸಿ.ವೇಣುಗೋಪಾಲ್ ಕಚೇರಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿಗೆ ಪಟ್ಟಿ ಕಳುಹಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ಬದಲಾವಣೆಗಳೊಂದಿಗೆ ಪಟ್ಟಿ ಅಂತಿಮಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೀಘ್ರ ರವಾನಿಸಲಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಬಳಿಕ ಸಂಬಂಧಪಟ್ಟ ಇಲಾಖೆಗಳಿಂದ ನೇಮಕಾತಿ ಆದೇಶ ಹೊರ ಬೀಳಲಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ