ಸೆ.2ಕ್ಕೆ ತಿಪಟೂರಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಮಾವೇಶ

By Kannadaprabha NewsFirst Published Aug 30, 2024, 9:48 AM IST
Highlights

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸೆಪ್ಟೆಂಬರ್ 2ರಂದು ನಡೆಯಲಿದೆ. 

ಬೆಂಗಳೂರು (ಆ.30): ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸೆಪ್ಟೆಂಬರ್ 2ರಂದು ನಡೆಯಲಿದೆ. ಸಮಾವೇಶದ ಅಂಗವಾಗಿ ವಿವಿಧ ವಿಷಯಗಳ ಕುರಿತು ವಿಚಾರ ಸಂಕಿರಣ, ಅಂಚೆ ಚೀಟಿ, ನಾಣ್ಯ ಹಾಗೂ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಸಮಾವೇಶ ಅಂಗವಾಗಿ ಏರ್ಪಡಿಸಿರುವ ವಿಚಾರ ಸಂಕಿರಣವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಂದು ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.

 ಮಧ್ಯಾಹ್ನ 12 ಗಂಟೆಗೆ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಕೃತಕ ಬುದ್ಧಿಮತ್ತೆ ಮತ್ತು ಸಣ್ಣ, ಮಧ್ಯಮ ಪತ್ರಿಕೆಗಳ ಮೇಲೆ ಅದರ ಪರಿಣಾಮ ಕುರಿತು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ ಉಪನ್ಯಾಸ ನೀಡಲಿದ್ದಾರೆ. ಈ ಗೋಷ್ಠಿಯನ್ನು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಉದ್ಘಾಟಿಸಲಿದ್ದಾರೆ. ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಶಾ ಖಾನಂ ಅಧ್ಯಕ್ಷತೆ ವಹಿಸಲಿದ್ದಾರೆ. 

Latest Videos

ಅಂಚೆ ಚೀಟಿ, ನಾಣ್ಯಗಳ ಪ್ರದರ್ಶನ ಹಾಗೂ ತೆಂಗು ಉತ್ಪನ್ನಗಳ ವಸ್ತು ಪ್ರದರ್ಶನವನ್ನು ತಿಪಟೂರು ಶಾಸಕ ಕೆ. ಷಡಕ್ಷರಿ ಉದ್ಘಾಟಿಸಲಿದ್ದಾರೆ. ಸಮಾರಂಭ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಬಿ.ಪಿ. ಮಲ್ಲಿಕಾರ್ಜುನಯ್ಯ ವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು 'ಕಲ್ಪಶ್ರೀ' ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ತಿಪಟೂರು ಉಂಡೆ ಕೊಬ್ಬರಿ ಮಾರುಕಟ್ಟೆ ಸಮಸ್ಯೆ ಮತ್ತು ಪರಿಹಾರ ಕ್ರಮಗಳ ಬಗೆಗಿನ ವಿಚಾರ ಸಂಕಿರಣವನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಿ.ಎಸ್. ರಮೇಶ್ ಉದ್ಘಾಟಿಸಲಿದ್ದಾರೆ. 

ದರ್ಶನ್ ಶಿಫ್ಟಿಗೂ ಬಳ್ಳಾರಿ ಉಸ್ತುವಾರಿ ಜಮೀರ್‌ಗೂ ಸಂಬಂಧವಿಲ್ಲ: ಸಚಿವ ಪರಮೇಶ್ವರ್

ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಭಾಗವಹಿಸುತ್ತಾರೆ. ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತುಮಕೂರು ಜಿಲ್ಲಾ ಘಟಕ ಹಾಗೂ ತಿಪಟೂರು ತಾಲೂಕು ಘಟಕಗಳು ಸಮಾವೇಶಕ್ಕೆ ಸಹಕಾರ ನೀಡುತ್ತಿವೆ.

click me!