ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ ₹990, ಶೀಘ್ರ ಹೋಟೆಲ್‌ ತಿನಿಸುಗಳ ದರ ಇನ್ನಷ್ಟು ಹೆಚ್ಚಳ

Kannadaprabha News   | Kannada Prabha
Published : May 02, 2026, 06:42 AM IST
Commercial LPG Hike 19kg Cylinder Now Rs 990 Hotel Food Prices to Rise

ಸಾರಾಂಶ

ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ ₹990 ರಷ್ಟು ಹೆಚ್ಚಳವಾಗಿದ್ದು, ಇದು ಹೋಟೆಲ್‌ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಲಿದೆ. ಈ ಬೆಲೆ ಏರಿಕೆಯ ಹೊರೆಯನ್ನು ಸರಿದೂಗಿಸಲು, ಹೋಟೆಲ್‌ಗಳು ಅನಿವಾರ್ಯವಾಗಿ ಕಾಫಿ, ಟೀ, ತಿಂಡಿ ಮತ್ತು ಊಟದ ದರವನ್ನು ಹೆಚ್ಚಿಸಲು ಮುಂದಾಗಿವೆ. 

ಬೆಂಗಳೂರು (ಮೇ.2): ವಾಣಿಜ್ಯ ಬಳಕೆಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಸಾಮಾನ್ಯವಾಗಿ ಈ ದರ ಹೆಚ್ಚಳದ ಹೊರೆಯನ್ನು ಹೋಟೆಲ್‌ಗಳು ಗ್ರಾಹಕರಿಗೆ ವರ್ಗಾವಣೆ ಮಾಡಲಿವೆ. ಇದರಿಂದ ಸಹಜವಾಗಿ ಶೀಘ್ರದಲ್ಲೇ ಹೋಟೆಲ್‌ಗಳ ತಿನಿಸುಗಳ ದರವೂ ಅಧಿಕವಾಗಲಿವೆ.

ವಾಣಿಜ್ಯ ಬಳಕೆಯ 19 ಕೆಜಿ ಅನಿಲ ಸಿಲಿಂಡರ್‌ ಬೆಲೆ 2162 ರು.ನಿಂದ 3152 ರು.ಗೆ ಹೆಚ್ಚಳವಾಗಿದ್ದು ಇದರಿಂದಾಗಿ ಪ್ರತಿ ಸಿಲಿಂಡರ್‌ ಬೆಲೆ ಬರೋಬ್ಬರಿ 990 ರು. ಹೆಚ್ಚಳವಾದಂತಾಗಿದೆ. ಈ ಹೊರೆಯನ್ನು ಸರಿದೂಗಿಸಿಕೊಳ್ಳಲು ಹೋಟೆಲ್‌ಗಳು ಸಹಜವಾಗಿ ಕಾಫಿ-ಟೀ, ತಿನಿಸುಗಳ ದರ ಹೆಚ್ಚಳಕ್ಕೆ ಮುಂದಾಗಲಿದ್ದು ಗ್ರಾಹಕರ ಜೇಬಿಗೆ ಇದು ಹೊರೆಯಾಗಲಿದೆ.

ಮಧ್ಯಪ್ರಾಚ್ಯ ಯುದ್ಧದಿಂದಾಗಿ 1.5 ತಿಂಗಳ ಹಿಂದೆಯೇ ಗ್ಯಾಸ್‌ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಹೋಟೆಲ್‌ಗಳು ಕಾಳಸಂತೆಯಲ್ಲಿ ಅಧಿಕ ಬೆಲೆ ತೆತ್ತು ಸಿಲಿಂಡರ್ ಖರೀದಿಸುವ ಸ್ಥಿತಿ ನಿರ್ಮಾಣವಾಗಿತ್ತು. ಜೊತೆಗೆ ಪರ್ಯಾಯ ಮಾರ್ಗಗಳಾದ ಸೌದೆ ಒಲೆ, ಎಲೆಕ್ಟ್ರಿಕ್‌ ಇಂಡಕ್ಷನ್‌ ಮತ್ತಿತರ ವ್ಯವಸ್ಥೆಗಳಿಂದ ಅಡುಗೆ ತಯಾರಿಗೆ ಹೋಟೆಲ್‌ಗಳು ಮುಂದಾಗಿದ್ದವು. ಆದ್ದರಿಂದ ಆಗಲೂ ಒಂದಷ್ಟು ಪ್ರಮಾಣದಲ್ಲಿ ತಿನಿಸುಗಳ ದರ ಹೆಚ್ಚಳ ಮಾಡಲಾಗಿತ್ತು.

2 ತಿಂಗಳಲ್ಲಿ 1308 ರು. ಹೆಚ್ಚಳ: ಇದೀಗ ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಳವಾಗಿರುವುದರಿಂದ ಪುನಃ ಮತ್ತೊಂದು ಸುತ್ತಿನ ದರ ಹೆಚ್ಚಳಕ್ಕೆ ಹೋಟೆಲ್‌ಗಳು ಮುಂದಾಗಲಿವೆ. ಇದು ಗ್ರಾಹಕರಿಗೆ ಹೊರೆಯನ್ನು ಉಂಟು ಮಾಡಲಿದೆ. ಮಾರ್ಚ್‌ನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ಬೆಲೆ 1844 ರು. ಇದ್ದು ಏಪ್ರಿಲ್‌ನಲ್ಲಿ 2162 ರು.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ 3152 ರು.ಗೆ ಏರಿಕೆಯಾಗಿದ್ದು 2 ತಿಂಗಳಲ್ಲಿ ಬರೋಬ್ಬರಿ 1308 ರು.ಹೆಚ್ಚಳವಾದಂತಾಗಿದೆ.

‘ದರ ಹೆಚ್ಚಳವು ಸಣ್ಣ ಮತ್ತು ಮಧ್ಯಮ ಪ್ರಮಾಣದ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಲಿದೆ. ಕಾಫಿ-ಟೀ 3 ರಿಂದ 5 ರುಪಾಯಿ, ತಿಂಡಿಗಳಿಗೆ 5 ರು. ಮತ್ತು ಊಟಕ್ಕೆ 10 ರು. ಬೆಲೆ ಅಧಿಕವಾಗುವ ಸಾಧ್ಯತೆ ಇದೆ. ದೊಡ್ಡ ಹೋಟೆಲ್‌ಗಳಲ್ಲಿ ದುಬಾರಿ ದರ ಇರುವುದರಿಂದ ಇವುಗಳು ಬೆಲೆ ಹೆಚ್ಚಳಕ್ಕೆ ಮುಂದಾಗುವ ಸಾಧ್ಯತೆ ಕಡಿಮೆ ಇದೆ’ ಎಂದು ಮೂಲಗಳು ತಿಳಿಸಿವೆ.

‘ಗೃಹ ಬಳಕೆಯ ಅನಿಲ ಸಿಲಿಂಡರ್‌ಗೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಆದರೆ ವಾಣಿಜ್ಯ ಬಳಕೆಯ ಸಿಲಿಂಡರ್‌ ಮೇಲೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ದೇಶದ ಶೇ.80 ರಷ್ಟು ಅನಿಲ ಸಿಲಿಂಡರ್‌ ಗೃಹ ಬಳಕೆಗೆ ಪೂರೈಕೆಯಾಗುತ್ತಿದೆ. ಇನ್ನುಳಿದ ಶೇ.20 ರಲ್ಲಿ ಹೋಟೆಲ್‌ಗಳು, ಆಸ್ಪತ್ರೆ, ಪೇಯಿಂಗ್‌ ಗೆಸ್ಟ್‌, ಹಾಸ್ಟೆಲ್‌ ಮತ್ತಿತರ ಮೂಲಗಳಿಗೆ ಸರಬರಾಜಾಗುತ್ತಿದೆ. ಇದರಲ್ಲಿ ಎರಡ್ಮೂರು ಶೇಕಡಾವರು ಪ್ರಮಾಣದ ಅನಿಲವನ್ನು ಖಾಸಗಿ ಕಂಪೆನಿಗಳೂ ಪೂರೈಸಲಿವೆ. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಳವಾದರೆ ಈ ಹೊರೆ ಜನರಿಗೆ ವರ್ಗಾವಣೆಯಾಗಲಿದೆ. ಹೀಗಿರುವಾಗ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲೆ ಗಧಾಪ್ರಹಾರ ನಡೆಸಿದಂತೆ ಆಗುವುದಿಲ್ಲವೇ ? ಎಂದು ಹೋಟೆಲ್‌ ಉದ್ಯಮಿಯೊಬ್ಬರು ಪ್ರಶ್ನಿಸಿದ್ದಾರೆ.-ಬಾಕ್ಸ್‌-

ಪಿಜಿ ಬಾಡಿಗೆಯೂ ಹೆಚ್ಚಳ ಸಾಧ್ಯತೆ

ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಳ ಆಗಿರುವುದರಿಂದ ಇದರ ಹೊಡೆತ ಪೇಯಿಂಗ್‌ ಗೆಸ್ಟ್‌(ಪಿಜಿ)ನಲ್ಲಿ ವಾಸವಾಗಿರುವವರಿಗೂ ಬೀಳಲಿದೆ. ಬೆಲೆ ಹೆಚ್ಚಳದ ಭಾರ ಸರಿದೂಗಿಸಿಕೊಳ್ಳಲು ಪಿಜಿ ಮಾಲೀಕರೂ ಬಾಡಿಗೆಯನ್ನು ಹೆಚ್ಚು ಮಾಡುವ ಸಾಧ್ಯತೆ ಕಂಡುಬರುತ್ತಿದೆ.

ಹೋಟೆಲ್‌ ತಿನಿಸುಗಳ ಬೆಲೆ ಹೆಚ್ಚಳ ಅನಿವಾರ್ಯವಾಗಿದೆ. ಗೃಹ ಬಳಕೆಯ ಅನಿಲ ಸಿಲಿಂಡರ್‌ಗೆ ಶೇ.5 ಜಿಎಸ್‌ಟಿ ವಿಧಿಸಲಾಗುತ್ತಿದೆ. ಆದರೆ ವಾಣಿಜ್ಯ ಬಳಕೆಗೆ ಶೇ.18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡುವಂತೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು.

- ಪಿ.ಸಿ.ರಾವ್‌, ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ

ವಾಣಿಜ್ಯ ಸಿಲಿಂಡರ್‌ ದರ ಹೆಚ್ಚಳಕ್ಕೆ

ಹೋಟೆಲ್‌ಗಳ ಸಂಘ ತೀವ್ರ ಖಂಡನೆಬೆಂಗಳೂರು: ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಹೆಚ್ಚಳ ಮಾಡಿರುವುದನ್ನು ಖಂಡಿಸಿರುವ ಬೆಂಗಳೂರು ಹೋಟೆಲ್‌ಗಳ ಸಂಘ, ಇದರಿಂದ ಅನಿವಾರ್ಯವಾಗಿ ತಿನಿಸುಗಳ ದರ ಹೆಚ್ಚಳ ಮಾಡಬೇಕಾಗುತ್ತದೆ ಎಂದು ಮುನ್ಸೂಚನೆ ನೀಡಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌, ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದರ ಏರಿಕೆ ಆಗಿದೆ. ಸಾಮಾನ್ಯವಾಗಿ ಸಿಲಿಂಡರ್‌ ಬೆಲೆ 100 ರಿಂದ 200 ರು. ಹೆಚ್ಚಾಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ 993 ರು. ಅಧಿಕವಾಗಿದೆ. ಇದು ಹೋಟೆಲ್ ಉದ್ಯಮದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಅನಿವಾರ್ಯವಾಗಿ ಟೀ-ಕಾಫಿ ಜೊತೆಗೆ ತಿಂಡಿ ದರಗಳೂ ಸಹ ಅಧಿಕವಾಗಲಿವೆ. ಸಣ್ಣ ಪುಟ್ಟ ಹೋಟೆಲ್‌ಗಳು ಮುಚ್ಚುವ ಆತಂಕ ಉಂಟಾಗಿದೆ. ಸರ್ಕಾರ ತಕ್ಷಣ ಸಿಲಿಂಡರ್‌ ಮೇಲಿನ ಶೇ.18 ರಷ್ಟು ಜಿಎಸ್‌ಟಿ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸಂಘದ ಜಂಟಿ‌‌ ಕಾರ್ಯದರ್ಶಿ ಕೃಷ್ಣರಾಜು‌ ಮಾತನಾಡಿ, ಕಳೆದ 10 ವರ್ಷದಲ್ಲಿ ಇದೇ ಮೊದಲ ಬಾರಿ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 993 ರು. ಹೆಚ್ಚಳ ಮಾಡಲಾಗಿದೆ. ಮಧ್ಯಪ್ರಾಚ್ಯ ಯುದ್ಧದಿಂದ ಅನಿಲ ಸಿಲಿಂಡರ್‌ ಅಭಾವ ಉಂಟಾಗಿ ಈಗಾಗಲೇ ಹೋಟೆಲ್‌ ಉದ್ಯಮ ಸಾಕಷ್ಟು ನಷ್ಟ ಅನುಭವಿಸಿತ್ತು. ಈಗ ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯು ಮತ್ತಷ್ಟು ಹೊಡೆತ ನೀಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Hindalga Jail Breach: ಉಗ್ರ ನಂಟಿನ ಜಯೇಶ್‌ ಜೈಲಿಂದಲೇ 28 ಬಾರಿ ಮೊಬೈಲ್‌ ಬಳಕೆ ಪತ್ತೆ! ಹಿಂಡಲಗಾ ಜೈಲೋ? ಉಗ್ರನ ಕಾರಸ್ತಾನವೋ?
ಬೆಂಗಳೂರಿನ ಪೀಣ್ಯ ಫ್ಲೈಓವರ್ ಮೇಲೆ 4 ದಿನ ಎಲ್ಲಾ ವಾಹನ ಸಂಚಾರ ಬಂದ್, ಬದಲಿ ಮಾರ್ಗ ಪಟ್ಟಿ