
ಬೆಂಗಳೂರು (ಮೇ.28): 'ನಾನು ಮಾಧ್ಯಮದವರು ಸಾಕಷ್ಟು ಬಾರಿ ಸಿಎಂ ಸ್ಥಾನದ ಪ್ರಶ್ನೆ ಮಾಡಿದ್ದಾಗ ಹೇಳಿದ್ದು ಒಂದೇ ಮಾತು. ಹೈಕಮಾಂಡ್ ಏನು ಹೇಳುತ್ತೋ ಅದಕ್ಕೆ ಬದ್ಧ. ಅದರಂತೆ ಅವರು ನನಗೆ ರಾಜೀನಾಮೆ ನೀಡಲು ಸೂಚಿಸಿದ್ದರು. ಅದರಂತೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆ ಮೂಲಕ ದೀರ್ಘಾವಧಿಯ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಸಿಎಂ ಅವರ ಅಧಿಕಾರವಧಿ ಕೊನೆಗೊಂಡಂತಾಗಿದೆ.
ರಾಜ್ಯ ರಾಜಕಾರಣದ ಮಹಾತಿರುವಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಭವನದಲ್ಲಿ ರಾಜೀನಾಮೆ ಪತ್ರ ನೀಡಿದ ಬಳಿಕ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕಮಾಂಡ್ ಸೂಚನೆಯಂತೆ ನಾನು ಸಿಎಂ ಹುದ್ದೆಯನ್ನು ತ್ಯಜಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮ ಮಿತ್ರರನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, "ಮಾಧ್ಯಮದ ಸ್ನೇಹಿತರೇ ನಿಮ್ಮೆಲ್ಲರಿಗೂ ನಮಸ್ಕಾರ. ನಾನು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಭವನದಲ್ಲಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಆದರೆ, ಸದ್ಯ ರಾಜ್ಯಪಾಲರು ಊರಿನಲ್ಲಿ ಇಲ್ಲ. ಅವರು ಇವತ್ತು ರಾತ್ರಿ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ ಎಂದು ಅವರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ಕಚೇರಿಯ ಮುಖ್ಯ ಕಾರ್ಯದರ್ಶಿಯವರಿಗೆ ಹಸ್ತಾಂತರಿಸಿ ಬಂದಿದ್ದೇನೆ" ಎಂದು ಪ್ರಕ್ರಿಯೆಯ ಸಂಪೂರ್ಣ ವಿವರ ನೀಡಿದರು.
ತಮ್ಮ ರಾಜೀನಾಮೆಯ ಹಿಂದಿನ ಹೈಕಮಾಂಡ್ ರಹಸ್ಯವನ್ನು ಮುಕ್ತವಾಗಿ ಒಪ್ಪಿಕೊಂಡ ಸಿದ್ದರಾಮಯ್ಯ, "ನಾನು ಮೊದಲಿನಿಂದಲೂ ಒಂದು ಮಾತನ್ನು ಸ್ಪಷ್ಟವಾಗಿ ಹೇಳುತ್ತಾ ಬಂದಿದ್ದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ನನಗೆ ಯಾವಾಗ ಸೂಚನೆ ನೀಡುತ್ತಾರೋ, ಆ ತಕ್ಷಣವೇ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ. ಅದರಂತೆ, ಮೊನ್ನೆ ಹೈಕಮಾಂಡ್‌ನಿಂದ ನನಗೆ 'ರಾಜೀನಾಮೆ ನೀಡಿ' ಎಂಬ ಸಂದೇಶ ಬಂದಿತ್ತು. ಅದರ ಪ್ರಕಾರವೇ ಇಂದು (ಗುರುವಾರ) ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ, ಈಗ ಅದರಂತೆಯೇ ನಡೆದುಕೊಂಡು ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ನುಡಿದರು.
ರಾಜ್ಯಪಾಲರು ಬಂದ ಮೇಲೆ ರಾಜಿನಾಮೆ ಪತ್ರ ಅಂಗೀಕಾರ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ಮಾಡಲೇಬೇಕು. ಅವರ ನಿಯಮಗಳ ಪ್ರಕಾರ ಏನು ಮಾಡ್ತಾರೋ ಅವರಿಗೆ ಬಿಟ್ಟಿದ್ದರು. ಸಿಎಂ ರಾಜೀನಾಮೆ ಕೊಟ್ಟ ಮೇಲೆ ಅದನ್ನ ಅಂಗೀಕಾರ ಮಾಡಬೇಕು. ಮುಂದಿನ ಮುಖ್ಯಮಂತ್ರಿ ಗೆ ಅನುವು ಮಾಡಿಕೊಡಬೇಕಾದದ್ದು ಅವರ ಜವಾಬ್ದಾರಿ. ನಮ್ಮ ಪಕ್ಷ 135+1 ಸ್ಥಾನ ಪಡೆದಿದ್ದೇವೆ. ಜೊತಗೆ ಇಬ್ಬರು ಪಕ್ಷೇತರರು ಬೆಂಬಲ ವ್ಯಕ್ತಪಡಿಸಿದ್ದಾರೆ. ನಾವು ಸಂಪೂರ್ಣ ಬಹುಮತದಲ್ಲಿ ಇದ್ದೇವೆ. ಮುಂದಿನ ಮುಖ್ಯಮಂತ್ರಿಗೆ ಅವಕಾಶ ಮಾಡಿಕೊಡಬೇಕಾದದ್ದು ಸಂವಿಧಾನ ಬದ್ದವಾಗಿ ಇದೆ ಎಂದು ಹೇಳಿದ್ದಾರೆ.
ಕರ್ನಾಟಕ ಮೇರು ನಟ ರಾಜ್ ಕುಮಾರ್ ಅಭಿಮಾನಿ ದೇವರು ಅಂತ ಕರೆಯುತ್ತಿದ್ದರು. ನಾನು ರಾಜಕಾರಣಿ, ನಾನು ಸಂವಿಧಾನವೇ ನಮ್ಮ ಧರ್ಮ ಅಂತ ತಿಳಿದವನು. ಮತದಾರರೇ ನಮ್ಮ ಅಭಿಮಾನಿ ದೇವರು. ಕನ್ನಡ ನಾಡಿನ ಏಳು ಕೋಟಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಎರಡು ಬಾರಿ ವಿಪಕ್ಷ ನಾಯಕ ಆಗುವ ಅವಕಾಶ ಸಿಕ್ಕಿತ್ತು. ಈ ಅವಕಾಶ ಕೊಟ್ಟಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ, ನಮ್ಮ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಂದರ್ಭದಲ್ಲಿ ಅಪಾರ ಧನ್ಯವಾದ ತಿಳಿಸುತ್ತೇನೆ. ನಾನು ಕಾಂಗ್ರೆಸ್ ಸೇರಿದ್ದು 2006, ಆಗಿನಿಂದಲೂ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು, ಸಂಸದರು, ನನಗೆ ಪ್ರೀತಿ ತೋರಿಸಿದ್ದಾರೆ, ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು.
2013 ರಿಂದ 2018 ವರೆಗೆ 2023 ರಿಂದ ಇಲ್ಲಿಯವರೆಗೆ ನನ್ನ ಜೊತೆ ಕೆಲಸ ಮಾಡಿ ಸಹೋದ್ಯೋಗಿಗಳು ಎಲ್ಲಾ ರೀತಿಯ ಬೆಂಬಲ ಮತ್ತು ಸಹಕಾರ ಪ್ರೀತಿ ವ್ಯಕ್ತ ಪಡಿಸಿದ್ದಾರೆ. ಅವರಿಗೆ ನಾನು ಋಣಿ ಆಗಿರುತ್ತೇನೆ. ನಾನು ಹಳ್ಳಿಗಾಡಿನಿಂದ ಬಂದವನು. ನಾನು ಮುಂದೊಂದು ದಿನ ಶಾಸಕ ಆಗ್ತೇನೆ, ಮಂತ್ರಿ ಆಗ್ತೇನೆ, ಮುಖ್ಯಮಂತ್ರಿ ಆಗ್ತೇನೆ, ಮುಖ್ಯಮಂತ್ರಿ ಆಗ್ತೇನೆ ಅಂತ ಕಸನು ಕೂಡ ಕಂಡಿರಲಿಲ್ಲ. ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ. ನಮ್ಮ ಕುಟುಂಬದವರು ಯಾರೂ ರಾಜಕಾರಣಲ್ಲಿ ಇರಲಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ