
ಬೆಂಗಳೂರು (ಏ.23): ವಾಯುಪಡೆಯ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ರಾಜ್ಯದ ವಿಕಾಸ್ ಕುಮಾರ್ ಎಂಬಾತನ ಮೇಲೆ ನಡೆಸಿದ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಕನ್ನಡಿಗರಿಗೆ ಅವಮಾನ ಮಾಡುವಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಘಟನೆ ನಂತರ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಕನ್ನಡಿಗರಿಗೆ ಅವಮಾನ ವಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿರುವುದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿ.ವಿ. ರಾಮನ್ ನಗರದಲ್ಲಿ ತಮ್ಮ ಕಾರಿಗೆ ವಿಕಾಸ್ ಕುಮಾರ್ ಬೈಕ್ ತಾಗಿದ್ದಕ್ಕಾಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಂಬಾತ ವಿಕಾಸ್‌ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಸಾಮಾ ಜಿಕ ಜಾಲತಾಣದಲ್ಲಿ ಕರ್ನಾಟಕ ಮತ್ತು ಕನ್ನಡಿಗರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕನ್ನಡಿಗರ ಸ್ವಾಭಿಮಾನ ಕೆಣಕುವ ದುಷ್ಟತನ ಮೆರೆದಿದ್ದಾರೆ. ಕನ್ನಡಿಗರು ಮಾತೃಭಾಷೆ ಬಗ್ಗೆ ಅಭಿಮಾನ ಹೊಂದಿದ್ದಾರೆಯೇ ಹೊರತು ದುರಭಿಮಾನಿಗಳಲ್ಲ, ಭಾಷೆಯ ವಿಚಾರಕ್ಕೆ ವಿನಾಕಾರಣ ಇತರರ ಮೇಲೆ ಹಲ್ಲೆ ಮಾಡುವ ಅಥವಾ ನಿಂದಿಸುವ ಸಣ್ಣತನ ಕನ್ನಡಿಗರದ್ದಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕನ್ನಡದ ಸರ್ಕಾರವಿದೆ: ದೇಶದ ವಿವಿಧ ಭಾಗಗಳಿಂದ ಇಲ್ಲಿ ಬಂದು ನೆಲೆಸಿರುವ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತಿರುವ, ಅವರನ್ನೂ ಕನ್ನಡಿಗರೇ ಎಂದು ಪ್ರೀತಿಸುವ ಸಂಸ್ಕೃತಿ ಕನ್ನಡ ಮಣ್ಣಿನದ್ದು. ಅದಕ್ಕೆ ಇತಿಹಾಸವೇ ಸಾಕ್ಷಿ. ಹಾಗೆಯೇ, ಕನ್ನಡಿಗರು ಉದ್ವೇಗ ಅಥವಾ ಪ್ರಚೋದನೆಗೆ ಒಳಗಾಗಿ ಕಾನೂನು ಕೈಗೆತ್ತಿಕೊಳ್ಳ ಬಾರದು. ರಾಜ್ಯದಲ್ಲಿ ಕನ್ನಡಿಗರಿಂದ ಆಯ್ಕೆಯಾದ ಕನ್ನಡದ್ದೇ ಸರ್ಕಾರ ವಿದೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾರೇ ಆಗಿದ್ದರೂ, ಯಾವುದೇ ಹುದ್ದೆಯಲ್ಲಿದ್ದರೂ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದೇನೆ.
ಮಹಾರಾಷ್ಟ್ರದಲ್ಲಿ ಹಿಂದಿ ಹೇರಿಕೆಗೆ ತಡೆ, ರಾಜ್ಯದಲ್ಲಿ ಬೀಳುತ್ತಾ ಬ್ರೇಕ್?
ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ. ಅದರ ಜತೆಗೆ ರಾಷ್ಟ್ರೀಯ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ವೃತ್ತಿ ಧರ್ಮ ಮರೆತು ಯಾರೋ ಒಬ್ಬ ಮಾಡಿದ ಆಧಾರ ರಹಿತ ಆರೋಪವನ್ನು ಹಿಡಿದುಕೊಂಡು ಇಡೀ ಕರ್ನಾಟಕದ ಘನತೆಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದು ನಿಜಕ್ಕೂ ವಿಷಾದನೀಯ. ಇದರಿಂದ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿಗೂ ಘಾಸಿಯಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ