
ಬೆಂಗಳೂರು(ಸೆ.26): ಕಾವೇರಿ ಬಿಕ್ಕಟ್ಟು ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಕೋರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪತ್ರ ಬರೆದಿರುವುದನ್ನು ಸ್ವಾಗತಿಸುತ್ತೇವೆ. ಮೋದಿ ಅವರು ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸಬೇಕು. ಜತೆಗೆ ಇದರಿಂದ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೇಲೆ ಈ ಬಗ್ಗೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಟ್ವೀಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬರೆದಿರುವ ಪತ್ರವನ್ನು ಪೋಸ್ಟ್ ಮಾಡಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಈ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ ಎಂದಿದ್ದಾರೆ.
ಕಾವೇರಿಗಾಗಿ ಬಂದ್: ರಾಜ್ಯ ಹಿತದ ಹೋರಾಟಕ್ಕೆ ಸಹಕಾರ, ಡಿಕೆಶಿ
ಹೀಗಾಗಿ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡರ ಮನವಿಯನ್ನು ಪುರಸ್ಕರಿಸಿ, ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ. ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಎಚ್.ಡಿ.ದೇವೇಗೌಡರ ಈ ನಿರ್ಧಾರದಿಂದಾದರೂ ಪ್ರೇರಣೆ ಪಡೆದು ರಾಜ್ಯ ಬಿಜೆಪಿ ನಾಯಕರು ಮತ್ತು ಆ ಪಕ್ಷದ ಸಂಸದರು ಸೇರಿ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಡ ಹೇರಬೇಕು. ಅತೀ ಶೀಘ್ರದಲ್ಲಿ ರಾಜ್ಯದ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನ ಮಂತ್ರಿ ಭೇಟಿ ಮಾಡುವಂತೆ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ನೆಲ-ಜಲ-ಭಾಷೆಯ ಹಿತಾಸಕ್ತಿಯ ರಕ್ಷಣೆಯ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಭಿನ್ನಮತಗಳನ್ನು ಮರೆತು ಒಟ್ಟಾಗಿ ಸಮಸ್ಯೆಯ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವ ಇತಿಹಾಸ ಕರ್ನಾಟಕ ರಾಜ್ಯಕ್ಕೆ ಇದೆ. ಈ ಪರಂಪರೆಯನ್ನು ಜೆಡಿಎಸ್ ಪಕ್ಷದಂತೆ ಬಿಜೆಪಿ ಕೂಡಾ ಪಾಲಿಸಿಕೊಂಡು ಬರುತ್ತದೆ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ