ನುಡಿದಂತೆ ನಡೆವ ಸಿಎಂ ಸಿದ್ದರಾಮಯ್ಯನವರೇ.., ಈ ಬಡವನಿಗೆ ಕೊಟ್ಟ ಮಾತು ಮರೆತೋಯ್ತಾ?

Published : Feb 26, 2025, 09:40 PM ISTUpdated : Feb 26, 2025, 09:56 PM IST
ನುಡಿದಂತೆ ನಡೆವ ಸಿಎಂ ಸಿದ್ದರಾಮಯ್ಯನವರೇ.., ಈ ಬಡವನಿಗೆ ಕೊಟ್ಟ ಮಾತು ಮರೆತೋಯ್ತಾ?

ಸಾರಾಂಶ

ಕೊಡಗಿನಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡ ಬಡ ದಂಪತಿಗೆ ಸಿಎಂ ಸಿದ್ದರಾಮಯ್ಯ ನೀಡಿದ್ದ ಭರವಸೆ ಹುಸಿಯಾಗಿದೆ. ಪರಿಹಾರ ಮತ್ತು ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರೂ, 7 ತಿಂಗಳಾದರೂ ಯಾವುದೇ ನೆರವು ಸಿಕ್ಕಿಲ್ಲ.

ವರದಿ : ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಫೆ.26): ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ನಾನು ಬಡವರಪರ, ಬಡವರಪರ ಎನ್ನುತ್ತಿರುತ್ತಾರೆ. ಆದರೆ, ತೀವ್ರ ಮಳೆಗೆ ಇದ್ದ ಮನೆಯೊಂದನ್ನು ಕಳೆದುಕೊಂಡು ಬೀದಿಗೆ ಬಂದಿದ್ದ ಕುಟುಂಬವನ್ನು ಭೇಟಿಯಾಗಿದ್ದಾಗ ಕೊಟ್ಟಿದ್ದ ಭರವಸೆಯನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ಅಂದರೆ, ಸಿಎಂ ಸಿದ್ದರಾಮಯ್ಯ  ಬಡವರನ್ನೇ ಮರೆತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.

ಹೌದು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮಾದಾಪಟ್ಟಣದಲ್ಲಿ ಕಳೆದ 7 ತಿಂಗಳ ಹಿಂದೆ ಅಂದರೆ 2024 ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಬಸವರಾಜು, ಸುಶೀಲ ದಂಪತಿಯ ಮನೆ ಕುಸಿದು ಬಿದ್ದಿತ್ತು. ಈ ವೇಳೆ ಮಳೆ ಹಾನಿ ವೀಕ್ಷಣೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರು ಮಾದಾಪಟ್ಟಣಕ್ಕೆ ಭೇಟಿ ನೀಡಿ, ಬಿದ್ದಿದ್ದ ಮನೆಯನ್ನು ವೀಕ್ಷಿಸಿದ್ದರು. ಕಣ್ಣೀರು ಇಡುತ್ತಿದ್ದ ದಂಪತಿಗೆ ಸಾಂತ್ವನ ಹೇಳಿ ಪರಿಹಾರ ನೀಡಲಾಗುವುದು ಜೊತೆಗೆ ಮನೆಯನ್ನು ಕಟ್ಟಿಕೊಡುತ್ತೇವೆ. ಚಿಂತೆ ಮಾಡಬೇಡಮ್ಮ ಎಂದು ಭರವಸೆ ನೀಡಿ ಹೋಗಿದ್ದರು. ಹೀಗೆ ಭರವಸೆ ನೀಡಿ ಬರೋಬ್ಬರಿ 7 ತಿಂಗಳು ಕಳೆದು ಹೋಗಿವೆ. ಆದರೆ ಮನೆ ಕಟ್ಟಿಸಿಕೊಡುವ ಮಾತಿರಲಿ, ಕನಿಷ್ಠ ಪರಿಹಾರವನ್ನು ತಲುಪಿಸಲಿಲ್ಲ.

ಎನ್‌ಡಿಆರ್‌ಎಫ್‌ನಿಂದ ದೊರೆಯುವ 1.20 ಲಕ್ಷ ರೂ. ಪರಿಹಾರ ಹಣ ಮಾತ್ರವೇ ಈ ಕುಟುಂಬಕ್ಕೆ ತಲುಪಿದೆ. ಇದನ್ನು ಬಿಟ್ಟರೆ ರಾಜ್ಯದಿಂದ ನಯಾಪೈಸೆ ಪರಿಹಾರ ಸಿಗಲಿಲ್ಲ. ಮನೆ ಕಟ್ಟಿಕೊಡುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಈ ಕುಟುಂಬವನ್ನು ಸಂಪೂರ್ಣ ಮರೆತಿದೆ. ಕೇಂದ್ರ ಸರ್ಕಾರದ ಪರಿಹಾರ ನಿಧಿಯಿಂದ ಮನೆಗೆ ಪಾಯ ಹಾಕಿ ನಿಮಗೆ ಉಳಿದ ಹಣ ಬರುತ್ತದೆ ಎಂದು ಅಧಿಕಾರಿಗಳು ಹೇಳಿದ್ದರಿಂದ ಇಳಿವಯಸ್ಸಿನ ಬಸವರಾಜು ಕಾಯುತ್ತಾ ಕುಳಿತಿದ್ದಾರೆ. ವಿಪರ್ಯಾಸವೆಂದರೆ ಸರ್ಕಾರ ಮತ್ತು ಅಧಿಕಾರಿಗಳ ಮಾತು ನಂಬಿ ಒಂದಿಷ್ಟು ಸಾಲ ಮಾಡಿ ಮನೆಗೆ ಬುನಾದಿ ಹಾಕಿದ ಬಳಿಕ ಇನ್ನಾವುದೇ ಪರಿಹಾರ ಸಿಗಲೇ ಇಲ್ಲ.

ಇದನ್ನೂ ಓದಿ: ಗದಗ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನಕ್ಕೆ ಅನುದಾನ ಬಿಡುಗಡೆಗೆ ಆಗ್ರಹ

ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು ಬೇಕಾಗಿರುವ ನೆರವನ್ನು ನೀಡಲಿಲ್ಲ. ಮತ್ತೊಂದೆಡೆ ಕಳೆದ 7 ತಿಂಗಳಿನಿಂದ ಮಾದಾಪಟ್ಟಣದಲ್ಲೇ ಮನೆಯೊಂದನ್ನು ಬಾಡಿಗೆ ಪಡೆದು ಅದರಲ್ಲಿ ಜೀವನ ನಡೆಸುತ್ತಿದ್ದಾರೆ. ಆ ಮನೆಗೆ ಪ್ರತೀ ತಿಂಗಳು 5 ಸಾವಿರ ಬಾಡಿಗೆ ಕಟ್ಟಬೇಕು. ಕೂಲಿ ಮಾಡಿ ಬದುಕು ದೂಡುತ್ತಿರುವ ಈ ವೃದ್ಧ ದಂಪತಿ ಬಾಡಿಗೆಯನ್ನು ಕಟ್ಟಲಾಗದೆ, ಮನೆಯನ್ನು ಮಾಡಿಕೊಳ್ಳಲಾಗದೆ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಗಿದೆ. 2018 ರಲ್ಲಿ ಮನೆ ಕಳೆದುಕೊಂಡವರಿಗೆ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗಿತ್ತು. ಜೊತೆಗೆ ಮನೆ ನಿರ್ಮಿಸಿಕೊಡುವವರೆಗೆ ಮನೆ ಬಾಡಿಗೆಯ ಹಣವನ್ನು ಕೊಡಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರದಲ್ಲಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರದ ಹಣವನ್ನು ನೀಡಲಾಗಿತ್ತು. ಆದರೆ, ಈಗಿನ ಸರ್ಕಾರದ ಸಂದರ್ಭದಲ್ಲಿ ಮನೆ ಕಳೆದುಕೊಂಡ ಈ ಕುಟುಂಬಕ್ಕೆ ನಯಾಪೈಸೆ ಪರಿಹಾರ ನೀಡಿಲ್ಲ.

ಈ ಕುರಿತು ಮಾತನಾಡಿರುವ ಬಸವರಾಜು, ನಮ್ಮ ಮನೆ ಬಿದ್ದಾಗ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ನಮಗೆ ಸಾಂತ್ವನ ಹೇಳಿ ಪರಿಹಾರದ ಜೊತೆಗೆ ಮನೆಯನ್ನು ಕಟ್ಟಿಸಿಕೊಡುವುದಾಗಿ ಹೇಳಿದ್ದರು. ಹೀಗೆ ಹೇಳಿ 7 ತಿಂಗಳೇ ಕಳೆದು ಹೋಗಿದೆ. ಎನ್ ಡಿ ಆರ್ ಎಫ್ ನಿಂದ 1. 20 ಲಕ್ಷ ಪರಿಹಾರ ದೊರೆತ್ತಿರುವುದು ಬಿಟ್ಟರೆ ಬೇರೆ ಏನೂ ಇಲ್ಲ. ಮನೆಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆಯಿಂದ ಬಂದ ಪರಿಹಾರದ ಹಣದಲ್ಲಿ ಬುನಾದಿ ಮಾಡಿದೆವು. ಇದೀಗ ಯಾವ ಹಣ ಬರುತ್ತಿಲ್ಲ. ಕನಿಷ್ಠ ಮನೆ ಕಟ್ಟಿಸಿಕೊಟ್ಟರೆ ಉಪವಾಸವಿದ್ದರೂ ಹೇಗೋ ನೆಮ್ಮದಿಯಿಂದ ಬದುಕುತ್ತೇವೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಇದೇನು ರೈತ ವಿರೋಧಿ ಸರ್ಕಾರವೇ? ಚಿಕ್ಕಮಗಳೂರು ರೈತನಿಗೆ 3 ಲಕ್ಷ ರೂ. ವಿದ್ಯುತ್ ಬಿಲ್ ಕೊಟ್ಟ ಮೆಸ್ಕಾಂ!

ಈ ಕುರಿತು ಶಾಸಕ ಮಂತರ್ ಗೌಡ ಅವರನ್ನು ಕೇಳಿದರೆ, ಮನೆ ಬಿದ್ದ ಸ್ಥಳಕ್ಕೆ ಸಿಎಂ ಭೇಟಿ ನೀಡಿದ್ದರು. ಮನೆ ಕೊಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಅವರಿಗೆ ಮನೆ ನೀಡಲು ಸಾಧ್ಯವಾಗಿಲ್ಲ. ಈ ಕುರಿತು ಅದನ್ನು ಕೂಡಲೇ ಮಾಡುತ್ತೇವೆ ಎಂದಿದ್ದಾರೆ. ಏನೇ ಆಗಲಿ ಬಡವರಪರ ಎನ್ನುವ ಸಿಎಂ ಸಿದ್ದರಾಮಯ್ಯನವರು ತಾವು ಭೇಟಿಯಾಗಿ ಪರಿಹಾರದ ಭರವಸೆ ನೀಡಿ ಮರೆತುಬಿಟ್ರಾ ಎನ್ನುವ ಅನುಮಾನ ದಟ್ಟವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!