ಭಾಷಣದ ವೇಳೆ ಡೀಸೆಲ್‌ ಪೆಟ್ರೋಲ್ ಬೆಲೆ ಕಡಿಮೆ ಮಾಡಲು ಕೂಗಾಡಿದ ಸಭಿಕ, ಮೋದಿಗೆ ವೋಟ್ ಒತ್ತಿದ್ಯಲ್ಲ ಆಗ ನೆನಪಾಗಿಲ್ವಾ ಎಂದ ಸಿಎಂ

Published : Oct 21, 2025, 04:01 PM IST
CM Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಂಧಿನಗರದಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರನ್ನು ಶ್ಲಾಘಿಸಿ, ಬೆಂಗಳೂರು ಅಭಿವೃದ್ಧಿಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಡಿಸಿಎಂ ಜೊತೆಯಲ್ಲಿದ್ದರು.

ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಎಂಟು ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ದಿನೇಶ್ ಗುಂಡೂರಾವ್ ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಜಿಬಿಎ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಿನೇಶ್ ಗುಂಡೂರಾವ್ ಅವರ ಸಮಾಜಮುಖಿ ನಾಯಕತ್ವಕ್ಕೆ ಸಿಎಂ ಪ್ರಶಂಸೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಸಚಿವ ದಿನೇಶ್ ಗುಂಡೂರಾವ್ ಅವರನ್ನು ಶ್ಲಾಘಿಸಿ, ದಿನೇಶ್ ಗುಂಡೂರಾವ್ ಸಮಾಜಮುಖಿ ಶಾಸಕ. ಅವರು ಸದಾ ಬೆಂಗಳೂರಿನ ಅಭಿವೃದ್ಧಿಯ ವಿಷಯವಾಗಿ ಚಿಂತಿಸುತ್ತಾರೆ. ಇಂತಹ ಶಾಸಕರನ್ನು ಪಡೆದಿರುವ ಗಾಂಧಿನಗರದ ಮತದಾರರು ಪುಣ್ಯವಂತರು ಎಂದು ಹೇಳಿದರು. ಗುಂಡೂರಾವ್ ಆರು ಬಾರಿ ಗೆದ್ದಿದ್ದಾರೆ, ಈ ಬಾರಿ ಅಲ್ಪ ಅಂತರದಲ್ಲಿ ಗೆದ್ದರೂ ಮುಂದಿನ ಬಾರಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ನಮಗೆ ವಯಸ್ಸಾಗಿದೆ, ಆದರೆ ದಿನೇಶ್‌ರಿಗೆ ಇನ್ನೂ ರಾಜಕೀಯದಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬದ್ಧತೆ

ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರಿನ ವೇಗದ ಬೆಳವಣಿಗೆ ಕುರಿತು ಮಾತನಾಡುತ್ತಾ, ಇದು ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಈಗಾಗಲೇ 1 ಕೋಟಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ನಗರಕ್ಕೆ ನೀರು, ಸಾರಿಗೆ, ಚರಂಡಿ ಮತ್ತು ವ್ಯಾಪಾರ ಸೌಕರ್ಯಗಳು ಅತ್ಯಗತ್ಯ ಎಂದು ಹೇಳಿದರು.

ಮೆಟ್ರೋ ಯೋಜನೆ ಕುರಿತು ಉಲ್ಲೇಖಿಸಿ

ಮೊದಲಿಗೆ ಮೆಟ್ರೋ ಯೋಜನೆಗೆ ರಾಜ್ಯ ಮತ್ತು ಕೇಂದ್ರ 50-50 ಅನುಪಾತ ಎಂದು ಕೊಂಡಿದ್ದೆವು. ಆದರೆ ಈಗ ನಾವು 87% ಹೊಣೆ ಹೊತ್ತುಕೊಂಡಿದ್ದೇವೆ, ಕೇಂದ್ರ ಸರ್ಕಾರ ಕೇವಲ 12% ಮಾತ್ರ ಕೊಟ್ಟಿದೆ. ಮುಂಬೈ ನಂತರ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕ. ನಾವು ಕೇಂದ್ರಕ್ಕೆ ₹1 ನೀಡಿದರೆ, ಪ್ರತಿಯಾಗಿ ಕೇವಲ 14–15 ಪೈಸೆ ಮಾತ್ರ ವಾಪಸ್ಸು ಬರುತ್ತದೆ. ಅದನ್ನು ಬಿಜೆಪಿ ನಾಯಕರು ‘ಗಿಫ್ಟ್’ ಎಂದು ಹೇಳಿಕೊಳ್ಳುತ್ತಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಿಡಿಕಾರಿದ ಸಿಎಂ

ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ತೆರಿಗೆ ನೀತಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಎಸ್ಟಿ ವ್ಯವಸ್ಥೆ ಆರಂಭಿಸಿದವರು ಮೋದಿ. ನಾಲ್ಕು ರೇಟ್‌ಗಳನ್ನು ಮಾಡಿದ್ದು ಅವರೇ. ಈಗ ಎರಡು ರೇಟ್‌ಗಳನ್ನು ಮಾಡಿದ್ದಾರೆ. ಎಂಟು ವರ್ಷಗಳಿಂದ ತೆರಿಗೆ ವಸೂಲಿ ಮಾಡುತ್ತಿದ್ದರೂ ಕರ್ನಾಟಕಕ್ಕೆ ಬಾಕಿಯಾದ ₹15,000 ಕೋಟಿ ನೀಡಿಲ್ಲ. ಈ ಹಣದಿಂದ ರಾಜ್ಯದ ಅಭಿವೃದ್ಧಿ ಕೆಲಸಗಳಲ್ಲಿ ವಿಳಂಬ ಉಂಟಾಗಿದೆ ಎಂದರು.

ಹದಿನೈದು ಸಾವಿರ ಕೋಟಿ ಕರ್ನಾಟಕಕ್ಕೆ ಬರಬೇಕು. ಇದರ ಪರಿಣಾಮ ನಾವು ಕಲೆಕ್ಟ್ ಮಾಡಿಕೊಡುತ್ತಿದ್ದ ಜಿಎಸ್ಟಿಯಲ್ಲಿ ಕರ್ನಾಟಕಕ್ಕೆ ಬರುವ 15 ಸಾವಿರ ಕೋಟಿ ನಷ್ಟ ಆಯ್ತು. ಮೋದಿ ಫೋಟೋ ಹಾಕಿಸಿಕೊಂಡು ದೀಪಾವಳಿ ಗಿಫ್ಟ್ ಅಂತೆ ಎಂದರು. ಈ ವೇಳೆ ಡೀಸೆಲ್‌ ಪೆಟ್ರೋಲ್ ಕಡಿಮೆ ಮಾಡಬೇಕೆಂದು ಸಬಿಕ ಕೂಗಾಡಿದ. ನಾನಲ್ಲ, ನೀನು ಹೇಳಬೇಕು. ಮೋದಿಗೆ ವೋಟ್ ಒತ್ತಿದ್ಯಲ್ಲ ಅವಾಗ ನೆನಪು ಆಗಿಲ್ಲವಾ ನಿನಗೆ ಎಂದು ಪ್ರಶ್ನಿಸಿದ ಸಿಎಂ, ಈ ವೇಳೆ ಅವನನ್ನು ಕಳುಹಿಸಲು ಮುಂದಾದ ಪೊಲೀಸರು, ಅವನನ್ನು ಬಿಡಿ ಪ್ರಶ್ನೆ ಕೇಳಿದ್ದರಲ್ಲಿ ತಪ್ಲೇನಿಲ್ಲ ಎಂದ ಸಿಎಂ.

ದೀಪಾವಳಿ ವೇಳೆ ಪ್ರಧಾನಿ ಮೋದಿ ಪ್ರಕಟಿಸಿದ ಗಿಫ್ಟ್ ಪ್ಯಾಕೇಜ್ ಕುರಿತು ಟೀಕಿಸಿ, ಮೋದಿ ಫೋಟೋ ಹಾಕಿಸಿಕೊಂಡು ದೀಪಾವಳಿ ಗಿಫ್ಟ್ ಅಂತೆ! ಗಿಫ್ಟ್ ಕೊಡಬೇಕಾದರೆ ಡೀಸೆಲ್ ಮತ್ತು ಪೆಟ್ರೋಲ್ ದರ ಕಡಿಮೆ ಮಾಡಲಿ ಎಂದರು. ಜನರಿಂದ ಪ್ರತಿಕ್ರಿಯೆ ಬಂದಾಗ ಪೊಲೀಸರು ಆ ವ್ಯಕ್ತಿಯನ್ನು ತಡೆಯಲು ಮುಂದಾದಾಗ, ಸಿಎಂ ಅವರು ತಡೆದ ಪೊಲೀಸರನ್ನೇ ತಡೆಯುತ್ತಾ, ಪ್ರಶ್ನೆ ಕೇಳಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರದ ಅಭಿವೃದ್ಧಿ ದೃಷ್ಟಿಕೋನ

ನಮ್ಮ ಸರ್ಕಾರ ಬೆಂಗಳೂರು ಅಭಿವೃದ್ಧಿಗಾಗಿ ₹1 ಲಕ್ಷ 25 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇವರು (ಬಿಜೆಪಿ) ಒಂದು ಗುಂಡಿಗೂ ಮಣ್ಣು ಹಾಕಿಲ್ಲ. ಬದಲಿಗೆ ₹1 ಲಕ್ಷ 17 ಸಾವಿರ ಕೋಟಿ ಸಾಲ ಮಾಡಿ ನಮ್ಮ ಮೇಲೆ ಬಿಟ್ಟು ಹೋಗಿದ್ದಾರೆ. ನಾವು ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಅದೇ ರೀತಿ ಮೋದಿ ಸರ್ಕಾರ ಕೊಡಬಹುದಾ? ಎಂದು ಸಿಎಂ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಎಲ್ಲಾ ಶಾಸಕರಿಗೂ ನಿಧಿ ನೀಡಿರುವುದನ್ನು ಸ್ಮರಿಸಿದರು. ನಾನು ಎಲ್ಲ ಶಾಸಕರಿಗೂ ಬಿಜೆಪಿ ಶಾಸಕರಿಗೂ ಸಹ ಹಣ ನೀಡಿದ್ದೇನೆ. ಯಾಕೆಂದರೆ ಬೆಂಗಳೂರು ಅಭಿವೃದ್ಧಿ ಆಗಬೇಕಾದರೆ ಪಕ್ಷಪಾತ ಇರಬಾರದು. ಎಲ್ಲೆಡೆ ಗುಂಡಿಗಳನ್ನು ಮುಚ್ಚಿ, ರಸ್ತೆಗಳನ್ನು ಗುಣಮಟ್ಟದ ವೈಟ್ ಟ್ಯಾಪಿಂಗ್ ಮೂಲಕ ಬಲಪಡಿಸುತ್ತೇವೆ ಎಂದರು.

ವೈಟ್ ಟ್ಯಾಪಿಂಗ್‌ನಲ್ಲಿ ಯಾವುದೇ ರಾಜಿ ಇಲ್ಲ

ವೈಟ್ ಟ್ಯಾಪಿಂಗ್ ಮಾಡಿದರೆ ರಸ್ತೆಗಳು ಹಾಳಾಗುವುದಿಲ್ಲ. ಕನಿಷ್ಠ 30 ವರ್ಷಗಳ ಕಾಲ ಅವು ಶಕ್ತಿ ಉಳಿಸಬೇಕು. ಕಾಮಗಾರಿಯಲ್ಲಿ ಯಾವುದೇ ರೀತಿಯ ರಾಜಿ ಇರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮೋದಿ ಎಷ್ಟು ಒಳ್ಳೆಯವರಂತೆ ಕಾಣ್ತಾರೋ, ಅಷ್ಟೇ ಕರ್ನಾಟಕದ ಮೇಲೆ ದ್ವೇಷ ಇಟ್ಟುಕೊಂಡಿದ್ದಾರೆ. ₹11,495 ಕೋಟಿ ರೂಪಾಯಿ ಕೊಡಬೇಕಿತ್ತು, ಆದರೆ ಒಂದು ರೂಪಾಯಿಯನ್ನೂ ನೀಡಿಲ್ಲ. ನಿರ್ಮಾಲಾ ಸೀತಾರಾಮನ್ ಕೂಡ ಅಪ್ಪರ್ ಭದ್ರ ಯೋಜನೆಗೆ ₹5,300 ಕೋಟಿ ಕೊಡ್ತೀನಿ ಅಂದ್ರು, ಆದರೆ ಒಂದು ಪೈಸೆಯನ್ನೂ ಕೊಡಲಿಲ್ಲ ಎಂದು ಹೇಳಿದರು. ಸಂಸದರನ್ನು ಟೀಕಿಸುತ್ತಾ, ಪಿಸಿ ಮೋಹನ್ ಯಾವತ್ತಾದರೂ ಸಂಸತ್ತಿನಲ್ಲಿ ಕರ್ನಾಟಕದ ಪರವಾಗಿ ಮಾತನಾಡಿದ್ದಾರಾ? ಸೂರ್ಯನನ್ನು ನಾನು ಅಮಾವಾಸ್ಯೆ ಎನ್ನುತ್ತೇನೆ. ಕುಮಾರಸ್ವಾಮಿಯೂ ಕೇಂದ್ರದ ಮುಂದೆ ಬಾಯಿ ತೆರೆಯಲಿಲ್ಲ. ಇಂತಹವರನ್ನು ಮತ್ತೆ ಆಯ್ಕೆ ಮಾಡಬೇಕೆ? ಎಂದು ಪ್ರಶ್ನಿಸಿದರು.

ಜಿಬಿಎ ಕುರಿತು ಸ್ಪಷ್ಟನೆ

ಸಿಎಂ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕುರಿತು ಮಾತನಾಡುತ್ತಾ, ಬೆಂಗಳೂರು ವಿಭಜನೆ ಮಾಡಿಲ್ಲ, ಉತ್ತಮ ಆಡಳಿತಕ್ಕಾಗಿ ಐದು ಪಾಲಿಕೆಗಳನ್ನು ರಚಿಸಿದ್ದೇವೆ. ಜಿಬಿಎಗೆ ನಾನು ಅಧ್ಯಕ್ಷ, ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷ. ಸಚಿವರು, ಕಾರ್ಪೋರೇಟರ್‌ಗಳು ಸದಸ್ಯರಾಗಿ ಭಾಗವಹಿಸುತ್ತಾರೆ. ಸುರಂಗ ಮಾರ್ಗ, ಫ್ಲೈ ಓವರ್, ರಸ್ತೆ ಅಭಿವೃದ್ಧಿ ಎಲ್ಲವೂ ಬೆಂಗಳೂರಿನ ಜನರ ಸುಖಕ್ಕಾಗಿ ಎಂದು ಹೇಳಿದರು. ಜನರ ಸಹಕಾರವನ್ನು ಕೋರಿದ ಅವರು, ರಾತ್ರಿ ಹೊತ್ತು ಕಸ ಎಸೆಯಬೇಡಿ. ನಗರವನ್ನು ಸ್ವಚ್ಛವಾಗಿ, ವ್ಯವಸ್ಥಿತವಾಗಿ ಬೆಳಸಲು ಎಲ್ಲರ ಸಹಕಾರ ಅಗತ್ಯ ಎಂದರು. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ಅಂತ್ಯದಲ್ಲಿ ಗಾಂಧಿನಗರ ಮತದಾರರನ್ನು ಉದ್ದೇಶಿಸಿ ಹೇಳಿದರು. ದಿನೇಶ್ ಗುಂಡೂರಾವ್ ಅವರಂತಹ ಶ್ರಮಶೀಲ ಶಾಸಕರನ್ನು ಆಯ್ಕೆ ಮಾಡಿರುವುದು ನಿಮ್ಮ ಭಾಗ್ಯ. ಮುಂದಿನ ದಿನಗಳಲ್ಲಿ ಅವರ ನಾಯಕತ್ವದಲ್ಲಿ ಗಾಂಧಿನಗರ ಹಾಗೂ ಬೆಂಗಳೂರು ನಗರ ಮತ್ತಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಹಾರೈಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Glanders Disease Scare: ಮಾರಕ ರೋಗದ ಭೀತಿ, ರೇಸ್ ಕೋರ್ಸ್ ಸುತ್ತ ಕತ್ತೆ ಕುದುರೆ ಹೆಸರಗತ್ತೆ ಓಡಾಟಕ್ಕೆ ನಿರ್ಬಂಧ!
'ಎರಡನೆ ಬೆಳೆಗೆ ನೀರಿಲ್ಲ, ಸಸಿ ನಾಟಿ ಮಾಡಬೇಡಿ' ತುಂಗಭದ್ರಾ ರೈತರಿಗೆ ಸಚಿವ ತಂಗಡಗಿ ಅಚ್ಚರಿಯ ಸಲಹೆ!