
ಬೆಂಗಳೂರು (ಅ.10): ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ನವೆಂಬರ್ ಕ್ರಾಂತಿ ಮುನ್ಸೂಚನೆ ದೊರೆತ ಬೆನ್ನಲ್ಲೇ ಸಚಿವರಾದ ಡಾ.ಜಿ.ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರು ಪ್ರತ್ಯೇಕ ಸಭೆ ನಡೆಸಿದ್ದು, ದಲಿತ ಸಚಿವರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನರ್‌ರಚನೆ ಬಗ್ಗೆ ಮುನ್ಸೂಚನೆ ಲಭಿಸಿದ್ದು, ಅಧಿಕಾರ ಹಸ್ತಾಂತರದ ಊಹಾಪೋಹವೂ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಮೂರು ಸಚಿವರು ಖಾಸಗಿ ಸ್ಥಳದಲ್ಲಿ ಭೇಟಿ ಮಾಡಿ ಗುರುವಾರ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಪಕ್ಷ ಹಾಗೂ ಸರ್ಕಾರದಲ್ಲಿನ ಬೆಳವಣಿಗೆಗಳ ಆಧಾರದ ಮೇಲೆ ತಾವು ಯಾವ ರೀತಿಯ ತಂತ್ರದೊಂದಿಗೆ ಮುನ್ನಡೆಯಬೇಕು ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕುರುಬ ಸಮುದಾಯ ಎಸ್ಟಿಗೆ ಸೇರಿಸಲು ಮೊದಲು ಪ್ರಸ್ತಾಪಿಸಿದ್ದೇ ಸಿಎಂ ಸಿದ್ದರಾಮಯ್ಯ: ಬಸವರಾಜ ಬೊಮ್ಮಾಯಿ
ಹಿರಿಯ ಸಚಿವರಿಗೆ ಕೊಕ್ ನೀಡಿ ಪಕ್ಷ ಸೇವೆಯಲ್ಲಿ ತೊಡಗುವಂತೆ ಸೂಚಿಸುವ ಸಾಧ್ಯತೆಯಿದೆ. ಶೇ.50 -60 ರಷ್ಟು ಬದಲಾವಣೆ ಆದರೆ ನಮ್ಮಲ್ಲಿ ಯಾರ ಸ್ಥಾನಕ್ಕಾದರೂ ಚ್ಯುತಿ ಬರಬಹುದು. ಹೀಗಾದರೆ ಏನು ಮಾಡಬೇಕು? ಅಧಿಕಾರ ಹಸ್ತಾಂತರ ವಿಚಾರ ಮುನ್ನೆಲೆಗೆ ಬಂದು ಸಿದ್ದರಾಮಯ್ಯ ಅವರು ಅಧಿಕಾರದಿಂದ ಇಳಿಯುವ ಪರಿಸ್ಥಿತಿ ಬಂದರೆ ದಲಿತ ಮುಖ್ಯಮಂತ್ರಿ ವಿಚಾರ ಮುಂದಿಟ್ಟುಕೊಂಡು ಹೇಗೆ ಮುಂದುವರೆಯಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ದಲಿತ ನಾಯಕತ್ವ ಬಲಪಡಿಸುವ ಬಗ್ಗೆ ಹಾಗೂ ತಾಲೂಕು, ಜಿಲ್ಲಾ ಮಟ್ಟದಲ್ಲಿ ಅಹಿಂದ ಮಾದರಿಯಲ್ಲಿ ದಲಿತ ಸಂಘಟನೆ ಮಾಡುವ ಬಗ್ಗೆಯೂ ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಅ.13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣ ಕೂಟ ಏರ್ಪಡಿಸಿರುವ ಬಗ್ಗೆಯೂ ಚರ್ಚಿಸಿದ್ದು, ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಸಭೆ ಬಳಿಕ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಇದು ಮೀಟಿಂಗ್ ಅಲ್ಲ ಕೇವಲ ಈಟಿಂಗ್’ ಎಂದು ಹೇಳಿ ತೆರಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ