ಮುಡಾ ಹಗರಣ: ಸಿದ್ದು ತಪ್ಪು ಮಾಡಿಲ್ಲ, ಅವರ ಬೆನ್ನಿಗೆ ನಾವಿದ್ದೇವೆ, ಡಿ.ಕೆ.ಶಿವಕುಮಾರ್‌

By Kannadaprabha NewsFirst Published Sep 25, 2024, 6:52 AM IST
Highlights

ಸಿದ್ದರಾಮಯ್ಯ ಅವರು ಮಾಡಿರುವ ಕೆಲಸಗಳು, ರಾಜ್ಯದ ಜನರಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ನಮಗೆ ಕಾನೂನಿನ ಮೇಲೆ ಗೌರವವಿದೆ. ನಮಗೆ ನ್ಯಾಯ ಸಿಗುತ್ತದೆ. ಹಳ್ಳಿಯಿಂದ ದೆಹಲಿವರೆಗೆ ಸಿದ್ದರಾಮಯ್ಯ ಅವರಿಗೆ ಬೆಂಬಲವಿದೆ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌

ಬೆಂಗಳೂರು(ಸೆ.25):  ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಎಂತಹದ್ದೇ ತನಿಖೆ ನಡೆದರೂ ದೋಷಮುಕ್ತರಾಗುತ್ತಾರೆ. ಕಾಂಗ್ರೆಸ್‌ ಪಕ್ಷ ಮತ್ತು ರಾಜ್ಯ ಸರ್ಕಾರ ಸಿಎಂ ಜತೆ ನಿಲ್ಲಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಯಾವುದೇ ಹಗರಣದಲ್ಲೂ ಭಾಗಿಯಾಗಿಲ್ಲ. ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಯಾವುದೇ ತನಿಖೆ ನಡೆಸಿದರೂ ಸಿದ್ದರಾಮಯ್ಯ ಅವರು ದೋಷಮುಕ್ತರಾಗುತ್ತಾರೆ. ಬಿಜೆಪಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದಂತೆಯೇ ಮುಖ್ಯಮಂತ್ರಿಗಳ ವಿರುದ್ಧವೂ ಷಡ್ಯಂತ್ರ ರೂಪಿಸಿದೆ. ಬಿಜೆಪಿ ಮತ್ತು ಜೆಡಿಎಸ್‌ನ ಕುತಂತ್ರಕ್ಕೆ ನಮ್ಮ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಜಗ್ಗುವುದಿಲ್ಲ. ಕಾಂಗ್ರೆಸ್‌ ಪಕ್ಷ ಮತ್ತು ಸರ್ಕಾರ ಮುಖ್ಯಮಂತ್ರಿಗಳ ಜತೆ ನಿಲ್ಲಲಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Latest Videos

ಗೌರವದಿಂದ ಸಿಎಂ ಹುದ್ದೆ ತೊರೆಯಿರಿ: ವಿಜಯೇಂದ್ರ

ಸಿದ್ದರಾಮಯ್ಯ ಅವರು ಮಾಡಿರುವ ಕೆಲಸಗಳು, ರಾಜ್ಯದ ಜನರಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ನಮಗೆ ಕಾನೂನಿನ ಮೇಲೆ ಗೌರವವಿದೆ. ನಮಗೆ ನ್ಯಾಯ ಸಿಗುತ್ತದೆ. ಹಳ್ಳಿಯಿಂದ ದೆಹಲಿವರೆಗೆ ಸಿದ್ದರಾಮಯ್ಯ ಅವರಿಗೆ ಬೆಂಬಲವಿದೆ ಎಂದರು.

ಸಿದ್ದುರಂಥ ಶುದ್ಧ ಹಸ್ತ ಸಿಎಂ ಇಲ್ಲ

ಸಿದ್ದರಾಮಯ್ಯ ಅವರಂತಹ ಶುದ್ಧ ಹಸ್ತ ಮುಖ್ಯಮಂತ್ರಿ ಎಲ್ಲಿಯೂ ಸಿಗುವುದಿಲ್ಲ. ಅವರ ವಿರುದ್ಧದ ಆರೋಪಗಳೆಲ್ಲವೂ ವಿಪಕ್ಷಗಳ ಷಡ್ಯಂತ್ರವಷ್ಟೇ. ಹೈಕಮಾಂಡ್‌ ಅವರ ರಾಜೀನಾಮೆ ಕೇಳಿಲ್ಲ ಮತ್ತು ಕೇಳುವುದೂ ಇಲ್ಲ. ಎಲ್ಲ ಸಚಿವರು, ಶಾಸಕರು, ಕಾಂಗ್ರೆಸ್‌ ಪಕ್ಷ ಸಿಎಂ ಜತೆ ನಿಲ್ಲುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.  

ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ: ರಾಜೀವ್‌ ಚಂದ್ರಶೇಖರ್‌ ಒತ್ತಾಯ

ಇದೊಂದು ರಾಜಕೀಯ ಸಂಘರ್ಷವೂ ಹೌದು

ರಾಜ್ಯಪಾಲರ ಮೇಲೆ ಒತ್ತಡ ತಂದು ಮುಖ್ಯಮಂತ್ರಿಗಳ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಇದು ರಾಜಕೀಯ ಸಂಘರ್ಷವೂ ಹೌದು. ನಾವು ಕಾನೂನು ಹೋರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ನಾವು ಧೃತಿಗೆಡುವುದಿಲ್ಲ. ಸಿದ್ದರಾಮಯ್ಯ ಅವರೊಂದಿಗೆ ನಾವೆಲ್ಲ ಇದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. 

ಬಿಜೆಪಿ ರಾಜ್ಯಪಾಲರ ಕಚೇರಿ ದುರುಪಯೋಗ ಮಾಡಿಕೊಂಡಿದೆ. ಅವರ ಬಳಿ ರಾಜ್ಯಪಾಲರಿದ್ದರೆ, ನಮ್ಮ ಬಳಿ ಸಂವಿಧಾನವಿದೆ. ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಗುತ್ತದೆ. ದೆಹಲಿ, ಜಾರ್ಖಂಡ್‌ ಮುಖ್ಯಮಂತ್ರಿಗಳ ವಿರುದ್ಧ ಮಾಡಿದ ಕುತಂತ್ರಕ್ಕೆ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದೆ. ಸಿದ್ದರಾಮಯ್ಯ ವಿರುದ್ಧವೂ ಅದೇ ರೀತಿ ಷಡ್ಯಂತ್ರ ಮಾಡಲಾಗಿದೆ. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೇಳುವ ನೈತಿಕತೆ ವಿರೋಧ ಪಕ್ಷಗಳಿಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. 

click me!