
ನವದೆಹಲಿ (ಜೂ.12): ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದರು. ಈ ವೇಳೆ ರಾಜ್ಯದ ಪರ 18 ಬೇಡಿಕೆಗಳನ್ನು ಮಂಡಿಸಿ, ಅಗತ್ಯ ಅನುದಾನ, ನೆರವು, ಅನುಮತಿ ನೀಡುವಂತೆ ಮನವಿ ಮಾಡಿದರು.
ನೀತಿ ಆಯೋಗ(Niti Ayoga)ದ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್(DK Shivakumar) ಸಭೆಯ ಬಳಿಕ ಗುರುವಾರ ಪ್ರಧಾನಿ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಮೋದಿ ಅವರಿಗೆ ಬಸವಣ್ಣನ ಮೂರ್ತಿ ನೀಡಿ ಸನ್ಮಾನಿಸಿದರು.
‘ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕ ಯಾವಾಗಲೂ ಪ್ರಮುಖ ಕೊಡುಗೆ ನೀಡಿದೆ. ಅಭಿವೃದ್ಧಿಗೆ ವೇಗ, ಹೆಚ್ಚಿನ ಅವಕಾಶ ಆಕರ್ಷಿಸಲು ಮತ್ತು ರಾಜ್ಯದ ಜನರ ಆಕಾಂಕ್ಷೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದರು.
1.ಮೇಕೆದಾಟು ಯೋಜನೆಗೆ ಶೀಘ್ರವಾಗಿ ಅನುಮತಿ ದೊರೆಯುವಂತೆ ನೋಡಿಕೊಳ್ಳಬೇಕು
2. ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ ತೀರ್ಪು ಪ್ರಕಟವಾಗಿ ದಶಕಕ್ಕೂ ಅಧಿಕ ಸಮಯ ಕಳೆದಿದ್ದರೂ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಅದನ್ನು ಪ್ರಕಟಿಸಬೇಕು.
3. ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್‌ನಲ್ಲಿ 5300 ಕೋಟಿ ರು. ನೆರವು ಘೋಷಿಸಲಾಗಿತ್ತು. ಅದನ್ನು ಬಿಡುಗಡೆ ಮಾಡಬೇಕು
4. ಕಳಸಾ ಮತ್ತು ಬಂಡೂರಿ ಯೋಜನೆಗೆ ಅರಣ್ಯ/ವನ್ಯಜೀವಿ ಮಂಜೂರಾತಿಯನ್ನು ಕೊಡಬೇಕು
5. ಸೊಂತಿ ಏತ ನೀರಾವರಿ, ಯುಕೆಪಿ ಇಂಡಿ ಶಾಖಾ ಕಾಲುವೆ, ಮಲಪ್ರಭ ಕಾಲುವೆ, ಘಟಪ್ರಭಾ ಬಲದಂಡೆ ಕಾಲುವೆ ಸೇರಿ ರಾಜ್ಯದ 11122 ಕೋಟಿ ರು. ವೆಚ್ಚದ ನೀರಾವರಿ ಯೋಜನೆಗಳಿಗೆ ನೆರವು ಕೊಡಬೇಕು.
6. ನದಿಗಳ ಜೋಡಣೆ ಕಾರ್ಯಕ್ರಮದಡಿ ಗೋದಾವರಿ-ಕಾವೇರಿ ಮತ್ತು ಬೇಡ್ತಿ-ವರದಾ ಲಿಂಕ್ ಯೋಜನೆಗಳ ಅಡಿಯಲ್ಲಿ ರಾಜ್ಯಕ್ಕೆ ಕನಿಷ್ಠ 40-45 ಟಿಎಂಸಿ ನ್ಯಾಯಸಮ್ಮತ ಹಂಚಿಕೆ ಮಾಡಬೇಕು.
7. ಕರ್ನಾಟಕಕ್ಕೆ 2025-26ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ₹2860 ಕೋಟಿ ಗ್ರಾಮ ಪಂಚಾಯಿತಿ ಅನುದಾನ ಇನ್ನೂ ಬಾಕಿ ಇದ್ದು, ಸಕಾಲದಲ್ಲಿ ಬಿಡುಗಡೆ ಮಾಡಬೇಕು.
8. ರಾಷ್ಟ್ರೀಯ ಆರ್ಥಿಕತೆಗೆ ಬೆಂಗಳೂರಿನ ಕೊಡುಗೆಯನ್ನು ಪರಿಗಣಿಸಿ ಮೂಲಸೌಕರ್ಯವನ್ನು ಬಲಪಡಿಸಲು ₹26,000 ಕೋಟಿಗಳ ನೆರವು ನೀಡಬೇಕು.
9. ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಯೋಜನೆಗೆ ಅನುಮೋದನೆ ನೀಡಬೇಕು
10. ಬೆಂಗಳೂರು ಉಪನಗರ ರೈಲು ಯೋಜನೆ ಹಾಗೂ ಬೆಂಗಳೂರು- ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳನ್ನು ಬೇಗ ಜಾರಿಗೆ ತರಬೇಕು
11. ಬೆಂಗಳೂರಿನಲ್ಲಿ 37 ಕಿ.ಮೀ. ಉದ್ದದ ಡಬಲ್ ಡೆಕ್ಕರ್ ಮೆಟ್ರೋ ಮಾರ್ಗದ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಬೇಕು.
12. ಬೆಂಗಳೂರು ಮೆಟ್ರೋದ 72 ಕಿ.ಮೀ. ಉದ್ದದ ಹಂತ-2 ರ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ ಕೊಡಬೇಕು
13. ಸರ್ಜಾಪುರದಿಂದ ಹೆಬ್ಬಾಳದವರೆಗಿನ ಸುರಂಗ ಮಾರ್ಗದ ರಸ್ತೆಯ ಪರಿಷ್ಕೃತ ಡಿಪಿಆರ್‌ಗೆ ಅನುಮೋದನೆ ಕೊಡಬೇಕು
4. ಬೆಂಗಳೂರಿನಿಂದ ಮೈಸೂರು, ಕನಕಪುರ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಅನುಷ್ಠಾನಗೊಳಿಸಲು ಅನುಮೋದನೆ ಕೊಡಬೇಕು
15.ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮಂಜೂರಾತಿ ಮತ್ತು ಅನುಷ್ಠಾನಕ್ಕೆ ಕೇಂದ್ರವು ತುರ್ತಾಗಿ ಮಧ್ಯಸ್ಥಿಕೆ ವಹಿಸಬೇಕು
16.ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅಗತ್ಯವಿರುವ ಅರಣ್ಯ, ಪರಿಸರ ಮತ್ತು ವನ್ಯಜೀವಿ ಅನುಮತಿಗಳನ್ನು ತ್ವರಿತಗೊಳಿಸಬೇಕು.
17. ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ವಾರ್ಷಿಕವಾಗಿ ₹25,000 ಕೋಟಿಗಳ ಪ್ರತ್ಯೇಕ ಆರ್ಥಿಕ ನೆರವನ್ನು ನೀಡಬೇಕು.
18. ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಶೀಘ್ರವಾಗಿ ಅನುಮೋದನೆ ನೀಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ