ಕೊರೋನಾ ವೈರಸ್ ಮಾಹಾಮಾರಿ ಸಂಬಂಧ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆದ್ರೆ, ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು, (ಏ.09): ಇಂದು (ಗುರುವಾರ) ನಡೆದ ತುರ್ತು ಕ್ಯಾಬಿನೆಟ್ ಸಭೆಯಲ್ಲಿ ಸಚಿವರುಗಳ ಮುಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮನದಲ್ಲಿದ್ದ ಅಳಲನ್ನು ಬಿಚ್ಚಿಟ್ಟಿದ್ದಾರೆ.
ನಾವು ಅಂದುಕೊಂಡಂತೆ ಇಲ್ಲ. ಪರಿಸ್ಥಿತಿ ಹದಗೆಡುತ್ತಿದೆ. ಲಾಕ್ ಡೌನ್ ನಿಂದ ಇನ್ನಷ್ಟು ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಒಂದೆಡೆ ವೈರಸ್ ಇನ್ನೊಂದಡೆ ಆರ್ಥಿಕ ಪರಿಸ್ಥಿತಿ ಎರಡನ್ನ ಎದುರಿಸೋದು ದೊಡ್ಡ ಸವಾಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಗೆ ಸಿದ್ಧ: ಬಿಎಸ್‌ವೈ
ನಾವು ಅಂದುಕೊಂಡಂತೆ ಪರಿಸ್ಥಿತಿ ಇಲ್ಲ, ಇರಲ್ಲ. ನಾನು ಅಧಿಕಾರಕ್ಕೆ ಬಂದಾಗಲೆಲ್ಲ ನನಗೆ ಸವಾಲುಗಳು ಜಾಸ್ತಿ. ಇದನ್ನು ಎದುರಿಸಲು ನೀವೆಲ್ಲ ಸಹಕರಿಸಬೇಕು ಎಂದು ಸಚಿವರಿಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ.
ಏಪ್ರಿಲ್ 30ರ ತನಕ ರಾಜ್ಯವನ್ನೇ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿ ಎಂದ ಕೆಲ ಸಚಿವರು ಅಭಿಪ್ರಾಯ ವ್ಯಕ್ತೊಡಿಸಿದರು. ಇನ್ನು ಕೆಲವರು 14 ಜಿಲ್ಲೆಗಳನ್ನು ಮಾತ್ರ ಏಪ್ರಿಲ್ 30ರ ತನಕ ಲಾಕ್ ಡೌನ್ ಮಾಡಿ, ಉಳಿದ ಕಡೆ ಸಡಿಲಗೊಳಿಸಿ ಎಂದ ಕೆಲ ಸಚಿವರು ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ ನಾಳೆ ಪ್ರಧಾನಿ ಜತೆ ಚರ್ಚೆ ಮಾಡಿ ಕನಿಷ್ಠ 14ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಸುವುದಾಗಿ ಸಿಎಂ, ಸಭೆಯಲ್ಲಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಯಡಿಯೂರಪ್ಪ ಸಿಎಂ ಇರುವಾಗಲೇ ರಾಜ್ಯದಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಕೊರೋನಾ ವೈರಸ್ ಬರುವ ಮುನ್ನ ರಾಜ್ಯದಲ್ಲಿ ಪ್ರವಾಹ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.