ನಿಂಬೆ ಮಾರುತ್ತಿದ್ದ ನಾನು 4 ಬಾರಿ ಸಿಎಂ ಆದೆ : ಬಿಎಸ್‌ವೈ

Kannadaprabha News   | Asianet News
Published : Jan 13, 2020, 07:40 AM IST
ನಿಂಬೆ ಮಾರುತ್ತಿದ್ದ ನಾನು 4 ಬಾರಿ ಸಿಎಂ ಆದೆ : ಬಿಎಸ್‌ವೈ

ಸಾರಾಂಶ

ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಹಿರಿಯರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವಾದುದು ಇಲ್ಲ. ಯುವಕರು ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ಕಿವಿ ಮಾತು ಹೇಳಿದರು.

ಬೆಂಗಳೂರು [ಜ.13]:  ಹೈಸ್ಕೂಲ್‌ ಓದುವಾಗ ಮಂಡ್ಯದಲ್ಲಿ ತರಕಾರಿ ಹಾಗೂ ನಿಂಬೆ ಹಣ್ಣು ಮಾರುತ್ತಿದ್ದ ನಾನು ರಾಜ್ಯದ ಆರೂವರೆ ಕೋಟಿ ಜನರ ಆಶೀರ್ವಾದದಿಂದ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಉನ್ನತ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಿ ಹಾಗೂ ಯುವ ಸಬಲೀಕರಣ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನಾನು ಹಿರಿಯರ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೂ ಅಸಾಧ್ಯವಾದುದು ಇಲ್ಲ. ಯುವಕರು ಮನಸ್ಸು ಮಾಡಿದರೆ ಯಾವುದೇ ಸಾಧನೆಯನ್ನು ಮಾಡಬಹುದು. ಪ್ರಸ್ತುತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ದೃಢ ನಿರ್ಧಾರ ಮಾಡಬೇಕಿದೆ ಎಂದು ಕರೆ ನೀಡಿದರು.

ಪ್ರತಿಯೊಬ್ಬ ಯುವಕರು ತಮ್ಮ ತಂದೆ- ತಾಯಿಗಳಿಗೆ ಗೌರವ ನೀಡುವುದು ಹಾಗೂ ಅವರ ನಿರೀಕ್ಷೆಗಳನ್ನು ಈಡೇರಿಸುವ ಕೆಲಸ ಮಾಡಬೇಕಿದೆ. ಸ್ವಂತ ಬಲದಿಂದ ಜೀವನ ಸಾಗಿಸುವುದು ಮಾತ್ರವಲ್ಲ, ನೂರಾರು ಜನರಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡಬೇಕು ಎಂದರು.

ವಿದೇಶಿ ವ್ಯಾಮೋಹ ಬಿಡಿ:

ಸಾಮಾನ್ಯ ಜನರು ನೀಡುವ ತೆರಿಗೆ ಹಣದಿಂದ ವೈದ್ಯ, ಎಂಜಿನಿಯರಿಂಗ್‌ ಓದುವ ಸ್ಥಳೀಯ ವಿದ್ಯಾರ್ಥಿಗಳು ನಂತರ ವಿದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸಬೇಕು ಎಂಬ ವ್ಯಾಮೋಹ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ಆಧುನಿಕತೆಯ ಅಲೆಯಲ್ಲಿ ಸಿಲುಕಿ ದೇಶದ ಸಂಸ್ಕೃತಿ, ಧರ್ಮ, ಆಚಾರ-ವಿಚಾರಗಳನ್ನು ಮರೆಯುತ್ತಿದ್ದಾರೆ. ಇಂತಹ ಚಿಂತನೆಗಳಿಂದ ಹೊರಬಂದು ರಾಷ್ಟ್ರದ ಪ್ರಗತಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ವಿವೇಕಾನಂದರ ಬದುಕು- ಬರಹಗಳು ಹಾಗೂ ಅರ್ಥಗರ್ಭಿತವಾಗಿದ್ದ ವೈಚಾರಿಕ ಚಿಂತನೆಗಳು ದೇಶದ ಸ್ವಾತಂತ್ರ್ಯಕ್ಕೆ ಪ್ರೇರಣಾಶಕ್ತಿಯಾಗಿದ್ದವು. ಆದ್ದರಿಂದ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿದರೆ ಜೀವನದಲ್ಲಿ ಸ್ಫೂರ್ತಿ, ಸ್ವಾಭಿಮಾನ ಬರಲಿದೆ. ಭಾರತೀಯ ಸಂಸ್ಕೃತಿಯ ಪರಿಚಯವಾಗಲಿದೆ. ಭಾರತಕ್ಕೆ ಬಂದರೆ ತೀರ್ಥ ಕ್ಷೇತ್ರಕ್ಕೆ ಬಂದ ಅನುಭವವಾಗಲಿದೆ ಎಂದಿದ್ದ ವಿವೇಕಾನಂದರ ಮಾತನ್ನು ಆದರ್ಶವಾಗಿ ಪಡೆದು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯುವ ಸಬಲೀಕರಣ, ಕೌಶಲ್ಯಾಭಿವೃದ್ಧಿ ತರಬೇತಿಗಳ ಮೂಲಕ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಪುಟ ವಿಸ್ತರಣೆಗೆ ಹೊಸ ಸಮಸ್ಯೆ : ಸಿಎಂಗೆ ವರಿಷ್ಠರ ತಾಕೀತು?...

ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ್‌ ಮಾತನಾಡಿ, ವೈಟ್‌ ಕಾಲರ್‌ ಉದ್ಯೋಗಗಳ ಮೇಲಿನ ಅತಿಯಾದ ವ್ಯಾಮೋಹವನ್ನು ನಿಲ್ಲಿಸಬೇಕಿದೆ. ಬ್ಲೂ ಕಾಲರ್‌ ಉದ್ಯೋಗಗಳನ್ನು ಪರಿಗಣಿಸಬೇಕು. ರಾಜ್ಯದಲ್ಲಿ ಕಳೆದ ಹತ್ತು ವರ್ಷದಲ್ಲಿ ಒಟ್ಟು ದಾಖಲಾತಿ ಅನುಪಾತ (ಜಿಇಆರ್‌) ಶೇ.30ರಿಂದ 60ಕ್ಕೆ ಹೆಚ್ಚಳವಾಗುತ್ತಿದೆ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿದೆ ಎಂದರು.

ರಾಜ್ಯದ ಯುವ ಜನರು ಶಿಕ್ಷಣ ಹಾಗೂ ವೃತ್ತಿ ಶಿಕ್ಷಣದ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಅನುಕೂಲವಾಗುವಂತೆ ವೃತ್ತಿಪರ ಕೌನ್ಸೆಲಿಂಗ್‌ ನೀಡುವುದಕ್ಕಾಗಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಯುವ ಸಬಲೀಕರಣ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಸಾಂಕೇತಿಕವಾಗಿ ಎಂಟು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಭಾರತೀಯ ಕ್ರಿಕೆಟ್‌ ತಂಡದ ಆಟಗಾರ್ತಿ ವೇದಾ ಕೃಷ್ಣಮೂರ್ತಿ, 30 ದೇಶಗಳಲ್ಲಿ ಪ್ರಶಸ್ತಿ ಪಡೆದಿರುವ ಅಘನಾಶಿನಿ ಸಾಕ್ಷ್ಯಚಿತ್ರದ ನಿರ್ದೇಶಕ ಅಶ್ವಿನಿಕುಮಾರ್‌ ಭಟ್‌, ಬೌನ್ಸ್‌ ಸಹ ಸಂಸ್ಥಾಪಕ ವಿವೇಕಾನಂದ ಹಳ್ಳಿಕೇರಿ, ವೆಬ್‌ ಟೆಕ್ನಾಲಜಿಯಲ್ಲಿ ರಾಷ್ಟ್ರಮಟ್ಟದಲ್ಲಿ ಬೆಳ್ಳಿ ಪದಕ ಪಡೆದಿರುವ ಪ್ರಣವ್‌ ನುತಲಪಾಟಿ ಸೇರಿದಂತೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಥಮ ರಾರ‍ಯಂಕ್‌ ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮದ ಬಳಿಕ ವಿವೇಕಾನಂದರ ಜೀವನ ಆಧರಿಸಿದ ದೃಶ್ಯರೂಪಕ ಪ್ರದರ್ಶಿಸಲಾಯಿತು. ರಾಮಕೃಷ್ಣ ಮಠದ ಸ್ವಾಮಿ ಮಂಗಲನಾಥಾನಂದಜೀ ಮಹರಾಜ್‌ ಆಶೀರ್ವಚನ ನೀಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌, ಮೇಯರ್‌ ಗೌತಮ್‌ಕುಮಾರ್‌ ಹಾಗೂ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ, ಆಯುಕ್ತ ಅನಿರುದ್ಧ ಶ್ರವಣ್‌, ವಿಶ್ವವಿದ್ಯಾಲಯಗಳ ಕುಲಪತಿಗಳು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!