ಮಠಗಳಿಗೆ, ಅಧಿಕಾರಿಗಳ ಕಾರಿಗೆ ಭರ್ಜರಿ ಹಣ: ಸಾಲುಮರದ ತಿಮ್ಮಕ್ಕನಿಗೆ 2 ಕೋಟಿ ರು!

By Kannadaprabha NewsFirst Published Mar 18, 2020, 9:57 AM IST
Highlights

ಮಠಗಳಿಗೆ, ಅಧಿಕಾರಿಗಳ ಕಾರಿಗೆ ಭರ್ಜರಿ ಹಣ!| ಸಿಎಂ ಬಿಎಸ್‌ವೈಯಿಂದ 11,804 ಕೋಟಿ ರು. ಪೂರಕ ಅಂದಾಜು ಮಂಡನೆ| ಮಠಗಳಿಗೆ 20 ಕೋಟಿ ರು. ನೆರವು| ಅಧಿಕಾರಿಗಳು, ಸಚಿವರು, ಸಂಸದರಿಗೆ ಐಷಾರಾಮಿ ಕಾರು ನೀಡಲು 7.6 ಕೋಟಿ| ಸಾಲುಮರದ ತಿಮ್ಮಕ್ಕನಿಗೆ 2 ಕೋಟಿ ರು.

ವಿಧಾನಸಭೆ[ಮಾ.18]; ರಾಜ್ಯದ ಪ್ರಗತಿಗೆ ವಿತ್ತಿಯ ಬರ ಎದುರಾಗಿದೆ ಎಂದು ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಠ-ಮಾನ್ಯಗಳ ಕಲ್ಯಾಣ ಕಾರ್ಯಗಳು ಹಾಗೂ ಅಧಿಕಾರಿಗಳ ಐಷಾರಾಮಿ ಸಾರಿಗೆ ಸೌಲಭ್ಯಕ್ಕೆ ಉದಾರವಾಗಿ ಅನುದಾನ ನೀಡಿರುವ ಅಂಶ ಪೂರಕ ಅಂದಾಜಿನಲ್ಲಿ ಬೆಳಕಿಗೆ ಬಂದಿದೆ.

ಸದನದಲ್ಲಿ ಯಡಿಯೂರಪ್ಪ ಅವರು ಮಂಗಳವಾರ 2019-20ನೇ ಸಾಲಿನ 11,803.72 ಕೋಟಿ ರು. ಮೊತ್ತದ ಪೂರಕ ಅಂದಾಜು ಮಂಡನೆ ಮಾಡಿದರು. ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದೆ ಎಂಬ ಕಾರಣಕ್ಕಾಗಿ ಹಲವು ಯೋಜನೆಗಳಿಗೆ ಕತ್ತರಿ ಹಾಕುತ್ತಿದ್ದರೂ, ವಿವಿಧ ಮಠಗಳಿಗೆ 20 ಕೋಟಿ ರು. ನೀಡಲಾಗಿದೆ ಮತ್ತು ಅಧಿಕಾರಿಗಳ ಐಷಾರಾಮಿ ವಾಹನಗಳ ಖರೀದಿಗೆ 4.76 ಕೋಟಿ ರು. ವೆಚ್ಚ ಮಾಡಲಾಗಿದೆ. ಇದಲ್ಲದೇ, ವಿಧಾನಸಭೆಯ ಶಾಸಕರ ಮತ್ತು ಮಾಜಿ ಶಾಸಕರ ಉಪಯೋಗಕ್ಕಾಗಿ 23 ಹೊಸ ವಾಹನಗಳ ಖರೀದಿಗೆ 1.39 ಕೋಟಿ ರು. ಖರ್ಚು ಮಾಡಲಾಗಿದೆ. ಶ್ರೀಗುರುಗುಂಡ ಬ್ರಹ್ಮೇಶ್ವರ ಮಠದ ಅಭಿವೃದ್ಧಿ ಕಾರ್ಯಕ್ರಮಕ್ಕಾಗಿ 5 ಕೋಟಿ ರು., ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಗಾಣಗಾಪೂರ ಗ್ರಾಮದ ಶ್ರೀದತ್ತಾತ್ರೇಯ ದೇವಸ್ಥಾನದ ಅಭಿವೃದ್ಧಿಗೆ 10 ಕೋಟಿ ರು., ಮತ್ತು ಚಿತ್ರದುರ್ಗದ ಭೋವಿ ಗುರುಪೀಠಕ್ಕೆ 5 ಕೋಟಿ ರು. ನೀಡಲಾಗಿದೆ ಎಂದು ಪೂರಕ ಅಂದಾಜಿನಲ್ಲಿ ವಿವರಿಸಲಾಗಿದೆ.

ಕರ್ನಾಟಕ ಬಜೆಟ್ ಅಧಿವೇಶನದಲ್ಲಿ ಏನೇನಾಯ್ತು? ಇಲ್ಲಿದೆ ವಿವರ

ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ 30 ವಾಹನಗಳನ್ನು ಒದಗಿಸಲು 4.2 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು ಪ್ರಾದೇಶಿಕ ಆಯುಕ್ತರಿಗೆ ವಾಹನ ಒದಗಿಸಲು ತಲಾ 14 ಲಕ್ಷ ರು. ಒದಗಿಸಲಾಗಿದೆ. ಸಾಲುಮರದ ತಿಮ್ಮಕ್ಕ ಅವರಿಗೆ ಸಾಲು ಮರಗಳನ್ನು ಬೆಳೆಸಿದ್ದಕ್ಕಾಗಿ ಧನ ಸಹಾಯ ಮಾಡಲು 2 ಕೋಟಿ ರು. ಒದಗಿಸಲಾಗಿದೆ. ಸಚಿವರು ಹಾಗೂ ಸಂಸದರಿಗೆ ಹೊಸ ವಾಹನ ಖರೀದಿಸಲು 3.43 ಕೋಟಿ ರು. ಸಾರಿಗೆ ವೆಚ್ಚದಡಿ ಹೆಚ್ಚುವರಿಯಾಗಿ ಒದಗಿಸಲಾಗಿದೆ. ದೆಹಲಿಯಲ್ಲಿನ ಕರ್ನಾಟಕ ಭವನದ ಸಾಮಾನ್ಯ ವೆಚ್ಚಕ್ಕಾಗಿ 2.39 ಕೋಟಿ ರು. ಅನುದಾನ ಹೆಚ್ಚುವರಿಯಾಗಿ ನೀಡಲಾಗಿದೆ.

23ನೇ ಇಂಟರ್‌ನ್ಯಾಷನಲ್‌ ಕಾನ್‌ಫರೆನ್ಸ್‌ ಆನ್‌ ಫ್ರಾಂಟಿಯ​ರ್‍ಸ್ ಆಪ್‌ ಯೋಗ ರಿಸಚ್‌ರ್‍ ಆಂಡ್‌ ಅಪ್ಲಿಕೇಷನ್‌ ಕಾರ್ಯಕ್ರಮಕ್ಕಾಗಿ 3 ಕೋಟಿ ರು., ಶ್ರೀಕೃಷ್ಣ ಸೇವಾಶ್ರಮ ಟ್ರಸ್ಟ್‌ಗೆ ಆಸ್ಪತ್ರೆ ನಿರ್ಮಾಣಕ್ಕಾಗಿ 10 ಕೋಟಿ ರು. ಹೆಚ್ಚುವರಿಯಾಗಿ ಪಾವತಿಸಲಾಗಿದೆ. ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮಾ ಕಂತಿನ ರಾಜ್ಯದ ಪಾಲನ್ನು ವಿಮಾ ಕಂಪನಿಗಳಿಗೆ ಪಾವತಿಸಲು 11.46 ಕೋಟಿ ರು. ನೀಡಲಾಗಿದೆ.

ಪೂರಕ ಅಂದಾಜಿನಲ್ಲಿ ಒದಗಿಸಿರುವ ಒಟ್ಟು ಮೊತ್ತ 11,803.72 ಕೋಟಿ ರು.ನಲ್ಲಿ 378.8 ಕೋಟಿ ರು. ಪ್ರಭೃತ ವೆಚ್ಚ ಮತ್ತು 11,424.91 ಕೋಟಿ ರು. ಪುರಸ್ಕೃತ ವೆಚ್ಚ ಸೇರಿರುತ್ತದೆ. ಇದರಲ್ಲಿ 1,753.54 ಕೋಟಿ ರು. ಸಹ ಪುರಸ್ಕೃತ ವೆಚ್ಚವಾಗಬೇಕಾಗಿದ್ದು, ಇದನ್ನು ರಿಸವ್‌ರ್‍ ಫಂಡ್‌ ಠೇವಣಿಗಳಿಂದ ಭರಿಸಲಾಗುತ್ತದೆ. ಸಂಚಿತ ನಿಧಿಯಿಂದ ಹೊರ ಹೋಗುವ ನಿವ್ವಳ ಮೊತ್ತ 10,050.18 ಕೋಟಿ ರು. ಪೈಕಿ 2,676.80 ಕೋಟಿ ರು. ಕೇಂದ್ರ ಸಹಾಯಕ್ಕೆ ಸಂಬಂಧಪಟ್ಟದ್ದಾಗಿದೆ ಮತ್ತು 8.81 ಕೋಟಿ ರು. ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿವೆ. ಆದ್ದರಿಂದ ಹೊರ ಹೋಗುವ ನಿವ್ವಳ ನಗದು ಮೊತ್ತ 7364.57 ಕೋಟಿ ರು.ಗಳಾಗಿದೆ. ಇದನ್ನು ವೆಚ್ಚ ಸೂಕ್ತ ಪರಿಷ್ಕೃತ ಆದ್ಯತೆಯ ಆಧಾರದ ಮೇಲೆ ಭರಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.

click me!