ರಾಜ್ಯದಲ್ಲಿರುವ ಎಲ್ಲಾ ತಾಂಡಾ ನಿವಾಸಿಗಳಿಗೂ ಸಿಎಂ ಬಿ ಎಸ್ ಯಡಿಯೂರಪ್ಪ ಭರ್ಜರಿ ಆಫರ್ ನೀಡಿದ್ದಾರೆ. ಅವರಿನ್ನು ಉದ್ಯೋಗ ಅರಸಿ ವಲಸೆ ಹೋಗಬೇಕಿಲ್ಲ.
ದಾವಣಗೆರೆ (ಫೆ.15): ಮುಂದಿನ ಒಂದು ವರ್ಷದೊಳಗಾಗಿ ರಾಜ್ಯದಲ್ಲಿರುವ ಎಲ್ಲಾ ಲಂಬಾಣಿ ತಾಂಡಾಗಳನ್ನೂ ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯ ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ನ್ಯಾಮತಿ ತಾಲೂಕು ಸೂರಗೊಂಡನಕೊಪ್ಪ ಭಾಯಾಗಡ್ ಕ್ಷೇತ್ರದ ಶ್ರೀ ಸಂತ ಸೇವಾಲಾಲ್‌ರ ಪುಣ್ಯಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿ ಸಹಯೋಗದಲ್ಲಿ ಸಂತ ಸೇವಾಲಾಲ್‌ರ 282ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಲಂಬಾಣಿ ಸಮುದಾಯದ ಗುಳೆ ಸಂಸ್ಕೃತಿ ತಪ್ಪಿಸಲು ಖಾತ್ರಿ ಯೋಜನೆಯಡಿ ತಾಂಡಾ ರೋಜ್‌ಗಾರ್ ಯೋಜನೆ ಮೂಲಕ ಸಮಾಜ ಬಾಂಧವರು ವಾಸಿಸುವ ಗ್ರಾಮಗಳಲ್ಲೇ ಉದ್ಯೋಗ ನೀಡಲು ಅವಕಾಶ ಕಲ್ಪಿಸಿದೆ. ಗುಡ್ಡಗಾಡು ಪ್ರದೇಶದ ತಾಂಡಾಗಳಿಗೆ ವ್ಯವಸ್ಥಿತ ರಸ್ತೆ, ಸೌಕರ್ಯ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೀಸಲಾತಿಗಾಗಿ ಹೋರಾಟ: ಸಮುದಾಯ, ಸ್ವಾಮೀಜಿಗಳಿಗೆ ಹೊಸ ಭರವಸೆ ಕೊಟ್ಟ ಸಿಎಂ ..
ಪ್ರತಿಷ್ಠಾನ ಅಭಿವೃದ್ಧಿಗೆ 10 ಕೋಟಿ: ಲಿಪಿ ಇಲ್ಲದ ಬಂಜಾರ ಭಾಷೆ ಉಳಿಸಿ, ಬೆಳೆಸಲು, ಬಂಜಾರ ಭಾಷಾ ಸಂಸ್ಕೃತಿ ಅಭಿವೃದ್ಧಿಗೆ ಸಾಹಿತಿ ಡಾ.ಹಂ.ಪ.ನಾಗರಾಜಯ್ಯ ನೇತೃತ್ವದ ತಜ್ಞರ ಸಮಿತಿ ವರದಿಯಂತೆ ಬಂಜಾರ ಭಾಷಾ ಅಕಾಡೆಮಿ ಸ್ಥಾಪಿಸಲು ಆದೇಶಿಸಲಾಗಿದೆ. ಹುಮ್ನಾಬಾದ್ ಬಳಿ ಲಾಲ್‌ಗರಿಯಲ್ಲಿ 34 ಎಕರೆ ಪ್ರದೇಶದಲ್ಲಿ ಲಂಬಾಣಿ ಸಮುದಾಯದ ಸಿದ್ಧ ಉಡುಪುಗಳ ಘಟಕ, ಕೊಪ್ಪಳದ ಬಹದ್ದೂರು ಬಂಡಿ ಅಭಿವೃದ್ಧಿಗೆ 50 ಕೋಟಿ ರು. ಅನುದಾನ ಒದಗಿಸಿದೆ. ಸೂರಗೊಂಡನಕೊಪ್ಪದ ಶ್ರೀ ಸಂತ ಸೇವಾಲಾಲ್ ಪ್ರತಿಷ್ಠಾನ ಅಭಿವೃದ್ಧಿಗೆ 10 ಕೋಟಿ ರು., ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪ ರಸ್ತೆ ಅಭಿವೃದ್ಧಿಗೆ 10 ಕೋಟಿ ರು. ಒದಗಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.