ಮಳೆ ಹಾನಿ, ಕಡಲ್ಕೊರೆತ ಪರಿಶೀಲಿಸಿದ ಸಿಎಂ: ಕೊಡಗು, ದ.ಕ., ಉಡುಪಿ ಜಿಲ್ಲೆಗಳಲ್ಲಿ ಸಂಚಾರ

By Govindaraj SFirst Published Jul 13, 2022, 5:00 AM IST
Highlights

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧೆಡೆ ನೆರೆ ಹಾಗೂ ಮಳೆಯಿಂದಾದ ಹಾನಿ ಪರಿಶೀಲಿಸಿದರು. 

ಮಡಿಕೇರಿ/ಮಂಗಳೂರು (ಜು.13): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ನಡೆಸಿ, ವಿವಿಧೆಡೆ ನೆರೆ ಹಾಗೂ ಮಳೆಯಿಂದಾದ ಹಾನಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ಜತೆಗೆ ಸಭೆಯನ್ನೂ ನಡೆಸಿದ ಅವರು ಪರಿಹಾರ ಕಾರ್ಯಗಳ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಸಂತ್ರಸ್ತರಿಗೆ ಪರಿಹಾರ ಚೆಕ್‌ ವಿತರಿಸಿದರು. ಮೈಸೂರಿಂದ ರಸ್ತೆ ಮಾರ್ಗವಾಗಿ ಮಡಿಕೇರಿಗೆ ಆಗಮಿಸಿದ ಬೊಮ್ಮಾಯಿ, ಮೊದಲಿಗೆ ಮಳೆಯಿಂದಾಗಿ ಸಂಪೂರ್ಣವಾಗಿ ಕುಸಿದಿರುವ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಗೋಪಾಲ ಅವರ ಮನೆ ವೀಕ್ಷಿಸಿ, ಕುಟುಂಬದವರಿಗೆ 95,100 ಪರಿಹಾರದ ಚೆಕ್‌ ವಿತರಿಸಿದರು. 

ನಂತರ ಜಿಲ್ಲೆಯ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲಿಂದ ಸುಳ್ಯಕ್ಕೆ ತೆರಳುವ ಸಂದರ್ಭದಲ್ಲಿ ಕೊಯನಾಡು ಮತ್ತು ದ.ಕ.ಜಿಲ್ಲೆಯ ಸಂಪಾಜೆಗೆ ಭೇಟಿ ನೀಡಿ ಮಳೆ ಮತ್ತು ಭೂಕಂಪನದಿಂದ ಹಾನಿಗೊಂಡು ಬಿರುಕು ಬಿಟ್ಟಮನೆ ವೀಕ್ಷಣೆ ಮಾಡಿದರು. ಕೊಯನಾಡು ಗಣಪತಿ ದೇವಸ್ಥಾನದ ಸಭಾಭವನದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನೆಲೆಸಿರುವವರಿಗೆ ಧೈರ್ಯ ತುಂಬಿದರು. ನಂತರ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ತೆರಳಿ ತಾಲೂಕಿನಲ್ಲಿ ಉಂಟಾಗಿರುವ ಮಳೆ ಹಾನಿ ಮತ್ತು ಭೂ ಕಂಪನದ ಬಗ್ಗೆ ಮಾಹಿತಿ ಪಡೆದರು.

Latest Videos

ಮಳೆ ಹಾನಿ ಪ್ರದೇಶಕ್ಕೆ ಇಂದು, ನಾಳೆ ಸಿಎಂ ಬೊಮ್ಮಾಯಿ ಭೇಟಿ: ಪರಿಶೀಲನೆ

ಬಂಟ್ವಾಳದಲ್ಲಿ ಪರಿಹಾರ: ಬಂಟ್ವಾಳ ತಾಲೂಕಿನ ನೇತ್ರಾವತಿ ಮತ್ತು ಕುಮಾರಧಾರ ನದಿ ಸಂಗಮ ಕ್ಷೇತ್ರಕ್ಕೆ ಭೇಟಿ ಪ್ರವಾಹ ಪರಿಸ್ಥಿತಿಯನ್ನು ಸಿಎಂ ವೀಕ್ಷಿಸಿದರು. ಆ ಬಳಿಕ ಪಂಜಿಕಲ್ಲು ಗ್ರಾಮದ ಮುಕುಡ ಎಂಬಲ್ಲಿ ಕಳೆದ ವಾರ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೃತಪಟ್ಟಕೇರಳ ಮೂಲದ ಮೂವರು ಕಾರ್ಮಿಕರ ಕುಟುಂಬದವರಿಗೆ ತಲಾ .5 ಲಕ್ಷ ಪರಿಹಾರದ ಚೆಕ್‌ ವಿತರಿಸಿದರು. ಈ ವೇಳೆ ಬೊಮ್ಮಾಯಿ ಅವರು ಪ್ರಾಕೃತಿಕ ವಿಕೋಪದಿಂದಾದ ಹಾನಿ, ನೇತ್ರಾವತಿ ನದಿ ಉಕ್ಕಿ ಹರಿದು ವಿವಿಧ ಕೃಷಿ ತೋಟಗಳಿಗೆ ನೀರು ನುಗ್ಗಿರುವ ಹಾಗೂ ಪಂಜಿಕಲ್ಲಿನ ಮುಕುಡದಲ್ಲಿ ಸಂಭವಿಸಿದ ದುರಂತದ ದೃಶ್ಯವನ್ನು ಲ್ಯಾಪ್‌ಟಾಪ್‌ ಮೂಲಕ ಪರಿಶೀಲಿಸಿದರು.

ಕಡಲ್ಕೊರೆತ ಪರಿಶೀಲನೆ: ಬಂಟ್ವಾಳದಿಂದ ನೇರವಾಗಿ ಉಳ್ಳಾಲದ ಕಡಲಕಿನಾರೆಯಾದ ಬಟ್ಟಪಾಡಿಗೆ ಆಗಮಿಸಿದ ಬೊಮ್ಮಾಯಿ ಅವರು ಮಳೆಯ ನಡುವೆಯೂ ಕಡಲ್ಕೊರೆತದಿಂದಾದ ಹಾನಿಯನ್ನು ಅವಲೋಕಿಸಿದರು. ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್‌ ಅವರಿಂದ ಪರಿಸ್ಥಿತಿಯ ವಿವರಣೆ ಪಡೆದರು. ಸಚಿವರಾದ ಆರ್‌.ಅಶೋಕ್‌. ಅಂಗಾರ, ಸುನಿಲ್‌ ಕುಮಾರ್‌, ಸಿ.ಸಿ. ಪಾಟೀಲ್‌, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ ಕುಮಾರ್‌ ಮತ್ತಿತರರು ಈ ವೇಳೆ ಮುಖ್ಯಮಂತ್ರಿಗಳಿಗೆ ಸಾಥ್‌ ನೀಡಿದರು.

ಇಂದು ಉಡುಪಿ, ಉ.ಕನ್ನಡಕ್ಕೆ ಭೇಟಿ: ಮುಖ್ಯಮಂತ್ರಿ ಬೊಮ್ಮಾಯಿ ಅವರು ಬುಧವಾರ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ನೆರೆ ಹಾನಿ ಪರಿಶೀಲಿಸಲಿದ್ದಾರೆ. ಇದಕ್ಕೂ ಮೊದಲು ಉಡುಪಿಯಲ್ಲಿ ದ.ಕ, ಉಡುಪಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಗೆ ಸಿಎಂ ಬೊಮ್ಮಾಯಿ ಒಪ್ಪಿಗೆ: ಇಂದೇ ಮೊದಲ ಪಟ್ಟಿ ಬಿಡುಗಡೆ?

ಸಿಎಂ ಭೇಟಿ ವೇಳೆ ಮಳೆಗೆ ಬಿಡುವು: ಕೊಡಗು ಜಿಲ್ಲೆಯಲ್ಲಿ ಹತ್ತಕ್ಕೂ ಅಧಿಕ ದಿನಗಳಿಂದ ಭಾರೀ ಮಳೆಯಾಗುತ್ತಿತ್ತು. ಮಳೆಯಿಂದ ಭೂಕುಸಿತ, ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಆದರೆ ಮಂಗಳವಾರ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಕೊಡಗು ಜಿಲ್ಲೆ ಭೇಟಿ ಸಂದರ್ಭದಲ್ಲಿ ಮಳೆ ಬಿಡುವು ಕೊಟ್ಟಿದ್ದು ವಿಶೇಷ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ಕೆಲ ಕಡೆ ದಿನವಿಡೀ ಬಿಸಿಲಿನ ವಾತಾವಣವಿತ್ತು. ಆದರೆ ಸಿಎಂ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ತೆರಳುತ್ತಿದ್ದಂತೆ ಕೆಲ ಕಾಲ ಉತ್ತಮ ಮಳೆ ಸುರಿಯಿತು.

click me!