ಈ ಸಲ ಅದ್ಧೂರಿಯಾಗಿ ದಸರಾ ಮಹೋತ್ಸವ: ಸರ್ಕಾರದ ನಿರ್ಧಾರ

By Govindaraj S  |  First Published Jul 20, 2022, 6:59 AM IST

ಕೋವಿಡ್‌ನಿಂದಾಗಿ ಸರಳವಾಗಿ ಆಚರಣೆ ಮಾಡಿದ್ದ ನಾಡಹಬ್ಬ ದಸರಾ ಹಬ್ಬವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಮೈಸೂರು ದಸರಾ ಕುರಿತು ಬ್ರ್ಯಾಂಡ್‌ ಸೃಜಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ನಿರ್ಣಯಿಸಲಾಗಿದೆ.


ಬೆಂಗಳೂರು (ಜು.20): ಕೋವಿಡ್‌ನಿಂದಾಗಿ ಸರಳವಾಗಿ ಆಚರಣೆ ಮಾಡಿದ್ದ ನಾಡಹಬ್ಬ ದಸರಾ ಹಬ್ಬವನ್ನು ಈ ಬಾರಿ ಅದ್ಧೂರಿಯಾಗಿ ಆಚರಣೆ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಮೈಸೂರು ದಸರಾ ಕುರಿತು ಬ್ರ್ಯಾಂಡ್‌ ಸೃಜಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ನಿರ್ಣಯಿಸಲಾಗಿದೆ. ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಮಹೋತ್ಸವ-2022ರ ಉನ್ನತಮಟ್ಟದ ಸಮಿತಿ ಸಭೆ ನಡೆಯಿತು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಮೈಸೂರು ಭಾಗದ ಜನಪ್ರತಿನಿಧಿಗಳು ಅದ್ದೂರಿ ದಸರಾ ಹಬ್ಬ ಆಚರಣೆಗೆ ಮನವಿ ಮಾಡಿದ್ದಾರೆ. ಕೋವಿಡ್‌ ಬಳಿಕ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಚರ್ಚೆಯಾಗಿದೆ. ಸೆ.26ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡಲಿದ್ದು, ಬೆಳಗ್ಗೆ 9.45ರಿಂದ 10.05ರವರೆಗಿನ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

Tap to resize

Latest Videos

ಕೈಗಾರಿಕೆಗಳಿಗೂ ಸ್ವಯಂ ಘೋಷಿತ ತೆರಿಗೆ: ಸಿಎಂ ಬೊಮ್ಮಾಯಿ

ಸೆ.26ರಂದು ನವರಾತ್ರಿ ದಸರಾ ಪ್ರಾರಂಭವಾಗಲಿದ್ದು, ಅ.5ರ ವಿಜಯದಶಮಿಯಂದು ನಂದಿಧ್ವಜ ಪೂಜೆ, ಪುಷ್ಪಾರ್ಚನೆ, 7 ಮತ್ತು 8ರಂದು ವೀರಹೊಸಹಳ್ಳದಿಂದ ಗಜಪಯಣ ಪ್ರಾರಂಭವಾಗಲಿದೆ. ವಸ್ತು ಪ್ರದರ್ಶನ 15 ದಿನ ಮೊದಲು ಪ್ರಾರಂಭ ಮಾಡಲಾಗುವುದು. ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಒತ್ತು ನೀಡಲಿದ್ದೇವೆ. ದಿನಕ್ಕೆ ಒಬ್ಬರು ರಾಷ್ಟ್ರೀಯ ಮಟ್ಟದ ಕಲಾಕಾರರನ್ನು ಕರೆಯುತ್ತೇವೆ. ಶ್ರೀರಂಗಪಟ್ಟಣ, ಚಾಮರಾಜನಗರದಲ್ಲಿಯೂ ವೈಭೋವಪೂರಿತವಾಗಿ ದಸರಾ ಮಾಡಲು ನಿರ್ಧರಿಸಲಾಗಿದೆ. ಅನ್ಯ ರಾಜ್ಯದಲ್ಲಿಯೂ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸರ್ಕಾರದ ಎಲ್ಲಾ ಜಾಹೀರಾತು, ಪ್ರಕಟಣೆಗಳು, ವೆಬ್‌ಸೈಟ್‌, ಸಾಮಾಜಿಕ ಮಾಧ್ಯಮಗಳಲ್ಲಿ ಮೈಸೂರು ದಸರಾ ಲಾಂಛನವನ್ನು ಪ್ರಕಟಿಸಬೇಕು. ಮುಂಬೈ, ದೆಹಲಿ, ಚೆನ್ನೈ ವಿಮಾನ ನಿಲ್ದಾಣಗಳಲ್ಲಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಮೈಸೂರು ದಸರಾ ಕುರಿತು ಪ್ರಚಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಟೂರಿಸಂ ಸರ್ಕೀಟ್‌: ಒಂದು ವಾರದೊಳಗೆ ಮೈಸೂರು ಟೂರಿಸಂ ಸರ್ಕಿಟ್‌ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗುವುದು. ಪ್ರವಾಸ್ಯೋದ್ಯಮ ಇಲಾಖೆ ಮತ್ತು ಖಾಸಗಿ ವಲಯದ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು. ಸರ್ಕಿಟ್‌ನಲ್ಲಿ ಬೇಲೂರು, ಹಳೇಬೀಡು ಮುಂತಾದ ಪ್ರದೇಶಗಳಿಗೆ ಪ್ರವಾಸದ ಯೋಜನೆ, ಪ್ರಯಾಣ ಮತ್ತು ವಸತಿ ಎಲ್ಲವೂ ಒಂದೇ ಟಿಕೆಟ್‌ನಲ್ಲಿ ಸಾಧ್ಯವಾಗಲಿದೆ. ಇದಕ್ಕೆ ವೆಬ್‌ಸೈಟ್‌ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

10 ಕೋಟಿ ಅನುದಾನ: ದಸರಾ ಹಬ್ಬಕ್ಕೆ 10 ಕೋಟಿ ರು. ಮುಡಾದಿಂದ ನೀಡಲಾಗುವುದು. ಈ ಬಾರಿ ಸಿಎಸ್‌ಆರ್‌ ಅಡಿಯಲ್ಲಿ ಅನುದಾನ ಬಳಕೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ. ಅರಮನೆ ಆಡಳಿತ ಮಂಡಳಿಯು ಅರಮನೆ ವ್ಯಾಪ್ತಿಯೊಳಗಿನ ವೆಚ್ಚವನ್ನು ಭರಿಸಲಿದೆ. ಉಳಿದ ಮೊತ್ತವನ್ನು ಸರ್ಕಾರವು ಭರಿಸಲಿದೆ. ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾಕ್ಕೆ ತಲಾ ಒಂದು ಕೋಟಿ ರು. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಭೆಯಲ್ಲಿ ಸಹಕಾರ ಸಚಿವ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಎಸ್‌.ಟಿ.ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಮೇಯರ್‌ ಸುನಂದಾ ಪಾಲನೇತ್ರ, ಶಾಸಕರಾದ ಎಸ್‌.ಎ.ರಾಮದಾಸ್‌, ಸಾ.ರಾ.ಮಹೇಶ್‌, ತನ್ವೀರ್‌ ಸೇಠ್‌, ಎಚ್‌.ವಿಶ್ವನಾಥ್‌ ಇತರರು ಉಪಸ್ಥಿತರಿದ್ದರು.

ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‌ಗೆ ಸಿಎಂ ಶಂಕು: ಕೃಷಿ ಉದ್ಯಮ ನೀತಿಯ ಭರವಸೆ

ಸಾರ್ವಜನಿಕ ಕೆಲಸಗಳಿಗೆ ಅಡ್ಡಿಯಾಗಬಾರದು: ದಸರಾ ಆಚರಣೆ ಸಂದರ್ಭದಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅಡ್ಡಿಯಾಗದಂತೆ ಮೈಸೂರು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ನೆಪದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತಿವೆ ಎಂದು ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎಂಬುದರ ಕುರಿತು ಎಲ್ಲರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.

click me!