
ಬೆಂಗಳೂರು(ಜು.20): ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅಮೃತ್ ಪಾಲ್ ಸಲ್ಲಿಸಿರುವ ಅರ್ಜಿ ಮಂಗಳವಾರ ನಗರದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಆನಂದ ಚೌಹಾಣ್ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಈ ಮಧ್ಯೆ ಅಮೃತ್ ಪಾಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಸಿಐಡಿ ಸಹ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಆಕ್ಷೇಪಣೆ ಸಲ್ಲಿಸಿರುವ ಅಮೃತ್ ಪಾಲ್ ಪರ ವಕೀಲರು, ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು. ನಂತರ ಜಾಮೀನು ಅರ್ಜಿ ಸಂಬಂಧ ಪಾಲ್ ಪರ ವಕೀಲ ನಿತಿನ್, ಎರಡು ಗಂಟೆಗೂ ಹೆಚ್ಚು ಸಮಯ ಸುದೀರ್ಘ ವಾದ ಮಂಡಿಸಿದರು. ಸಮಯದ ಕೊರತೆಯಿಂದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಅರ್ಜಿದಾರರು ಉತ್ತಮ ಸೇವಾ ನಡತೆ ಹೊಂದಿದ್ದಾರೆ. ಮುಗ್ದ ಮತ್ತು ಅಮಾಯಕರಾಗಿರುವ ಅವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಅವರ ವಿರುದ್ಧ ಬೇರೆ ಯಾವುದೇ ಆರೋಪಗಳಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದ್ದರಿಂದ, ಜಾಮೀನು ನೀಡಬೇಕು ಎಂದು ಕೋರಿದರು.
PSI Recruitment Scam; ಅಮೃತ್ ಪಾಲ್ ಮಂಪರು ಪರೀಕ್ಷೆಗೆ ಸಿಐಡಿಯಿಂದ ಅರ್ಜಿ
ಸಿಐಡಿ ಆಕ್ಷೇಪಣೆ:
ಇದೇ ವೇಳೆ ಅಮೃತ್ ಪಾಲ್‌ಗೆ ಜಾಮೀನು ನೀಡದಂತೆ ಸಿಐಡಿ ಪರ ವಕೀಲ ಪಿ.ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದಾರೆ. ಪ್ರಕರಣದ ಗಂಭೀರತೆ ಮತ್ತು ಅದರಿಂದ ಸಮಾಜದ ಮೇಲೆ ಆಗಿರುವ ಪರಿಣಾಮ ಪರಿಗಣಿಸಿ ಸರ್ಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದೆ. ಅರ್ಜಿದಾರರು ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು. ಪ್ರಕರಣದಲ್ಲಿ ಅವರ ಪಾತ್ರವಿರುವುದು ತನಿಖೆ ಸಂದರ್ಭದಲ್ಲಿ ಬಯಲಾಗಿದೆ. ಅವರ ಬಳಿಯಿದ್ದ ಓಎಂಆರ್ ಶೀಟ್‌ಗಳನ್ನು ಒಳಗೊಂಡ ಕಿಟ್ ಬಾಕ್ಸ್‌ನ ಕೀಗಳನ್ನು ಆರೋಪಿಗಳಿಗೆ ನೀಡಿದ್ದರು. ಅವರು ಅಭ್ಯರ್ಥಿಗಳ ಓಎಂಆರ್ ಶೀಟ್‌ಗಳನ್ನು ಪಡೆದು ತಿದ್ದಿದ್ದಾರೆ ಎಂದು ಆಕ್ಷೇಪಣೆಯಲ್ಲಿ ಸಿಐಡಿ ತಿಳಿಸಿದೆ.
ಅಲ್ಲದೆ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗೆ ಪ್ರಾಥಮಿಕ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಅರ್ಜಿದಾರರ ಮೊಬೈಲ್ ಪೋನ್ ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ. ಪ್ರಕರಣದ ಇತರೆ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಈ ಹಂತದಲ್ಲಿ ಅರ್ಜಿದಾರ ಆರೋಪಿಗೆ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯುಂಟಾಗುತ್ತದೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಿ ಅರ್ಜಿದಾರರೊಂದಿಗೆ ನಡೆಸಿದ ಪಿತೂರಿ ಬಗ್ಗೆ ತನಿಖೆ ನಡೆಸಬೇಕಿದೆ. ಆದ್ದರಿಂದ ಪೌಲ್‌ಗೆ ಜಾಮೀನು ನೀಡಬಾರದು ಎಂದು ಸಿಐಡಿ ಕೋರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ