ಶಾಸಕ, ಸಂಸದರ ಭೇಟಿಗೆ ಮೋದಿ ರೀತಿ ಸಿಎಂ ಬೊಮ್ಮಾಯಿ ಪ್ಲಾನ್

By Kannadaprabha NewsFirst Published Sep 30, 2021, 7:58 AM IST
Highlights
  • ಪ್ರಧಾನಿ ನರೇಂದ್ರ ಮೋದಿ ಅವರ ಮಾದರಿಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ಲಾನ್
  •  ತಮ್ಮ ಪಕ್ಷದ ಶಾಸಕರು ಮತ್ತು ಸಂಸದರ ಅಹವಾಲು ಸ್ವೀಕರಿಸಲು ಸಮಯ ಮೀಸಲಿಡಲು ತೀರ್ಮಾನ

 ಬೆಂಗಳೂರು (ಸೆ.30):  ಪ್ರಧಾನಿ ನರೇಂದ್ರ ಮೋದಿ (PM Narendra MOdi) ಅವರ ಮಾದರಿಯಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಪಕ್ಷದ ಶಾಸಕರು ಮತ್ತು ಸಂಸದರ ಅಹವಾಲು ಸ್ವೀಕರಿಸಲು ಸಮಯ ಮೀಸಲಿಡಲು ತೀರ್ಮಾನಿಸಿದ್ದು, ಪ್ರತಿ ಗುರುವಾರು ಶಾಸಕರ ಮತ್ತು ಸಂಸದರನ್ನು ಭೇಟಿಯಾಗಲಿದ್ದಾರೆ. 

ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರೇಸ್‌ಕೋರ್ಸ್‌ ರಸ್ತೆಯಲ್ಲಿನ (Race corse Roade) ರೇಸ್‌ ವ್ಯೂ ಕಾಟೇಜ್‌, ನಿವಾಸ ನಂ.1ರಲ್ಲಿ ಶಾಸಕರು ಮತ್ತು ಸಂಸದರ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ. 

ಬಾಲ್ಯದಿಂದ ಮುಖ್ಯಮಂತ್ರಿಯಾಗುವವರೆಗೆ, ಬದುಕಿನ ಚಿತ್ರಣ ತೆರೆದಿಟ್ಟ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಯನ್ನು ಕೇಳಲು ಸಮಯ ನೀಡುತ್ತಿಲ್ಲ ಎಂಬ ಅಸಮಾಧಾನ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕರು ಮತ್ತು ಸಂಸದರ ಭೇಟಿಗೆ ಕಾಲಾವಕಾಶ ನೀಡಿದ್ದಾರೆ. ಈ ವೇಳೆ ಶಾಸಕರು ಮತ್ತು ಸಂಸದರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ.

ಜಿಲ್ಲಾ ಮಟ್ಟದ ಕೈಗಾರಿಕೆ

ಕೃಷಿ ಉತ್ಪನ್ನ ದ್ವಿಗುಣ, ಜಲ ಶಕ್ತಿಯ ಸಮರ್ಪಕ ಬಳಕೆ, ಜಿಲ್ಲಾ ಮಟ್ಟದಲ್ಲೂ ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಕಲ್ಪಿಸುವುದು ಹಾಗೂ ತಲಾ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಏರ್ಪಡಿಸಿದ್ದ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯ 40ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನೂತನ ಲಾಂಛನ ಬಿಡುಗಡೆ ಮತ್ತು ‘ಕ್ಲಬ್‌ಹೌಸ್‌’ಗೆ (Club house) ಚಾಲನೆ ನೀಡಿದ ಅವರು, ‘ನನ್ನ ಕಲ್ಪನೆಯ ಕರ್ನಾಟಕ’ ವಿಷಯದ ಬಗ್ಗೆ ಮಾತನಾಡಿ, ಶಾಸಕನಾಗಿದ್ದರೆ ಹೆಚ್ಚು ಮಾತನಾಡಬಹುದಿತ್ತು. ಮುಖ್ಯಮಂತ್ರಿ ಆಗಿರುವುದರಿಂದ ಅಷ್ಟೊಂದು ಮಾತನಾಡಲು ಆಗುವುದಿಲ್ಲ ಎಂದು ಹೇಳುತ್ತಾ ಸಂವಾದಕ್ಕೆ ಚಾಲನೆ ನೀಡಿದರು.

ನಮ್ಮಲ್ಲಿ ಅಪಾರವಾದ ಜಲ ಶಕ್ತಿ ಇದೆ. ಬೀದರ್‌ನಿಂದ ಕೊಳ್ಳೇಗಾಲದವರೆಗೆ ಕಾರಂಜ, ತುಂಗಭದ್ರಾ, ಘಟಪ್ರಭ, ಮಲಪ್ರಭ, ದೂಧ್‌ ಗಂಗಾ, ಕೃಷ್ಣಾ , ಕಾವೇರಿ, ಕಬಿನಿ ಮತ್ತಿತರ ನದಿಗಳು ಹರಿಯುತ್ತಿವೆ. ಆದರೆ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಸಂಪದ್ಭರಿತ, ಸುರಕ್ಷಿತ, ವಿಫುಲ ಅವಕಾಶವಿರುವ ಸುಂದರನಾಡು ನಮ್ಮದಾಗಬೇಕು. ಕನ್ನಡಕ್ಕೆ, ಕನ್ನಡಿಗರಿಗೆ ಅಗ್ರಸ್ಥಾನ ಸಿಗುವಂತಾಗಬೇಕು ತಮ್ಮ ಕಲ್ಪನೆಯ ಕರ್ನಾಟಕವನ್ನು ತಿಳಿಸಿದರು.

click me!