ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್‌ಗೆ ಸಿಎಂ ಶಂಕು: ಕೃಷಿ ಉದ್ಯಮ ನೀತಿಯ ಭರವಸೆ

By Govindaraj S  |  First Published Jul 17, 2022, 5:01 AM IST

ರೈತರ ಮಕ್ಕಳಿಗೆ ವಿದ್ಯೆ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೃಷಿ ಉದ್ಯಮ ನೀತಿಯನ್ನು ರೂಪಿಸುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಮೂಲಕ ಔದ್ಯೋಗಿಕ ಕ್ರಾಂತಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 


ಹಾವೇರಿ (ಜು.17): ರೈತರ ಮಕ್ಕಳಿಗೆ ವಿದ್ಯೆ, ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕೃಷಿ ಉದ್ಯಮ ನೀತಿಯನ್ನು ರೂಪಿಸುತ್ತಿದ್ದೇವೆ. ಪ್ರತಿ ತಾಲೂಕಿನಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಮೂಲಕ ಔದ್ಯೋಗಿಕ ಕ್ರಾಂತಿ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಖುರ್ಸಾಪುರ ಗ್ರಾಮದಲ್ಲಿ ಜವಳಿ ಪಾರ್ಕ್ ನಿರ್ಮಾಣ, ಟೆಕ್ಸ್‌ ಪೋರ್ಟ್‌ ಇಂಡಸ್ಟ್ರೀಸ್‌ನ ಸಿದ್ಧ ಉಡುಪು ಘಟಕಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚೀನಾದಲ್ಲಿ ಟೆಕ್ಸ್‌ಟೈಲ್‌ ಉದ್ಯಮ ಸ್ಥಗಿತಗೊಂಡಿದ್ದರಿಂದ ವಿದೇಶಿ ಕಂಪನಿಗಳು ಭಾರತದತ್ತ ಮುಖ ಮಾಡಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ತಾಲೂಕಿಗೊಂದು ಜವಳಿ ಪಾರ್ಕ್ ನಿರ್ಮಾಣದ ಗುರಿ ಹೊಂದಲಾಗಿದೆ. ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್ ಮತ್ತು ಸಿದ್ಧ ಉಡುಪು ಘಟಕ ಸ್ಥಾಪನೆಯಿಂದ ಒಟ್ಟು 10 ಸಾವಿರ ಜನರಿಗೆ ಒಂದು ವರ್ಷದಲ್ಲಿ ಉದ್ಯೋಗ ದೊರೆಯಲಿದೆ ಎಂದರು.

Latest Videos

undefined

ಉಡುಪಿಯಲ್ಲಿ ಸಿಎಂ ಮಳೆಹಾನಿ ವೀಕ್ಷಣೆ: ಮೊದಲ ಹಂತದಲ್ಲಿ 500 ಕೋಟಿ ಬಿಡುಗಡೆ

ಆ್ಯಂಕರ್‌ ಮಾದರಿಯ ರಾಜ್ಯದ ಮೊದಲ ಜವಳಿ ಪಾರ್ಕ್: ಶಿಗ್ಗಾಂವಿ ತಾಲೂಕಿನ ಖುರ್ಸಾಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಜವಳಿ ಪಾರ್ಕ್ ರಾಜ್ಯದ ಮೊದಲ ಆ್ಯಂಕರ್‌ ಮಾದರಿಯ (ಪಿಪಿಪಿ) ಜವಳಿ ಪಾರ್ಕ್ ಆಗಿರಲಿದೆ. ಖಾಸಗಿ ಸಹಭಾಗಿತ್ವ ಇದ್ದರೂ ಸಹ ರಾಜ್ಯ ಸರ್ಕಾರದ ಒಡೆತನದಲ್ಲಿಯೇ ಇದು ಇರಲಿದೆ. 2021-22ನೇ ಸಾಲಿನ ಆಯವ್ಯದಲ್ಲಿ ಘೋಷಣೆಯಾಗಿದ್ದ ಜವಳಿ ಪಾರ್ಕ್ 59 ಎಕರೆ 34 ಗುಂಟೆ ಜಾಗದಲ್ಲಿ ಸ್ಥಾಪನೆಯಾಗುತ್ತಿದೆ. 

ಆರಂಭಿಕವಾಗಿ ಟೆಕ್ಸ್‌ಪೋರ್ಟ್‌ ಇಂಡಸ್ಟ್ರೀಸ್‌ ಕಂಪನಿಯು 45 ಕೋಟಿ ವೆಚ್ಚದಲ್ಲಿ ಸಿದ್ಧ ಉಡುಪು ಘಟಕವನ್ನು ಸ್ಥಾಪಿಸಿ ಅಂದಾಜು 3 ಸಾವಿರ ಜನರಿಗೆ ಉದ್ಯೋಗವನ್ನು ಸೃಜಿಸಲಿದೆ. ಜವಳಿ ಪಾರ್ಕ್ ಪೂರ್ಣಗೊಳ್ಳುವ ವೇಳೆಗೆ ಅಂದಾಜು .200 ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದ್ದು, ಸುಮಾರು 5 ಸಾವಿರ ಉದ್ಯೋಗಾವಕಾಶ ದೊರೆಯಲಿದೆ.

ಮಹಿಳೆಯರಿಗೆ ಉದ್ಯೋಗ: ಮುಖ್ಯಮಂತ್ರಿಯಾಗಿ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಸ್ವಸಹಾಯ ಸಂಘಗಳ 5 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡುವ ಕಾರ್ಯಕ್ರಮ ಜು. 28ಕ್ಕೆ ಚಾಲನೆಗೊಳ್ಳಲಿದೆ. ಹಾವೇರಿಯಲ್ಲಿ ಕೈಗಾರಿಕೆಗಳ ಟೌನ್‌ಶಿಪ್‌ ಜಾಗ ನೋಡಲಾಗುತ್ತದೆ. ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿ ನಡೆಯುತ್ತಿದೆ. ಇನ್ನು ಹಲವು ಕನಸುಗಳಿವೆ. ಅವುಗಳನ್ನು ಮುಂಬರುವ ದಿನಗಳಲ್ಲಿ ಮಾಡುವೆ. ತಾಲೂಕಿನ ಸಮಗ್ರ ಅಭಿವೃದ್ಧಿ ಹೆಚ್ಚಿನ ಮಹತ್ವ ನೀಡುವೆ. 

ಬಡವರಿಗೆ ಭದ್ರತೆ ನೀಡಲು ಮುಂದಾಗುವೆ. ಬರುವ ದಿನಗಳಲ್ಲಿ ಮೆಗಾ ಡೈರಿ, ಹಾನಗಲ್ಲ, ಬ್ಯಾಡಗಿಯಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದರು. ಶಿಗ್ಗಾಂವಿಯಲ್ಲಿ ಜವಳಿ ಪಾರ್ಕ್ ಮತ್ತು ಸಿದ್ಧ ಉಡುಪು ಘಟಕ ಸ್ಥಾಪನೆಯಿಂದ ಒಟ್ಟು 10 ಸಾವಿರ ಜನರಿಗೆ ಒಂದು ವರ್ಷದಲ್ಲಿ ಉದ್ಯೋಗ ದೊರೆಯಲಿದೆ. ಅಲ್ಲದೇ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಲಾಗುವುದು. ಯಾವುದೇ ಜಾತಿ, ಧರ್ಮ ಭೇದವಿಲ್ಲದೇ ಸರ್ವ ಜನಾಂಗದ ಅಭಿವೃದ್ಧಿ ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.

ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ರೈತರ ಮಕ್ಕಳಿಗೆ ಹೆಚ್ಚಿನ ಕ್ಷೇತ್ರದಲ್ಲಿ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಜವಳಿ ಪಾರ್ಕ್ ಮಾಡಲಾಗುತ್ತಿದೆ. ಸಿಎಂ ಅವರು ರೈತರ ಮಕ್ಕಳು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ರೈತರ ಮಕ್ಕಳಿಗೆ ಉದ್ಯೋಗ ನೀಡಲು ಜವಳಿ ಪಾರ್ಕ್ ಮಾಡಲು ಮುಂದಾಗಿದ್ದಾರೆ. ರೈತರ ಮಕ್ಕಳಿಗೆ ಶಿಷ್ಯ ವೇತನ, ರೈತರಿಗೆ ನೀರಾವರಿ ಯೋಜನೆ ತರುವ ಮೂಲಕ ರೈತರ ಪರವಾಗಿ ಹಗಳಿರುಳು ಶ್ರಮಿಸಲಿದ್ದಾರೆ. 

ಕಡಲ್ಕೊರೆತ ತಡೆಗೆ ‘ಸೀ ವೇವ್‌ ಬ್ರೇಕರ್‌’ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

ಬಸವಣ್ಣನ ಪುಣ್ಯ ಭೂಮಿಗೆ .612 ಕೋಟಿ ನೀಡಿ, ಬಸವ ತತ್ವವನ್ನು ಸಾರಲು ಹೊರಟಿದ್ದಾರೆ. ಅಖಂಡ ಧಾರವಾಡ ಜಿಲ್ಲೆಯಲ್ಲಿ 15 ಸಾವಿರ ಜನರಿಗೆ ಉದ್ಯೋಗ ನೀಡಲಿದ್ದಾರೆ ಎಂದರು. ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್‌, ಕೃಷಿ ಸಚಿವ ಬಿ.ಸಿ. ಪಾಟೀಲ, ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಜಿಲ್ಲಾ​ಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹ್ಮದ್‌ ರೋಷನ್‌, ಶಿವಾನಂದ ಮ್ಯಾಗೇರಿ ಇತರರು ಇದ್ದರು.

click me!