ಮೇಕೆದಾಟಿಗೆ ಅನುಮತಿ ನೀಡಿ : ಕೇಂದ್ರಕ್ಕೆ ಸಿಎಂ ಮನವಿ

By Kannadaprabha NewsFirst Published Aug 26, 2021, 7:20 AM IST
Highlights
  • ಮೇಕೆದಾಟು, ಕಳಸಾ-ಬಂಡೂರಿ, ಎತ್ತಿನಹೊಳೆ ಸೇರಿ ರಾಜ್ಯದ ಹಲವು ಮಹತ್ವಾಕಾಂಕ್ಷಿ ನೀರಾವರಿ ಯೋಜನೆ
  • ನೀರಾವರಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌  ಜತೆಗೆ  ಚರ್ಚೆ

  ನವದೆಹಲಿ (ಆ.26):  ಮೇಕೆದಾಟು, ಕಳಸಾ-ಬಂಡೂರಿ, ಎತ್ತಿನಹೊಳೆ ಸೇರಿ ರಾಜ್ಯದ ಹಲವು ಮಹತ್ವಾಕಾಂಕ್ಷಿ ನೀರಾವರಿ ಯೋಜನೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರ ಜತೆಗೆ ಬುಧವಾರ ಸುದೀರ್ಘ ಚರ್ಚೆ ನಡೆಸಿದರು. ಇದೇ ವೇಳೆ ಮೇಕೆದಾಟು ಯೋಜನೆಯ ಡಿಪಿಆರ್‌ಗೆ ಆದಷ್ಟುಬೇಗ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಜಲಶಕ್ತಿ ಸಚಿವ ಶೇಖಾವತ್‌ ಭೇಟಿ ಬಳಿಕ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಬೊಮ್ಮಾಯಿ, ಮೇಕೆದಾಟು ಯೋಜನೆ ಕಾನೂನು ಮತ್ತು ನ್ಯಾಯ ಸಮ್ಮತವಾಗಿದೆ. ನ್ಯಾಯಲಯದಿಂದ ನಮಗೆ ನೀರು ಹಂಚಿಕೆಯಾಗಿದೆ, ಅದನ್ನು ಪಡೆಯಲು ಯೋಜನೆ ಮಾಡುತ್ತಿದ್ದೇವೆ. ಇದು ಬೆಂಗಳೂರಿಗೆ ಕುಡಿಯುವ ನೀರೊದಗಿಸುವ ಯೋಜನೆ. ಈಗಾಗಲೇ ಈ ಸಂಬಂಧ ಡಿಪಿಆರ್‌ ಕೂಡ ಸಲ್ಲಿಸಿದ್ದೇವೆ ಎಂದು ಗಮನಕ್ಕೆ ತಂದಿದ್ದೇನೆ. ಈ ಕುರಿತು ಯಾವುದೇ ಚಿಂತೆ ಮಾಡಬೇಡಿ, ಮುಂದಿನ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚೆ ಮಾಡಿ ಕಾನೂನಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಸಂಸದರು, ಸಚಿವರು ಮೋದಿ ಮುಂದೆ ಮಾತನಾಡಲು ಹೆದುರುತ್ತಿದ್ದಾರೆ : ಡಿಕೆಶಿ

ಮಾತುಕತೆ ವೇಳೆ ಕೃಷ್ಣಾ ಮೇಲ್ಡಂಡೆ ಮೂರನೇ ಹಂತದ ಯೋಜನೆ ವಿಚಾರವನ್ನೂ ಚರ್ಚೆ ಮಾಡಿದ್ದೇನೆ. ಈ ಯೋಜನೆ ವಿಚಾರವಾಗಿ ತೆಲಂಗಾಣ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ತನ್ನ ಮೊದಲ ಅರ್ಜಿ ಹಿಂಪಡೆದಿದೆ, ಆಂಧ್ರಪ್ರದೇಶದ ಜೊತೆಗೆ ನೀರು ಹಂಚಿಕೊಳ್ಳುವ ಪ್ರಸ್ತಾಪದಡಿ ಹೊಸ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಯೋಜನೆ ಮುಂದುವರಿಸಲು ಸುಲಭವಾಗಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದೇನೆ, ಯೋಜನೆ ಆರಂಭಿಸಲು ಅನುಮತಿ ಕೇಳಿದ್ದೇನೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.

ರಾಷ್ಟ್ರೀಯ ಯೋಜನೆ ಮಾನ್ಯತೆ: ಭದ್ರಾ ಮೇಲ್ದಂಡೆ ಯೋಜನೆಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾಗಲಿದೆ. ರಾಷ್ಟ್ರೀಯ ಯೋಜನೆಗಳಿಗೆ ಅನುಮತಿ ನೀಡುವಾಗ ಭದ್ರಾ ಮೇಲ್ದಂಡೆ ಯೋಜನೆಯೂ ಅದರಲ್ಲಿ ಇರಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದಿರುವ ಬೊಮ್ಮಾಯಿ ಎತ್ತಿನಹೊಳೆ ವಿಚಾರವನ್ನೂ ಸಚಿವರು ಈ ಕುರಿತು ಎಲ್ಲ ಮಾಹಿತಿ ಪಡೆದುಕೊಂಡಿದ್ದಾರೆ. ಈ ಯೋಜನೆಗೆ ಜಲ ಜೀವನ ಮಿಷನ್‌ನಲ್ಲಿ ಹಣ ಕೇಳಿದ್ದೇನೆ. ಯೋಜನೆಗೆ ಹೊಸ ಪ್ರಸ್ತಾವನೆ ಕಳಿಸಲು ಸಲಹೆ ನೀಡಿದ್ದಾರೆ ಎಂದರು ಮುಖ್ಯಮಂತ್ರಿ.

ಅನುಮತಿ ಭರವಸೆ: ಉತ್ತರ ಕರ್ನಾಟಕದ ಬಹುದಿನಗಳ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಬಂಡೂರಿ ಯೋಜನೆಯ ಡಿಪಿಆರ್‌ಗೆ ಅನುಮತಿ ನೀಡುವುದಾಗಿ ಜಲಶಕ್ತಿ ಸಚಿವರು ಭರವಸೆ ನೀಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. 

click me!