
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಡಿ.11) : ಕೇಂದ್ರ ತನಿಖಾ ದಳದ (ಸಿಬಿಐ) ಮಾದರಿಯಲ್ಲೇ ತನಗೆ ವಹಿಸುವ ಆರ್ಥಿಕ ವಂಚನೆ ಹಾಗೂ ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳ ಸಂಬಂಧ ಹೊಸದಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಅಧಿಕಾರ ನೀಡುವಂತೆ ಅಪರಾಧ ತನಿಖಾ ದಳ (ಸಿಐಡಿ) ಸರ್ಕಾರಕ್ಕೆ ರಾಜ್ಯ ಪ್ರಸ್ತಾವನೆ ಸಲ್ಲಿಸಿದೆ.
ಇದುವರೆಗೆ ಸರ್ಕಾರ ವಹಿಸುವ ಪ್ರಕರಣಗಳ ಹಳೆಯ ಎಫ್‌ಐಆರ್ ಆಧರಿಸಿಯೇ ಸಿಐಡಿ ತನಿಖೆ ನಡೆಸುತ್ತಿದೆ. ಇದರಿಂದ ಆರೋಪಿಗಳನ್ನು ವಿಚಾರಣೆ ನಡೆಸುವುದು ಸೇರಿದಂತೆ ಕೆಲವು ತಾಂತ್ರಿಕ ತೊಂದರೆಯಿಂದ ತನಿಖೆ ಮೇಲೆ ಪರಿಣಾಮ ಉಂಟಾಗುತ್ತಿತ್ತು. ಹೀಗಾಗಿ ಎಫ್‌ಐಆರ್ ದಾಖಲಿಸುವ ಅಧಿಕಾರ ಕೊಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಈ ಪ್ರಸ್ತಾಪಕ್ಕೆ ಗೃಹ ಇಲಾಖೆ ಸಹ ಪೂರಕವಾಗಿ ಸ್ಪಂದಿಸಿದ್ದು, ಕೆಲವೇ ದಿನಗಳಲ್ಲಿ ಸಿಐಡಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇದೆ.
ಭ್ರೂಣಹತ್ಯೆ ಕೇಸ್ ಸಿಐಡಿ, ಎಸ್‌ಐಟಿ ತನಿಖೆಗೆ ನೀಡಲು ಚಿಂತನೆ: ಸಚಿವ ಚಲುವರಾಯಸ್ವಾಮಿ
ಸಿಐಡಿಗೆ ರಾಜ್ಯವ್ಯಾಪಿ ತನಿಖೆ ನಡೆಸುವ ಅಧಿಕಾರವಿದೆ. ಆದರೆ ಎಫ್‌ಐಆರ್ ದಾಖಲಿಸುವ ಪವರ್ ಇಲ್ಲ. ರಾಜ್ಯದಲ್ಲಿ ಭಾರಿ ಸದ್ದು ಮಾಡುವ ಮಹತ್ವದ ಪ್ರಕರಣಗಳ ಹೊಣೆಗಾರಿಕೆ ಸಿಐಡಿ ಹೆಗಲಿಗೆ ಬೀಳುತ್ತದೆ. ಹೀಗಿದ್ದರೂ ಸಿಐಡಿಗೆ ಪೂರ್ಣಾಧಿಕಾರ ನೀಡಲು ಸರ್ಕಾರಗಳು ಮೀನಮೇಷ ಎಣಿಸುತ್ತಲೇ ಬಂದಿವೆ.
''''ಸಿಐಡಿಗೆ ಅಪರಾಧ ಕೃತ್ಯಗಳು ನಡೆದು ಪ್ರಾಥಮಿಕ ಹಂತದ ತನಿಖೆ ಬಳಿಕ ರಾಜ್ಯ ಸರ್ಕಾರದ ಆದೇಶದನ್ವಯ ಸ್ಥಳೀಯ ಪೊಲೀಸರಿಂದ ಪ್ರಕರಣಗಳು ಹಸ್ತಾಂತರವಾಗುತ್ತವೆ. ಈ ಪ್ರಕ್ರಿಯೆ ಮುಗಿಯುವ ವೇಳೆಗೆ ಆರೋಪಿಗಳ ವಿಚಾರಣೆ ಕೂಡಾ ಮುಗಿದಿರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಸಹ ಪಡೆದಿರುತ್ತಾರೆ. ಇನ್ನು ಯಾವುದೇ ಅಪರಾಧ ಪ್ರಕರಣದಲ್ಲಿ ಆರೋಪಿಗಳ ವಿಚಾರಣೆ ನಡೆಸಲು ತನಿಖಾಧಿಕಾರಿಗೆ ಕಾನೂನಿನ್ವಯ 15 ದಿನಗಳು ಮಾತ್ರ ಅವಕಾಶವಿರುತ್ತದೆ. ಈ ಅವಧಿ ಮುಗಿದ ಬಳಿಕ ಆರೋಪಿಯನ್ನು ಮತ್ತೆ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಈ ವಿಳಂಬವು ತನಿಖೆಗೆ ಬಹುದೊಡ್ಡ ಸವಾಲಾಗಿದೆ'''' ಎಂದು ಸಿಐಡಿ ಡಿಜಿಪಿ ಡಾ.ಎಂ.ಎ.ಸಲೀಂ ''''ಕನ್ನಡಪ್ರಭ''''ಕ್ಕೆ ತಿಳಿಸಿದರು.
ವಕೀಲರು V/S ಪೊಲೀಸರ ಜಟಾಪಟಿ ತಾರಕಕ್ಕೆ, ಸಿಐಡಿ ತನಿಖೆಗೆ ತೀರ್ಮಾನ
ಸಿಐಡಿಗೆ ಎಫ್‌ಐಆರ್ ದಾಖಲಿಸುವ ಅಧಿಕಾರವಿಲ್ಲ. ಹಳೆಯ ಎಫ್‌ಐಆರ್ ಆಧರಿಸಿಯೇ ತನಿಖೆ ನಡೆಸಬೇಕಿದೆ. ಆದರೆ ರಾಜ್ಯಗಳಿಂದ ಅಪರಾಧ ಪ್ರಕರಣಗಳು ತನಿಖೆಗೆ ವರ್ಗಾವಣೆಗೊಂಡರೆ ಹೊಸದಾಗಿ ಎಫ್‌ಐಆರ್ ದಾಖಲಿಸಿಕೊಂಡು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಇದರಿಂದ ಹಳೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರೂ ಬಂಧಿಸುವ ಅವಕಾಶವಿರುತ್ತದೆ. ಹಾಗಾಗಿ ಸಿಬಿಐ ಮಾದರಿಯ ತನಿಖಾ ಕ್ರಮವನ್ನು ಅನುಸರಿಸಲು ನಿರ್ಧರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಎಫ್‌ಐಆರ್ ದಾಖಲಿಸುವ ಅಧಿಕಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸಲೀಂ ಹೇಳಿದರು. ಎಫ್‌ಐಆರ್ ದಾಖಲಿಸುವ ಅಧಿಕಾರ ನೀಡಿದರೆ ನಮಗೆ ತನಿಖೆಗೆ ಸರ್ಕಾರ ವಹಿಸುವ ಪ್ರಕರಣಗಳಲ್ಲಿ ಹೊಸದಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ. ಬೆಂಗಳೂರಿನಲ್ಲಿ ಸಿಐಡಿ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯ ಸಹ ಸ್ಥಾಪನೆಯಾಗಲಿದೆ. ಅಲ್ಲದೆ ತನಿಖೆ ಮುಗಿದಷ್ಟೇ ವೇಗದಲ್ಲಿ ನ್ಯಾಯಾಲಯದ ವಾದ ಮಂಡನೆ ಮುಗಿದು ಶೀಘ್ರ ಇತ್ಯರ್ಥವಾಗಲಿವೆ. ಇದರಿಂದ ನೊಂದವರಿಗೆ ತ್ವರಿತವಾಗಿ ನ್ಯಾಯ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.
ಸಿಐಡಿಗೆ ಎಫ್‌ಐಆರ್ ದಾಖಲಿಸುವ ಅಧಿಕಾರವಿಲ್ಲ. ಹಳೆಯ ಎಫ್‌ಐಆರ್ ಆಧರಿಸಿಯೇ ತನಿಖೆ ನಡೆಸಬೇಕಿದೆ. ಆದರೆ ರಾಜ್ಯಗಳಿಂದ ಅಪರಾಧ ಪ್ರಕರಣಗಳು ತನಿಖೆಗೆ ವರ್ಗಾವಣೆಗೊಂಡರೆ ಹೊಸದಾಗಿ ಎಫ್‌ಐಆರ್ ದಾಖಲಿಸಿಕೊಂಡು ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಇದರಿಂದ ಹಳೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರೂ ಬಂಧಿಸುವ ಅವಕಾಶವಿರುತ್ತದೆ. ಹಾಗಾಗಿ ಸಿಬಿಐ ಮಾದರಿಯ ತನಿಖಾ ಕ್ರಮವನ್ನು ಅನುಸರಿಸಲು ನಿರ್ಧರಿಸುತ್ತಿದ್ದೇವೆ.
- ಡಾ.ಎಂ.ಎ.ಸಲೀಂ, ಸಿಐಡಿ ಡಿಜಿಪಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ