
ಚಿತ್ರದುರ್ಗ (ಮೇ.9): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ ಐವತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿರುವ ‘ಬಿಎಸ್‌ವೈ ಅಭಿಮಾನೋತ್ಸವ’ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಅವರು ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ ಕೋಟೆ ನಾಡಿನ ಜನ ಅದ್ಧೂರಿಯಾಗಿ ಸ್ವಾಗತ ಕೋರಿದರು. ‘ಮಿನಿ ದಸರಾ’ ಮಾದರಿಯಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.
ಸಂಜೆ ನಾಲ್ಕು ಗಂಟೆಗೆ ಯಡಿಯೂರಪ್ಪ ಚಿತ್ರದುರ್ಗ ಪುರಪ್ರವೇಶ ಮಾಡಬೇಕಿತ್ತು. ಆದರೆ ಬಿಎಸ್‌ವೈ ಆಗಮನ ಆದಾಗ ಸೂರ್ಯ ನಿಧಾನವಾಗಿ ಮೋಡದಿಂದ ಮರೆಯಾಗುತ್ತಿದ್ದ. ಇದೇ ಗೋಧೂಳಿ ಸಮಯದಲ್ಲಿ ನೇರವಾಗಿ ಪುಷ್ಪಾಲಂಕೃತ ವಾಹನ ಏರಿದ ಯಡಿಯೂರಪ್ಪ ಅವರು ನೆರೆದಿದ್ದ ಅಭಿಮಾನಿ ಸಮೂಹದತ್ತ ಕೈ ಬೀಸಿದರು. ರಾಜಕೀಯ ನಾಯಕರು ಹಾಗೂ ರೈತರು ಗಾಳಿಯಲ್ಲಿ ಹಸಿರು ಶಾಲು ಬೀಸಿ ಯಡಿಯೂರಪ್ಪ ಅವರ ರೈತ ಪರ ಹೋರಾಟದ ನೆನಪು ಮಾಡಿದರು. ಸಾವಿರಕ್ಕೂ ಹೆಚ್ಚು ಮಂದಿ ಕೈಯಲ್ಲಿ ನೇಗಿಲು ಎತ್ತಿ ಹಿಡಿದು ಮೆರವಣಿಗೆಗೆ ಒಕ್ಕಲುತನದ ಸ್ಪರ್ಶ ನೀಡಿದರು. ಕ್ರೇನ್ ಸಹಾಯದಿಂದ ಬಿಎಸ್‌ವೈ ಅವರ ಮೇಲೆ ಹೂ ಮಳೆಗರೆಯಲಾಯಿತು.
ಯಡಿಯೂರಪ್ಪ ಅವರು ಪುಷ್ಪಾಲಂಕೃತ ಸಾರೋಟ್‌ನಲ್ಲಿ ಸಾಗಬೇಕಾಗಿತ್ತು. ಆದರೆ ಅವರ ಜೊತೆಗೆ ಬಹಳಷ್ಟು ನಾಯಕರು ಸಾಗುವುದು ಕಷ್ಟವೆಂಬ ಕಾರಣಕ್ಕೆ ವಾಹನವೊಂದಕ್ಕೆ ಪುಷ್ಪಾಲಂಕಾರ ಮಾಡಿ ಅದರಲ್ಲಿ ಬಿಎಸ್‌ವೈ ಅವರ ಮೆರಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ನೂರಾರು ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರೆ ಮತ್ತೊಂದಿಷ್ಟು ಮಂದಿ ಕೈಲಿ ಒನಕೆ ಹಿಡಿದು ಹೆಜ್ಜೆ ಹಾಕಿದರು. ಈ ಮೂಲಕ ಬಿಎಸ್‌ವೈ ಪುರಪ್ರವೇಶಕ್ಕೆ ಸಂಭ್ರಮದ ಕಳೆ ತಂದರು. ಇದರೊಂದಿಗೆ ತನ್ನ ಐದು ದಶಕಗಳ ರಾಜಕೀಯ ಬದುಕಿನಲ್ಲಿ ಬಡವರ, ರೈತರ, ಮಹಿಳೆಯರ ಪರ ಹೋರಾಡಿದ ಕುರುಹುಗಳು ಸಾಂಕೇತಿಕವಾಗಿ ಪುರಪ್ರವೇಶದ ಸಂದರ್ಭದಲ್ಲಿ ಅನಾವರಣಗೊಂಡವು.
ಬುಡಕಟ್ಟು ಸಾಂಸ್ಕೃತಿಕ ಪರಂಪರೆ ಸಾರುವ ಚಿತ್ರದುರ್ಗ ಜಿಲ್ಲೆಯ ಕಾಡುಗೊಲ್ಲ-ಮ್ಯಾಸಬೇಡ ಸಮುದಾಯಗಳ ಸಾಂಸ್ಕೃತಿಕ ಆಚರಣೆಯನ್ನು ಮೇಳೈಸುವ ಕೋಲಾಟ ಸೇರಿದಂತೆ ಹಲವು ಕಲಾ ತಂಡಗಳ ಜತೆಗೆ ಕಂಸಾಳೆ, ಉರಿಮೆ, ತಮಟೆ, ಗೊರವರ ಕುಣಿತ, ನಂದಿಕೋಲು, ವೀರಗಾಸೆ, ವಿವಿಧ ಜಾನಪದ ನೃತ್ಯಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ತಂಪನೆಯ ಸಮಯದಲ್ಲಿ ನಗುಮೊಗದೊಂದಿಗೆ ಮದುಮಗನಂತೆ ಕಂಗೊಳಿಸುತ್ತಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ತೆರೆದ ವಾಹನದಲ್ಲಿ ಎಲ್ಲರತ್ತ ಕೈಬೀಸಿ ನಗುಮುಖದಲ್ಲಿ ಸಾಗುತ್ತಿದ್ದರು.
ಪ್ರವಾಸಿ ಮಂದಿರದ ಬಳಿ ಅಭಿಮಾನಿಗಳು ಬೃಹದಾಕಾರದ ಸೇಬು ಹಾರ ಹಾಕಿದರೆ, ಅಂಬೇಡ್ಕರ್ ಪ್ರತಿಮೆ ಬಳಿ ಮಾದಿಗ ಸಮುದಾಯದ ಮುಖಂಡರು ತಮ್ಮ ಸಾಂಸ್ಕೃತಿಕ ಪರಿಕರವಾದ ಹಲಗೆಯನ್ನೇ ಪೋಣಿಸಿ ಹಾರ ಮಾಡಿ ಯಡಿಯೂರಪ್ಪ ಅವರಿಗೆ ಹಾಕಿದ್ದು ವಿಶೇಷವಾಗಿ ಕಂಡಿತು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವರಾದ ಶ್ರೀರಾಮುಲು, ರೇಣುಕಾಚಾರ್ಯ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಸಿ.ಟಿ.ರವಿ, ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್ ಸೇರಿ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಆರು ಗಂಟೆಗೆ ಆರಂಭವಾದ ಮೆರವಣಿಗೆ ಮದಕರಿನಾಯಕ ಪ್ರತಿಮೆ ಬಳಿ ಬಂದಾಗ ವೇಳೆ ಎಂಟು ಗಂಟೆಯಾಗಿತ್ತು. ಸರಿ ಸುಮಾರು ಎರಡು ತಾಸು ಮೆರವಣಿಗೆ ನಡೆಯಿತು. ನಂತರ ಯಡಿಯೂರಪ್ಪ ಅವರು ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು.
ನಾನು, ಅನಂತ್ ರಾಜ್ಯ ಸುತ್ತಿದ್ದಕ್ಕೆ ಅಧಿಕಾರ
ಅಭಿಮಾನೋತ್ಸವಕ್ಕೆ ಬಹಳ ದೊಡ್ಡ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಬಹಳ ಪ್ರೀತಿ, ವಿಶ್ವಾಸದಿಂದ ಎಲ್ಲರೂ ಸೇರಿ, ಕಾರ್ಯಕ್ರಮ ಮಾಡುತ್ತಿದ್ದಾರೆ. ಸೈಕಲ್‌ನಲ್ಲಿ ನಾನು, ಅನಂತಕುಮಾರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆವು. ಇದೆಲ್ಲದರ ಕಾರಣದಿಂದ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. 2028ರ ಚುನಾವಣೆಗೆ ಅಭಿನಂದನೋತ್ಸವ ರಣಕಹಳೆಯಾಗುತ್ತದೆಯಾ ಎಂಬುದನ್ನು ಕಾದು ನೋಡೋಣ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ