
ಬೆಂಗಳೂರು (ಡಿ.31): ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಅವರು ಹಿಂದಿನಿಂದಲೂ ನನಗೆ ಪರಿಚಿತರಿದ್ದಾರೆ. ಹಾಗಾಗಿ, ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಹಾಗೂ ಬೆಟ್ಟಿಂಗ್ ದಂಧೆ ಕುರಿತ ಪ್ರಕರಣದಲ್ಲಿ 4 ತಿಂಗಳ ಕಾಲ ಜೈಲಿನಲ್ಲಿದ್ದು, ನಿನ್ನೆ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಶಾಸಕ ವೀರೇಂದ್ರ ಪಪ್ಪಿ ಅವರು, ಜೈಲಿನಲ್ಲಿ ನಾನು ಮತ್ತು ನಟ ದರ್ಶನ್ ಭೇಟಿಯಾಗಿದ್ದೇವೆ. ನಾಲ್ಕು ತಿಂಗಳ ಅವಧಿಯಲ್ಲಿ ಒಂದು ಬಾರಿ ಮಾತ್ರ ಭೇಟಿಯಾಗಿದ್ದು ಎರಡು ನಿಮಿಷ ಮಾತನಾಡಿದ್ದೇವೆ. ಈ ಹಿಂದೆಯಿಂದಲೂ ದರ್ಶನ್ ಅವರೊಂದಿಗೆ ನನಗೆ ಪರಿಚಯ ಇತ್ತು. ಹೀಗಾಗಿ ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ಮಾಡಿದ್ದೇವೆ. ಆದರೆ, ಅವರಿಗೆ ನೀಡಿರುವ ಸೌಲಭ್ಯದ ಬಗ್ಗೆ ಅಲ್ಲಿ ಚರ್ಚೆ ಮಾಡಲು ಆಗಲಿಲ್ಲ. ಅವರ ಬ್ಯಾರೆಕ್ ಬೇರೆ ನನ್ನ ಬ್ಯಾರೆಕ್ ಬೇರೆ ಎಂದು ಮಾಹಿತಿ ನೀಡಿದರು.
ಮುಂದುವರೆದು, ನ್ಯಾಯಕ್ಕೆ ಎಂದಿಗೂ ಜಯ ಸಿಗುತ್ತದೆ. ನಮ್ಮದೇಶದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಜಾರಿ ನಿರ್ದೇಶನಾಲಯ (ಇಡಿ) ದಾಳಿ ವೇಳೆ ನನ್ನ ಮನೆಯಲ್ಲಿ ಹಣ ಸಿಕ್ಕಿರಲು ಸಾಧ್ಯವಿಲ್ಲ. ಕಂಪನಿಯಲ್ಲಿ ಹಣ ಸಿಕ್ಕಿರಬಹುದು, ಆದರೆ ನಾನು ಬಿಹಾರ ಚುನಾವಣೆಗೆ ಯಾವುದೇ ಹಣ ನೀಡಿಲ್ಲ. ಜೈಲಿನಲ್ಲಿ ಇದ್ದಾಗ ಡಿ.ಕೆ. ಶಿವಕುಮಾರ್ ಅವರು ನನ್ನನ್ನು ಭೇಟಿಯಾಗಿದ್ದರು. ನಮ್ಮಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ಈ ವೇಳೆ ಯಾವುದೇ ಸಹಿ ಹಾಕಿಸಿಕೊಂಡಿಲ್ಲ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಮೊದಲ ಬಾರಿಗೆ ಶಾಸಕನಾಗಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಹಿರಿಯ ನಾಯಕರು ಇದ್ದಾರೆ, ಅವರಿಗೆ ಸಿಗಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಶಾಸಕ ಕೆ.ಸಿ. ವಿರೇಂದ್ರ ಪಪ್ಪಿಗೆ ಜಾಮೀನು ಸಿಕ್ಕಿದ ಬೆನ್ನಲ್ಲಿಯೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬೆಂಬಲಿಗರನ್ನು ಭೇಟಿಯಾಗಿ ಸಭೆ ಮಾಡಿದ್ದಾರೆ. ಅನೇಕರು ಭೇಟಿಗೆ ಜೈಲಿಗೆ ಬಂದಿದ್ದಾಗ, ನಿಮ್ಮನ್ನು ಭೇಟಿ ಮಾಡುವುದಕ್ಕೆ ಸಾಧ್ಯ ಆಗಿರಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಮುಂದಿನ ದಿನಗಳಲ್ಲಿ ಯಾವತ್ತಿಗೂ ನಿಮ್ಮೊಂದಿಗೆ ಇರ್ತೀನಿ. ಈ ಹಿಂದೆ ಹೇಗೆ ಕೆಲಸ ಕಾರ್ಯಗಳು ನಡೆಯುತ್ತಿದ್ದವೋ, ಅದೇ ರೀತಿ ನಡೆಯುತ್ತವೆ. ಆದರ ನಡುವೆ ಸಣ್ಣ ಪುಟ್ಟ ಲೋಪ ದೋಷಗಳೂ ಬಹಳಷ್ಟು ಇದ್ದವು. ಎಲ್ಲವನ್ನು ಸರಿಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ. ನನ್ನನ್ನು ನಂಬಿದ ಜನ ನನಗೆ ಜವಬ್ದಾರಿ ನೀಡಿದ್ದಾರೆ. ಹೀಗಾಗಿ ನಾನು ಋಣ ತೀರಿಸುವ ಕೆಲಸ ಮಾಡೇ ಮಾಡುತ್ತೇನೆ. ಇದರ ಕುರಿತಾಗಿ ನಾನು ಹೆಚ್ಚೇನು ಹೇಳೋದಿಲ್ಲ, ಭಾಷಣ ಮಾಡದೆ 4 ತಿಂಗಳಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ