
ಚಿಕ್ಕಮಗಳೂರು (ಡಿ.25): ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರೇಣುಕಾ ಅವರು ಸಾಬೀತುಪಡಿಸಿದ್ದಾರೆ. ಸ್ವಂತ ಕಾರಿಗೆ 'ಪೊಲೀಸ್' ಎಂದು ಬೋರ್ಡ್ ಹಾಕಿಕೊಂಡು ಫ್ಯಾಮಿಲಿ ಜೊತೆ ಪ್ರವಾಸ ಹೊರಟಿದ್ದ ಪೊಲೀಸಪ್ಪನಿಗೆ ದಂಡ ವಿಧಿಸುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಧಾರವಾಡ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕುಟುಂಬದ ಸದಸ್ಯರೊಂದಿಗೆ ಸ್ವಂತ ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರವಾಸ ಹೊರಟಿದ್ದರು. ಪ್ರವಾಸದ ವೇಳೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲೋ, ಅಧಿಕಾರ ತೋರಿಸಲೋ ತಮ್ಮ ಖಾಸಗಿ ಕಾರಿನ ಮೇಲೆ 'ಪೊಲೀಸ್' ಎಂಬ ನಾಮಫಲಕವನ್ನು ಅಳವಡಿಸಿಕೊಂಡಿದ್ದರು. ಈ ಕಾರು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಚೆಕ್ ಪೋಸ್ಟ್ ತಲುಪಿದಾಗ ಅಸಲಿ ಕಥೆ ಶುರುವಾಗಿದೆ.
ಕೊಟ್ಟಿಗೆಹಾರ ಚೆಕ್ ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಬಣಕಲ್ ಪಿಎಸೈ ರೇಣುಕಾ ಅವರು ಈ ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದವರು ತಾವು ಪೊಲೀಸ್ ಇಲಾಖೆಯವರು ಎಂದು ಹೇಳಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದ್ದಾರೆ. ಆದರೆ, ಖಾಸಗಿ ವಾಹನದ ಮೇಲೆ ಇಲಾಖೆಯ ಬೋರ್ಡ್ ಹಾಕುವುದು ನಿಯಮಬಾಹಿರ ಎಂದು ಪಿಎಸೈ ರೇಣುಕಾ ಅವರು ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ದಂಡದ ಜೊತೆಗೆ ಬೋರ್ಡ್ ತೆರವು
ಸಹೋದ್ಯೋಗಿ ಅಥವಾ ಇಲಾಖೆಯವರು ಎಂಬ ಯಾವುದೇ ಮುಲಾಜಿಗೆ ಒಳಗಾಗದ ಪಿಎಸೈ, ನಿಯಮ ಉಲ್ಲಂಘಿಸಿದ್ದಕ್ಕಾಗಿ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರಿನ ಮೇಲಿದ್ದ 'ಪೊಲೀಸ್' ಬೋರ್ಡ್ ಅನ್ನು ತಕ್ಷಣವೇ ತೆರವುಗೊಳಿಸಿದ ನಂತರವಷ್ಟೇ ವಾಹನವನ್ನು ಮುಂದಕ್ಕೆ ಹೋಗಲು ಅನುಮತಿ ನೀಡಿದ್ದಾರೆ.
ಪಿಎಸೈ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
ಸಾಮಾನ್ಯವಾಗಿ ಪೊಲೀಸರು ತಮ್ಮ ಇಲಾಖೆಯವರನ್ನು ಕಂಡರೆ ಬಿಟ್ಟುಬಿಡುತ್ತಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ. ಆದರೆ, ರೇಣುಕಾ ಅವರು ಕಾನೂನು ಪಾಲನೆಯಲ್ಲಿ ತೋರಿದ ಈ ದಕ್ಷತೆಯನ್ನು ಕಂಡು ಸ್ಥಳೀಯರು ಮತ್ತು ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ನಿಯಮಗಳು ಎಲ್ಲರಿಗೂ ಒಂದೇ' ಎಂದು ತೋರಿಸಿಕೊಟ್ಟ ಪಿಎಸೈ ಅವರ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ