ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಾಕು ತಾಯಿ ನಿಧನ, ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು!

By Suvarna NewsFirst Published May 20, 2023, 1:11 PM IST
Highlights

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸಾಕು ತಾಯಿ ನಿಧನರಾಗಿದ್ದಾರೆ. ಹೀಗಾಗಿ ಪ್ರದೀಪ್ ಈಶ್ವರ್ ದಿಢೀರ್ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದ್ದಾರೆ. 

ಬೆಂಗಳೂರು(ಮೇ.20):  ಅಭೂತಪೂರ್ವ ಗೆಲುವು ಸಾಧಿಸಿ ಚಿಕ್ಕಬಳ್ಳಾಪುರದಲ್ಲಿ ಇತಿಹಾಸ ಸೃಷ್ಟಿಸಿರುವ ಕಾಂಗ್ರೆಸ್ ನಾಯಕ ಪ್ರದೀಪ್ ಈಶ್ವರ್ ಸಾಕು ತಾಯಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೀಪ್ ಈಶ್ವರ್ ಸಾಕು ತಾಯಿ 72 ವರ್ಷದ ರತ್ನಮ್ಮ ಚಿಕ್ಕಬಳ್ಳಾಪುರದ ಪೇರೇಸಂದ್ರ ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರದೀಪ್ ಈಶ್ವರ್ ದಿಢೀರ್ ಚಿಕ್ಕಬಳ್ಳಾಪುರದ ಪೇರೇಸಂದ್ರಕ್ಕೆ ತೆರಳಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಪ್ರದೀಪ್ ಈಶ್ವರ್ ಸಾಕಿ ಸಲಹಿದ ಸಾಕು ತಾಯಿ ರತ್ನಮ್ಮ ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇಂದು(ಮೇ.20) ಚಿಕಿತ್ಸೆ ಫಲಿಸದೇ ರತ್ನಮ್ಮ ಮೃತಪಟ್ಟಿದ್ದಾರೆ. ರತ್ನಮ್ಮ ಅಂತಿಮ ದರ್ಶನ ಪಡೆಯಲು ಪ್ರದೀಪ್ ಈಶ್ವರ್, ಬೆಂಗಳೂರಿನಿಂದ ಪೇರೇಸಂದ್ರ ಗ್ರಾಮಕ್ಕೆ ತೆರಳಿದ್ದಾರೆ. ಅತೀವ ಉತ್ಸಾಹದಲ್ಲಿರುವ ಪ್ರದೀಪ್ ಈಶ್ವರ್ ಬೆಂಗಳೂರಿನ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳಲು ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಆದರೆ ಸಾಕು ತಾಯಿ ನಿಧನದಿಂದ ಸಾಧ್ಯವಾಗಿಲ್ಲ. 

Latest Videos

ನನ್ನ ಅಮ್ಮನಾಗಿ ಸಾಕಿ ಸಲುಹಿದ, ನನ್ನಲ್ಲಿನ ಅನಾಥ ಪ್ರಜ್ಞೆಯನ್ನ ದೂರ‌ಮಾಡಿದ ಅನ್ನದಾತೆ, ವಿದ್ಯಾದಾತೆ ಶ್ರೀಮತಿ ರತ್ನಮ್ಮ ಇಂದು ದೇವರಾಗಿದ್ದಾರೆ. ಅಮ್ಮನ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥನೆ. ಓಂ ಶಾಂತಿ ಎಂದು ಪ್ರದೀಪ್ ಈಶ್ವರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪ್ರದೀಪ್ ಈಶ್ವರ್ ಅಭಿಮಾನಿಗಳು, ಬೆಂಬಲಿಗರ ಸಂಭ್ರಮಾಚರಣೆ ಜೋರಾಗಿತ್ತು. ಇತ್ತ ಪ್ರದೀಪ್ ಈಶ್ವರ್ ಮನೆ ಮನೆಗೆ ತೆರಳಿ ಮತದಾರರಿಗೆ ಧನ್ಯವಾದ ಹೇಳಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತನ್ನ ಕ್ಷೇತ್ರದ ಮತದಾರರ ಮನೆಗೆ ತೆರಳಿ ಅಭೂತಪೂರ್ವ ಗೆಲುವಿಗೆ ಕಾರಣರಾದ ಮತದಾರರಿಗೆ ಧನ್ಯವಾದ ಹೇಳಿದ್ದರು. ಇದೇ ವೇಳೆ ಹಲವರಿಗೆ ನೆರವಿನ ಹಸ್ತವನ್ನು ಚಾಚಿದ್ದರು.

click me!