11 Years of Governance: ಮೋದಿಗೆ ಸೊನ್ನೆ ಅಂಕ ಎಂದ ಸಿದ್ದುಗೆ ಬಿಜೆಪಿ ನಾಯಕರ ಗುದ್ದು! ಯಾರು ಏನು ಹೇಳಿದ್ರು?

Kannadaprabha News   | Kannada Prabha
Published : Jun 13, 2025, 01:26 AM ISTUpdated : Jun 13, 2025, 09:52 AM IST
Siddaramaiah Narendra modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಪೂರೈಸಿರುವ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಸರ್ಕಾರಕ್ಕೆ 10ಕ್ಕೆ ಸೊನ್ನೆ ಅಂಕ ನೀಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು,

ಬೆಂಗಳೂರು (ಜೂ.13): ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 11 ವರ್ಷ ಪೂರೈಸಿರುವ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಸರ್ಕಾರಕ್ಕೆ 10ಕ್ಕೆ ಸೊನ್ನೆ ಅಂಕ ನೀಡುತ್ತೇನೆ ಎಂದಿದ್ದರು. ಈ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಾಧನೆ ‘ಮೈನಸ್ ಝೀರೋ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯೆ ನೀಡಿದ್ದು, ‘ಇನ್ನು 6 ತಿಂಗಳಲ್ಲಿ ಸಿದ್ದರಾಮಯ್ಯ ಅವರೇ ಗ್ಯಾರಂಟಿ ಇಲ್ಲ. ಅವರೇನು ಕೇಂದ್ರ ಸರ್ಕಾರಕ್ಕೆ ಮಾರ್ಕ್ಸ್‌ ಕೊಡುತ್ತಾರೆ. ರಾಜ್ಯ ಸರ್ಕಾರದ 2 ವರ್ಷದ ಸಾಧನೆಗೆ ನಾವು ಮೈನಸ್‌ ಶೂನ್ಯ ಅಂಕ ನೀಡುತ್ತೇವೆ. ನಾವು ಅವರಿಂದ ಯಾವುದೇ ಅಂಕ ನಿರೀಕ್ಷೆ ಮಾಡಿಲ್ಲ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅಗ್ರಿಮೆಂಟ್‌ ಆಗಿದೆ. ಕಳೆದ ಬಾರಿ ಬಜೆಟ್‌ ವೇಳೆ ಡಿ.ಕೆ.ಶಿವಕುಮಾರ್‌ ಅವರು, ಮುಂದಿನ ಬಾರಿ ಕಾಂಗ್ರೆಸ್‌ ಸಿಎಂ ಬಜೆಟ್ ಮಂಡಿಸಲಿದ್ದಾರೆ ಎಂದಿದ್ದರು. ಇಷ್ಟು ಸಾಕಲ್ಲವೇ ಸಿಎಂ ಬದಲಾವಣೆ ಸುಳಿವಿಗೆ’ ಎಂದರು.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಸಚಿವರು ಅವರ ಗೃಹಕ್ಕೆ ಮಾತ್ರ ಸಚಿವರಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಏನು ಮಾಡಿದ್ದಾರೆ? ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಿಸಿದ್ದಾರಾ? ಕೆಆರ್‌ಎಸ್‌ ನಾಲೆಗಳ ಹೂಳು ತೆಗೆಸಿದ್ದಾರಾ?’ ಎಂದು ವಾಗ್ದಾಳಿ ನಡೆಸಿದರು.

ಚರ್ಚೆಗೆ ಪಂಥಾಹ್ವಾನ: ಸೋಮಣ್ಣ

ಕೇಂದ್ರ ಸಚಿವ ವಿ.ಸೋಮಣ್ಣ ಹುಬ್ಬಳ್ಳಿಯಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ‘ಮೋದಿ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗಿಲ್ಲ. ಇಂಥ ಉಡಾಫೆ ಮಾತುಗಳನ್ನು ಬಿಡಬೇಕು. ಕೈಲಾಗದವ ಮೈ ಪರಚಿಕೊಂಡರಂತೆ ಎನ್ನುವಂತೆ ಕಾಂಗ್ರೆಸ್ಸಿಗರು ವರ್ತಿಸುತ್ತಿದ್ದಾರೆ. ಮೊದಲಿನ ಸಿದ್ದರಾಮಯ್ಯ ಈಗಿಲ್ಲ. ಕುರ್ಚಿ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕೇಂದ್ರದ ಆಡಳಿತ, ಅಭಿವೃದ್ಧಿ ನೋಡಲು ಸಿಎಂ 8 ದಿನ ದೆಹಲಿಯಲ್ಲಿ ಕುಳಿತು ನೋಡಲಿ, ಅವರಿಗೆ ಜ್ಞಾನೋದಯವಾಗುತ್ತದೆ. ಅಭಿವೃದ್ಧಿ ಕುರಿತಾಗಿ ಸಿಎಂ ಬಹಿರಂಗ ಚರ್ಚೆಗೆ ಬರಲಿ’ ಎಂದು ಪಂಥಾಹ್ವಾನ ನೀಡಿದರು.

ಸ್ವಾವಲಂಬಿ ಭಾರತ: ಕರಂದ್ಲಾಜೆ

ಮಂಗಳೂರು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ‘ಮೋದಿ ನೇತೃತ್ವದ ಸರ್ಕಾರದಲ್ಲಿ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯಾಗಿದ್ದು, ದೇಶ ಕ್ಷಿಪ್ರಗತಿಯ ಪ್ರಗತಿ ಸಾಧಿಸಿದೆ. ಮಹಿಳೆಯರು, ಯುವಜನತೆಯ ಬದುಕಿಗೆ ಕೇಂದ್ರ ನೆರವು ನೀಡುತ್ತಿದ್ದು, ಸ್ಟಾರ್ಟಪ್‌ಗಳು ಹೊಸ ಬದಲಾವಣೆಗೆ ಕಾರಣವಾಗಿವೆ. ಕಳೆದ 11 ವರ್ಷಗಳಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದರು.

ಕಳಂಕವಿಲ್ಲದ ನಾಯಕತ್ವ: ಛಲವಾದಿ

ಚಿತ್ರದುರ್ಗದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಕಳಂಕವಿಲ್ಲದ ನಾಯಕತ್ವದ ಮೂಲಕ ಪ್ರಧಾನಿ ನರೇಂದ್ರ ಮೋದಿ ರಾಜನೀತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. 14 ವರ್ಷ ಗುಜರಾತ್ ಸಿಎಂ ಆಗಿದ್ದ ಮೋದಿ ದೇಶದ ಪ್ರಧಾನಿಯಾಗಿ 11 ವರ್ಷ ಆಗಿದ್ದು, ದೇಶ ಸರ್ವತೋಮುಖ ಅಭಿವೃದ್ಧಿಯತ್ತ ಸಾಗುತ್ತಿದೆ. ವಿರೋಧ ಪಕ್ಷದವರು ಟೀಕಿಸುವುದು ಸಹಜ. ರಾಜ್ಯ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ಹಗರಣದಲ್ಲಿ ಸಿಲುಕುತ್ತಿದೆ. ಆದರೆ, ಕೇಂದ್ರದ ಅನೇಕ ಯೋಜನೆಗಳನ್ನು ದೇಶದ ಜನತೆಗೆ ನೀಡುತ್ತಿದ್ದು, ಹೆದ್ದಾರಿ ನಿರ್ಮಾಣ, ರೈಲು ನಿಲ್ದಾಣ, ಮೆಟ್ರೋ, ವಿಕಸಿತ ಭಾರತ ಇವೆಲ್ಲಾ ಕೇಂದ್ರ ಸರ್ಕಾರದ ಕೊಡುಗೆಗಳು. ಬ್ರಿಟೀಷ್‍ನವರು ಜನ್ಮ ಕೊಟ್ಟಿರುವ ಕಾಂಗ್ರೆಸ್‌ನಿಂದ ಜನ ಏನನ್ನು ನಿರೀಕ್ಷಿಸುವಂತಿಲ್ಲ ಎಂದರು.

ಆರ್ಥಿಕತೆಗೆ ಮೋದಿ ಶಕ್ತಿ: ಯದುವೀರ್

ಸಂಸದ ಯದುವೀರ್ ಒಡೆಯರ್ ಅವರು ಮಂಡ್ಯದಲ್ಲಿ ಮಾತನಾಡಿ, ‘ಮೋದಿ ಅವರು ಅಧಿಕಾರಕ್ಕೆ ಬಂದು 11 ವರ್ಷ ಪೂರೈಸಿದ್ದು, ಕೋಟ್ಯಂತರ ಉದ್ಯೋಗ ಸೃಷ್ಟಿ, ಬಡತನ ನಿರ್ಮೂಲನೆ, ಹಣದುಬ್ಬರ ನಿಯಂತ್ರಣ ಹಾಗೂ ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ ತಂದು ಭಾರತವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. 2014ರಲ್ಲಿ ಭಾರತ ಅಸಮತೋಲಿತ ಆರ್ಥಿಕತೆ ಹೊಂದಿತ್ತು. ಈಗ 5 ಪ್ರಬಲ ಆರ್ಥಿಕತೆ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ’ ಎಂದರು.

ಸಭೆಗೆ ಹೋಗದೆ ಅನುದಾನ ಸಿಗುತ್ತದೆಯೇ: ಅಶ್ವತ್ ಬಿಜೆಪಿ ರಾಜ್ಯ ವಕ್ತಾರ ಅಶ್ವಥ್‌ ನಾರಾಯಣ್ ಹಾಸನದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಸಭೆಗಳಿಗೆ ಹಾಜರಾಗದೆ ರಾಜ್ಯದಲ್ಲಿ ಕುಳಿತು ಆರೋಪ ಮಾಡಿದರೆ ಅನುದಾನ ಸಿಗುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದು, ಮೋದಿ ಸರ್ಕಾರ ಕರ್ನಾಟಕಕ್ಕೆ ಹಲವು ಅಭಿವೃದ್ಧಿ ಯೋಜನೆ ನೀಡಿದ್ದು, ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆ ಆಗಿರುವುದೇ ಜನರು ಕೊಟ್ಟಿರುವ ಅಂಕ ಎಂದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್