
ಬೆಂಗಳೂರು (ಜ.12): ಸದಾಕಾಲ ಒಂದಲ್ಲ ಒಂದು ವಿಚಾರದಲ್ಲಿ ವಿವಾದಿತ ಟ್ವೀಟ್ ಮಾಡುವ ಮೂಲಕ ಸುದ್ದಿಯಲ್ಲಿರುವ ನಟ ಚೇತನ್ ಕುಮಾರ್ ಅಹಿಂಸಾ ಈಗ ಸ್ವಾಮಿ ವಿವೇಕಾನಂದರ ವಿಚಾರವಾಗಿ ಟೀಕೆ ಮಾಡುವ ಮೂಲಕ ಟಾರ್ಗೆಟ್ ಆಗಿದ್ದಾರೆ. ಪ್ರತಿ ವಿಚಾರಗಳಲ್ಲೂ ತಮ್ಮೊಂದೊಂದು ವಿವಾದಿತ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಚೇತನ್ ಕುಮಾರ್ ಹಂಚಿಕೊಳ್ಳುತ್ತಲೇ ಇರುತ್ತಾರೆ. ಗುರುವಾರ ದೇಶಾದ್ಯಂತ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಆಚರಣೆ ಮಾಡಲಾಗಿದೆ. ರಾಜ್ಯ ಸರ್ಕಾರ ವಿವೇಕಾನಂದರ ಜನ್ಮದಿನದಂದೇ ತನ್ನ ಗ್ಯಾರಂಟಿ ಯೋಜನೆಗಳಲ್ಲಿ ಕೊನೆಯದಾದ ಯುವನಿಧಿಗೆ ಚಾಲನೆ ನೀಡಿದೆ. ಈ ನಡುವೆ ಚೇತನ್ ಕುಮಾರ್ ಅಹಿಂಸಾ, ಸ್ವಾಮಿ ವಿವೇಕಾನಂದ ಸಮಾನತಾವಾದಿಯಲ್ಲ, ಅವರು ನಮ್ಮವರಲ್ಲ ಎಂದು ಟ್ವೀಟ್ ಮಾಡುವ ಮೂಲಕ ವಿವಾದದ ಕಿಡಿ ಎಬ್ಬಿಸಿದ್ದಾರೆ. ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದ ವ್ಯಕ್ತಿ ಅದರೊಂದಿಗೆ ಜಾತಿ ವ್ಯವಸ್ಥೆಯ ಪರವಾಗಿ ಮಾತನಾಡಿದ್ದರು ಎಂದು ಚೇತನ್ ಬರೆದುಕೊಂಡಿದ್ದಾರೆ.
'ಇಂದು ವಿವೇಕಾನಂದರ ಜನ್ಮದಿನ. ವಿವೇಕಾನಂದರು ಮಹಿಳಾ ವಿಮೋಚನೆಯನ್ನು ವಿರೋಧಿಸಿದವರು ಮತ್ತು ಜಾತಿ ವ್ಯವಸ್ಥೆಯನ್ನು ಸರ್ಮಥನೆ ಮಾಡಿಕೊಂಡವರು. ಅವರೇ ಬರೆದ ಹಾಗೆ, 'ಜಾತಿ ಒಳ್ಳೆಯದು, ಅದೊಂದೇ ಜೀವನವನ್ನು ಪರಿಹರಿಸುವ ನೈಸರ್ಗಿಕ ಮಾರ್ಗವಾಗಿದೆ' ಎನ್ನುತ್ತಾರೆ. ವಿವೇಕಾನಂದರನ್ನು ಹಿಂದೂ ಸಮಾಜದಿಂದ ವೈಭವೀಕರಿಸಲಾಗಿದೆ. ಏಕೆಂದರೆ, ಅವರು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಬಲಪಡಿಸುವ ಪರವಾಗಿ ಇದ್ದವರು. ವಿವೇಕಾನಂದರು ಸಮಾನತಾವಾದಿಯಲ್ಲ.. ಅವರು ನಮ್ಮವರಲ್ಲ' ಎಂದು ತಮ್ಮ ಮೊದಲ ಟ್ವೀಟ್‌ನಲ್ಲಿ ಬರೆದಿದ್ದಾರೆ.
ಅದರೊಂದಿಗೆ ಹಿಂದುತ್ವದ ಪರವಾಗಿರುವ ವೀರ್ ಸಾವರ್ಕರ್ ಹಾಗೂ ಆರೆಸ್ಸೆಸ್‌ಗಿಂತ ಹಿಂದೂ ಉದಾರವಾದಿಗಳಾದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಅವರು ತುಂಬಾ ಡೇಂಜರಸ್ ಎಂದು ಬರೆದಿದ್ದಾರೆ. ಹಿಂದು ಉದಾರವಾದಿಗಳನ್ನು ಅಪ್ರಾಮಾಣಿಕರು/ಕುತಂತ್ರವಾದಿ ಸ್ನೇಹಿತರು ಎಂದು ಚೇತನ್ ಬರೆದಿದ್ದಾರೆ.
ಫಿಲ್ಮ್ ಸ್ಟಾರ್‌ಗಳ ಸ್ಮಾರಕಕ್ಕೆ ಸರ್ಕಾರದ ಹಣ, ಜಾಗ ಬಳಸಬಾರದು: ಚೇತನ್ ಅಹಿಂಸಾ
'ನಾವು ಸಮನತಾವಾದಿಗಳು ನಮ್ಮ ಐಕಾನ್‌ಗಳ (ಪೆರಿಯಾರ್, ಬಾಬಾ ಸಾಹೇಬ್) ಕ್ರಾಂತಿಕಾರಿ ಪರಿವರ್ತನೆಗೂ ಮತ್ತು ಅಸಮಾನತೆ/ಅನ್ಯಾಯವನ್ನು ಹೆಚ್ಚು ಆಳವಾಗಿ ಬೇರೂರಿಸುವ ಹಿಂದು ಸುಧಾರಣಾವಾದಿ ಉದಾರವಾದಿಗಳ ನಡುವೆ ವ್ಯತ್ಯಾಸವನ್ನು ಮಾಡಬೇಕು. ಹಿಂದು ಉದಾರವಾದಿಗಳು (ವಿವೇಕಾನಂದ, ಗಾಂಧಿ ಇತ್ಯಾದಿ) ಹಿಂದುತ್ವಕ್ಕಿಂತ (ಸಾವರ್ಕರ್ ಮತ್ತು ಆರೆಸ್ಸೆಸ್) ಹೆಚ್ಚು ಅಪಾಯಕಾರಿ. ಇದಕ್ಕೆ ಕಾರಣ ಹಿಂದುತ್ವ ನಮಗೆ ಪ್ರಾಮಾಣಿಕ ಶತ್ರು. ಆದರೆ, ಹಿಂದೂ ಉದಾರವಾದಿಗಳು ಅಪ್ರಾಮಾಣಿಕ/ಕುತಂತ್ರವಾದಿ ಸ್ನೇಹಿತರು' ಎಂದು ಟ್ವೀಟ್ ಮಾಡಿದ್ದಾರೆ.
ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್; ನಟ ಚೇತನ್ ಅಹಿಂಸಾ ವಿರುದ್ಧ ದೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ