
ಚಾಮರಾಜನಗರ (ನ.28): ಚಾಮರಾಜನಗರದ ಬಾಲಕಿಯರ ಹಾಸ್ಟೆಲ್‌ಗೆ ಉಪ ಲೋಕಾಯುಕ್ತ ಫಣೀಂದ್ರ ಅವರು ದಿಢೀರ್ ಭೇಟಿ ನೀಡಿದ ಸಂದರ್ಭದಲ್ಲಿ ಹಾಸ್ಟೆಲ್‌ನ ದುರ್ಬಲ ನಿರ್ವಹಣೆ ವ್ಯವಸ್ಥೆ ಮತ್ತು ಮಕ್ಕಳ ಪೋಷಣೆಯಲ್ಲಿನ ಲೋಪಗಳನ್ನು ಕಂಡು ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಹಾಸ್ಟೆಲ್ ಸೌಲಭ್ಯಗಳನ್ನು ಪರಿಶೀಲಿಸಿದ ಉಪ ಲೋಕಾಯುಕ್ತರು, ಹಾಸ್ಟೆಲ್ ನಿಯಮಗಳ ಪ್ರಕಾರ ಮಕ್ಕಳ ಪೌಷ್ಟಿಕಾಂಶದಲ್ಲಿನ ವ್ಯತ್ಯಾಸ ಕಂಡುಬಂದಿದೆ. ಚಾರ್ಟ್ ಪ್ರಕಾರ ಮಕ್ಕಳಿಗೆ ವಾರಕ್ಕೊಮ್ಮೆ (ಪ್ರತಿ ಭಾನುವಾರ) ಮಾಂಸಾಹಾರ ಕೊಡ್ತಿದ್ದೀರಾ ಎಂದು ಪ್ರಶ್ನಿಸಿದರು. ಮಕ್ಕಳು ಕೇವಲ 15 ದಿನಗಳಿಗೊಮ್ಮೆ ಮಾತ್ರ ಮಾಂಸಾಹಾರ ನೀಡುತ್ತಿರುವುದಾಗಿ ಹೇಳಿದ್ದಾರೆ. ಕೆಲವು ಮಕ್ಕಳು ಭಾನುವಾರ ಊರಿಗೆ ಹೋಗದೆ ಹಾಸ್ಟೆಲ್‌ನಲ್ಲಿ ಉಳಿದರೂ, ಅವರಿಗೆ ಮಾಂಸಾಹಾರ ನೀಡದ ಕುರಿತು ಉಪ ಲೋಕಾಯುಕ್ತರು ಸಿಬ್ಬಂದಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್‌ನ ಕಳಪೆ ನಿರ್ವಹಣೆಯನ್ನು ಕಂಡು ತೀವ್ರ ಅಸಮಾಧಾನಗೊಂಡ ಉಪ ಲೋಕಾಯುಕ್ತ ಫಣೀಂದ್ರ ಅವರು ಕೆಜಿಬಿಬಿ (ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ) ಹಾಸ್ಟೆಲ್‌ನ ಹಿರಿಯ ಅಧಿಕಾರಿಗಳಿಗೆ ನೇರವಾಗಿ ಕರೆ ಮಾಡಿ ಮಾತನಾಡಿದರು. 'ನಾನು ನೋಡಿದ ವರ್ಸ್ಟ್ ಹಾಸ್ಟೆಲ್ ಗಳಲ್ಲಿ ಇದೇ ಮೊದಲು. ಜೀರೋ ಮೆಂಟೆನೆನ್ಸ್ (Zero Maintenance), ಜೀರೋ ಸ್ಪೆಷಾಲಿಟಿ (Zero Speciality)' ಎಂದು ಹಾಸ್ಟೆಲ್ ವ್ಯವಸ್ಥೆ ಕುರಿತು ಫಣೀಂದ್ರ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸೂಕ್ತ ಮಾಹಿತಿ ನೀಡುವಂತೆ ಶಿಕ್ಷಣಾಧಿಕಾರಿಗೆ ಸೂಚನೆ:
ಹಾಸ್ಟೆಲ್ ನಿರ್ವಹಣೆ ಮತ್ತು ಲೆಕ್ಕಪತ್ರಗಳ ಕುರಿತು ಗಂಭೀರ ಎಚ್ಚರಿಕೆ ನೀಡಿದ ಉಪ ಲೋಕಾಯುಕ್ತರು, ಶಿಕ್ಷಣಾಧಿಕಾರಿಗಳಿಗೆ ನಾಳೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು. 'ಇವರು ಅಕೌಂಟ್ ಯಾವ ರೀತಿ ಮಾಡಿದ್ದಾರೆ ಅನ್ನೋದು ಚೆಕ್ ಮಾಡಿ. ನಾಳೆ ನೀವೂ ನನಗೆ ಮಾಹಿತಿ ಕೊಡಿ' ಎಂದು ಆದೇಶಿಸಿದರು. ಒಂದು ವೇಳೆ ಮಾಹಿತಿ ತಪ್ಪಾದರೆ, ಮೂವರನ್ನು ಅಮಾನತು ಮಾಡುತ್ತೇನೆ ಎನ್ನುವ ಮೂಲಕ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ