ಪದೇ ಪದೇ ಭೂಕಂಪ: ಅಧ್ಯಯನಕ್ಕೆ ನ.8 ಕ್ಕೆ ಗಡಿಕೇಶ್ವರಕ್ಕೆ ಕೇಂದ್ರ ತಂಡ

By Kannadaprabha News  |  First Published Oct 14, 2021, 6:25 PM IST

- ಭೂಕಂಪ ಅಧ್ಯಯನ: ನ.8ಕ್ಕೆ ಗಡಿಕೇಶ್ವರಕ್ಕೆ ಕೇಂದ್ರ ತಂಡ

- ಸೆಸ್ಮೋಲಜಿ ಕೇಂದ್ರ, ರಾಕ್‌ಮೆಕ್ಯಾನಿಕ್ಸ್‌ ಕೇಂದ್ರ ಮತ್ತಿತರ ಸಂಸ್ಥೆಗಳ ಅಧಿಕಾರಿ, ವಿಜ್ಞಾನಿಗಳ ಭೇಟಿ, 2 ದಿನ ಅಧ್ಯಯನ


ಬೆಂಗಳೂರು (ಅ. 14): ಉತ್ತರ ಕರ್ನಾಟಕದಲ್ಲಿ ಪದೇ ಪದೇ ನಡೆಯುತ್ತಿರುವ ಭೂಕಂಪನಕ್ಕೆ ಕಾರಣ ಪತ್ತೆ ಮಾಡಲು ಭೂಗರ್ಭ ಶಾಸ್ತ್ರಕ್ಕೆ ಸಂಬಂಧಿಸಿದ ದೇಶದ ಮುಂಚೂಣಿ ಸಂಸ್ಥೆಗಳ ಹಿರಿಯ ಅಧಿಕಾರಗಳು ಹಾಗೂ ವಿಜ್ಞಾನಿಗಳು ನ. 8 ಮತ್ತು ನ. 9ರಂದು ಕಲಬುರಗಿಯ ಚಿಂಚೋಳಿ ತಾಲೂಕಿನ ಗಡಿಕೇಶ್ವರಕ್ಕೆ ಭೇಟಿ ನೀಡಲಿದ್ದಾರೆ.

ನ್ಯಾಷನಲ್‌ ಸೆಂಟರ್‌ ಫಾರ್‌ ಸೆಸ್ಮೋಲಾಜಿ, ನ್ಯಾಷನಲ್‌ ಜಿಯೋಫಿಸಿಕಲ್‌ ರಿಸಚ್‌ರ್‍ ಇನ್ಸಿಟ್ಯೂಟ್‌, ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ರಾಕ್‌ ಮೆಕ್ಯಾನಿಕ್ಸ್‌, ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್‌, ರಾಜ್ಯ ಗಣಿ ಮತ್ತು ಭೂಗರ್ಭ ಇಲಾಖೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡ ನ. 8ರಿಂದ ಎರಡು ದಿನ ಈ ಭಾಗಕ್ಕೆ ಭೇಟಿ ನೀಡಲಿದ್ದಾರೆ.

Tap to resize

Latest Videos

ಕಲಬುರಗಿ ಲಘು ಭೂಕಂಪನದ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಈ ಭೇಟಿಯ ವೇಳೆ ಭೂಕಂಪನಕ್ಕೆ ನಿಜ ಕಾರಣ ಪತ್ತೆ ಮಾಡಲು ಗಡಿಕೇಶ್ವರದಲ್ಲಿ ಯಾವ ರೀತಿಯ ಅಧ್ಯಯನ ನಡೆಸಬೇಕು ಎಂಬುದನ್ನು ಈ ತಂಡ ನಿರ್ಧರಿಸಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೆಲವು ಯೋಜನೆಗಳ ಭಾಗವಾಗಿ ಭೂಗರ್ಭದ ಅಧ್ಯಯನ ನಡೆದಿದೆ. ಆದರೆ ಕಲಬುರಗಿಯಲ್ಲಿ ಸತತವಾಗಿ ಮತ್ತು ತುಸು ಹೆಚ್ಚು ತೀವ್ರತೆಯ ಭೂಕಂಪಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಭೂ ಕಂಪನದ ಕಾರಣವನ್ನು ಪತ್ತೆ ಹಚ್ಚುವ ಅಧ್ಯಯನಕ್ಕೆ ಕೈಹಾಕಲಾಗುತ್ತಿದೆ ಎಂದು ಕೆಎಸ್‌ಎನ್‌ಡಿಎಂಸಿಯ ಅಧಿಕಾರಿಗಳು ಹೇಳಿದ್ದಾರೆ.

ಮೇಲಿನ ಎಲ್ಲ ಸಂಸ್ಥೆಗಳು ಭೂ ಕಂಪನದ ಬಗ್ಗೆ ಅಧ್ಯಯನ ನಡೆಸಲು ಶಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಯಾವ ಸಂಸ್ಥೆಯಿಂದ ಅಧ್ಯಯನ ನಡೆಸಬೇಕು ಎಂಬ ತೀರ್ಮಾನ ತೆಗೆದುಕೊಳ್ಳಬೇಕಿದೆ. ಅಲ್ಪ ಕಾಲೀನ ಅಧ್ಯಯನ, ಮಧ್ಯಮ ಅವಧಿಯ ಅಧ್ಯಯನ ಅಥವಾ ದೀರ್ಘಾವಧಿಯ ಅಧ್ಯಯನ ನಡೆಸೇಬೇಕು, ಅಧ್ಯಯನದ ಸ್ವರೂಪ ಏನು ಎಂಬುದೆಲ್ಲ ಕೇಂದ್ರ ತಂಡದ ಭೇಟಿಯ ಬಳಿಕವೇ ತೀರ್ಮಾನವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!