ಬಿಸಿಯೂಟ ಯೋಜನೆಯಡಿ ಗುತ್ತಿಗೆ ಕೆಲಸ ಮಾಡುವ ಮುಖ್ಯ ಅಡುಗೆ ತಯಾರಕರು ಹಾಗೂ ಅಡುಗೆ ತಯಾರಕರು ಕನಿಷ್ಠ ವೇತನ ಕಾಯ್ದೆಯಡಿ ಸಂಬಳ ಪಡೆಯಲು ಅರ್ಹರಲ್ಲ ಎಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ರಾಜ್ಯ ಸರ್ಕಾರ ನಡೆಸುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆ ತಯಾಕರು ಮತ್ತು ಅಡುಗೆ ತಯಾರಕರು ಕನಿಷ್ಠ ವೇತನ ಕಾಯ್ದೆಯಡಿ ವೇತನ ಪಡೆಯಲು ಅರ್ಹರಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆ ತಯಾಕರು ಮತ್ತು ಅಡುಗೆ ಸಹಾಯಕರಿಗೆ ಕನಿಷ್ಠ ವೇತನ ಕಾಯ್ದೆ 1948ರ ಅಡಿ ಸೂಕ್ತ ವೇತನ ನಿಗದಿಪಡಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತರಾದ ಎಂ.ಎಸ್. ನೌಹೇರಾ ಶೇಖ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಕನಿಷ್ಠ ವೇತನ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿರುವ ಅಧಿಸೂಚಿತ ಉದ್ಯೋಗಗಳಿಗೆ ಮಾತ್ರ ಕಾಯ್ದೆಯ ನಿಯಮಗಳು ಅನ್ವಯಿಸುತ್ತವೆ. ಬಿಸಿಯೂಟ ಯೋಜನೆಯಡಿ ದಿನಕ್ಕೆ 4 ಗಂಟೆಯಷ್ಟು ಸೀಮಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ಮಾಡುತ್ತಿರುವ ಮುಖ್ಯ ಅಡುಗೆ ತಯಾರಕರು ಮತ್ತು ಅಡುಗೆ ತಯಾರಕರಿಗೆ ಕನಿಷ್ಠ ವೇತನ ಕಾಯ್ದೆಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಇದನ್ನು ಓದಿ: ಬೆಂಗಳೂರು: ಸುಪ್ರೀಂನಲ್ಲೇ ವಾರ್ಡ್ ವಿಂಗಡಣೆ ಬಗ್ಗೆ ಸ್ಪಷ್ಟನೆ ಪಡೆಯಿರಿ, ಹೈಕೋರ್ಟ್
ಅಲ್ಲದೆ, ಕರ್ನಾಟಕ ಕನಿಷ್ಠ ವೇತನ ನಿಯಮಗಳು-1958ರ ಪ್ರಕಾರ ದಿನದ ಕೆಲಸದ ಅವಧಿ 9 ಗಂಟೆಯಾಗಿರಬೇಕು. ಈ ಮಾನದಂಡ ಮುಖ್ಯ ಅಡುಗೆ ತಯಾರಕರ ಮತ್ತು ಅಡುಗೆ ತಯಾರಕರ ವಿಚಾರದಲ್ಲಿ ಪಾಲನೆಯಾಗಿಲ್ಲ. ಹಾಗಾಗಿ, ಅವರಿಗೆ ಕನಿಷ್ಠ ವೇತನ ನೀಡಬೇಕೆಂಬ ವಿಚಾರವು ಕಾಯ್ದೆಯ ನಿಮಗಳ ವ್ಯಾಪ್ತಿಗೆ ಬರುವುದಿಲ್ಲ ಮತ್ತು ಅವರಿಗೆ ಕನಿಷ್ಠ ವೇತನ ಕಾಯ್ದೆಯಡಿ ಸೂಕ್ತ ಕನಿಷ್ಠ ವೇತನ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 2018ರಲ್ಲಿ ಬಿಸಿಯೂಟ ಕಾರ್ಯಕರ್ತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಹಗಲು - ರಾತ್ರಿ ಧರಣಿ ಕೈಗೊಂಡಿದ್ದರು. ಈ ವೇಳೆ, ಧರಣಿ ಸ್ಥಳಕ್ಕೆ ಭೇಟಿ ನೀಡಿ ಬಿಸಿಯೂಟ ಕಾರ್ಯಕರ್ತೆಯರ ಕುಂದು-ಕೊರತೆ ಆಲಿಸಿದ್ದ ಅರ್ಜಿದಾರರು ನಂತರ ಹೈಕೋರ್ಟ್‌ಗೆ ಈ ಸಂಬಂಧ ಪಿಐಎಲ್ ಸಲ್ಲಿಸಿದ್ದರು. ಜತೆಗೆ ಬಿಸಿಯೂಟ ತಯಾರಿಸುವ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನಿಗದಿಪಡಿಸಲು ಸರ್ಕಾರಕ್ಕೆ ತಕ್ಷಣ ನಿರ್ದೇಶಿಸಬೇಕು ಎಂದೂ ಸಾಮಾಜಿಕ ಕಾರ್ಯಕರ್ತರಾದ ಎಂ.ಎಸ್. ನೌಹೇರಾ ಶೇಖ್ ಕೋರಿದ್ದರು. ಬಿಸಿಯೂಟ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಅಡುಗೆ ಉಖ್ಯ ತಯಾರಕರು ಹಾಗೂ ಇತರೆ ಅಡುಗೆ ತಯಾರಕರ ಪ್ರತಿಭಟನೆ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿತ್ತು.
ಇದನ್ನೂ ಓದಿ: ಪಿಸ್ತೂಲ್ ಇಲ್ಲದೆ ಬರೀ ಗುಂಡು ಇಟ್ಟುಕೊಳ್ಳುವುದು ತಪ್ಪಲ್ಲ: ಹೈಕೋರ್ಟ್