ಕೇಂದ್ರದ ಜಾತಿಗಣತಿ ಬೆನ್ನಲ್ಲೇ ರಾಜ್ಯ ಜಾತಿಗಣತಿ ಕುತೂಹಲ!

Published : May 01, 2025, 08:23 AM ISTUpdated : May 01, 2025, 08:53 AM IST
ಕೇಂದ್ರದ ಜಾತಿಗಣತಿ ಬೆನ್ನಲ್ಲೇ ರಾಜ್ಯ ಜಾತಿಗಣತಿ ಕುತೂಹಲ!

ಸಾರಾಂಶ

ರಾಜ್ಯದಲ್ಲಿ ಜಾತಿವಾರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಕುರಿತು ತೀವ್ರ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ನಡೆಸುವುದಾಗಿ ಘೋಷಿಸಿದ್ದು, ಇದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯದ ಕುರಿತು ತೀವ್ರ ಕುತೂಹಲ ಮೂಡಿದೆ.

ಬೆಂಗಳೂರು (ಮೇ.1) : ರಾಜ್ಯದಲ್ಲಿ ಜಾತಿವಾರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಕುರಿತು ತೀವ್ರ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಕೇಂದ್ರ ಸರ್ಕಾರ ಜನಗಣತಿ ಜತೆಗೆ ಜಾತಿಗಣತಿಯೂ ನಡೆಸುವುದಾಗಿ ಘೋಷಿಸಿದ್ದು, ಇದು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿವಾರು ಸಮೀಕ್ಷಾ ವರದಿಯ ಭವಿಷ್ಯದ ಕುರಿತು ತೀವ್ರ ಕುತೂಹಲ ಮೂಡಿದೆ.

ಮೇ 9 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರದ ನಿರ್ಧಾರದಿಂದ ರಾಜ್ಯದ ಸಮೀಕ್ಷಾ ವರದಿ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಚರ್ಚೆಯಾಗಲಿದೆ.

ಕೇಂದ್ರ ಸರ್ಕಾರ ಜಾತಿಗಣತಿ ನಡೆಸಿದರೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ವರದಿ ಅನುಷ್ಠಾನ ಮಾಡಲು ಅಧಿಕಾರ ಹೊಂದಿರುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಇದನ್ನೂ ಓದಿ: Caste Census: ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ

ಜತೆಗೆ ಕೇಂದ್ರ ಸರ್ಕಾರ ಕೇವಲ ಘೋಷಣೆ ಮಾಡಿದ್ದು, ರಾಜ್ಯ ಸರ್ಕಾರ ಹತ್ತು ವರ್ಷಗಳ ಹಿಂದೆಯೇ ಪ್ರಕ್ರಿಯೆಗೆ ಚಾಲನೆ ನೀಡಿ ಮನೆ-ಮನೆ ಸಮೀಕ್ಷೆ ನಡೆಸಿ ವರದಿಯನ್ನೂ ಸಿದ್ಧಪಡಿಸಿದೆ. ಅಲ್ಲದೆ, ಸಚಿವ ಸಂಪುಟ ಸಭೆಯಲ್ಲೂ ವರದಿ ಮಂಡನೆಯಾಗಿದೆ. ರಾಜ್ಯ ಸರ್ಕಾರ ಈ ಹಂತದಲ್ಲಿ ಏಕಾಏಕಿ ತಟಸ್ಥವಾಗುವುದು ಬೇಡ. ಸಚಿವ ಸಂಪುಟ ಸಭೆ ಮೂಲಕ ಪ್ರಕ್ರಿಯೆ ಮುಂದುವರೆಸಬೇಕು ಎಂದು ತೀರ್ಮಾನಿಸುವ ಸಾಧ್ಯತೆ ಇದೆ.

ಇದೇ ವೇಳೆ ಕೇಂದ್ರ ಸರ್ಕಾರ ಕೇವಲ ಜಾತಿಗಣತಿ ಮಾಡದೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಆಗ ಮಾತ್ರ ಬಡವರು ಹಾಗೂ ಅವಕಾಶ ವಂಚಿತರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರಕ್ಕೆ ಒತ್ತಾಯ ಮಾಡಲು ಸಚಿವ ಸಂಪುಟ ತೀರ್ಮಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಸದ್ಯಕ್ಕೆ ನಿರಾಳ?:

ಸಚಿವ ಸಂಪುಟ ಸಭೆಯಲ್ಲಿ ವರದಿ ಮಂಡನೆಯಾಗಿ ಜಾತಿವಾರು ಅಂಕಿ-ಅಂಶ ಬಹಿರಂಗವಾದ ಬೆನ್ನಲ್ಲೇ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರು ಸಿಡಿದೆದ್ದಿದ್ದರು. ಸ್ವತಃ ಕಾಂಗ್ರೆಸ್‌ ಪಕ್ಷದ ಒಕ್ಕಲಿಗ, ಲಿಂಗಾಯತ ನಾಯಕರೇ ವರದಿ ಬಗ್ಗೆ ಅಪಸ್ವರ ಎತ್ತಿದ್ದರು. ಲಿಂಗಾಯತ ಸಮುದಾಯದವರು ಪ್ರತ್ಯೇಕ ಜಾತಿಗಣತಿ ವರದಿ ಸಿದ್ಧಪಡಿಸಲೂ ಮುಂದಾಗಿದ್ದರು. ಮತ್ತೊಂದೆಡೆ ಕುರುಬ ಸೇರಿ ಇತರೆ ಹಿಂದುಳಿದ ವರ್ಗಗಳು ವರದಿ ಅನುಷ್ಠಾನ ಮಾಡಲೇಬೇಕು ಎಂಬ ಒತ್ತಡ ಹೇರಿದ್ದವು.

ಇದಲ್ಲದೆ, ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಬಿಜೆಪಿ ನಾಯಕರು, ಜಾತಿಗಣತಿ ಮೂಲಕ ರಾಜ್ಯ ಸರ್ಕಾರ ಜಾತಿಗಳನ್ನು ಒಡೆಯುತ್ತಿದೆ. ಒಂದು ಧರ್ಮದ ಓಲೈಕೆ ಮಾಡಿ ಹಿಂದೂಗಳ ಒಗ್ಗಟ್ಟು ಒಡೆಯುತ್ತಿದೆ ಎಂದೆಲ್ಲಾ ಆರೋಪ ಮಾಡಿದ್ದರು. ರಾಜ್ಯ ಬಿಜೆಪಿ ಪ್ರತಿಪಾದನೆಗೆ ವಿರೋಧ ಎಂಬಂತೆ ಕೇಂದ್ರವೇ ಜಾತಿಗಣತಿ ವರದಿ ಜಾರಿಗೆ ಮುಂದಾಗಿದೆ. ಹೀಗಾಗಿ ರಾಜ್ಯದ ಜಾತಿಗಣತಿಯನ್ನು ವಿರೋಧ ಮಾಡುತ್ತಿದ್ದವರ ಧ್ವನಿ ಕಡಿಮೆಯಾಗಲಿದೆ. ಮತ್ತೊಂದೆಡೆ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿ ಆಧರಿಸಿ ತಕ್ಷಣ ಮೀಸಲಾತಿ ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡುವ ಒತ್ತಡದಿಂದ ಪಾರದಂತಾಗಿದೆ. ಸಾವಧಾನವಾಗಿ ಕೇಂದ್ರದ ನಡೆ ಗಮನಿಸಿ ಮುಂದುವರೆಯಲು ಅವಕಾಶ ದೊರೆತಂತಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾನ್ಯತೆ ಬಗ್ಗೆ ಕುತೂಹಲ:

ಕನ್ನಡಪ್ರಭ ಜತೆ ಮಾತನಾಡಿದ ಹಿರಿಯ ವಕೀಲ ಗುರುಮಠ್, ಸಂವಿಧಾನದ ಏಳನೇ ಪರಿಚ್ಛೇದದ ಪ್ರಕಾರ ಮೀಸಲಾತಿಯಲ್ಲಿ ಬದಲಾವಣೆ ಮಾಡಬೇಕಾದರೆ ಕೇಂದ್ರ ಸರ್ಕಾರ ಮಾಡಬೇಕು. ಹೀಗಾಗಿ ಕೇಂದ್ರ ಸರ್ಕಾರ ಜಾತಿಗಣತಿ ವರದಿ ಮಾಡಿದರೆ ರಾಜ್ಯ ಸರ್ಕಾರ ಮಾಡಿರುವ ವರದಿಯು ಮಾನ್ಯತೆ ಕಳೆದುಕೊಳ್ಳಲಿದೆ ಎಂದಿದ್ದಾರೆ.

ಆದರೆ ರಾಜ್ಯಕ್ಕೆ ಸಂಬಂಧಿಸಿ ತೀರ್ಮಾನಗಳಿಗೆ ರಾಜ್ಯದ ವರದಿ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುತ್ತದೆ. ಇನ್ನು ಕೇಂದ್ರ ಸರ್ಕಾರ ಇನ್ನೂ ಜಾತಿಗಣತಿ ಮಾಡಿಲ್ಲ. ಮಾಡಿದರೂ ಯಾವ ರೀತಿ ಮಾಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿರುವ ವರದಿಯನ್ನು ತಳ್ಳಿ ಹಾಕಲು ಆಗುವುದಿಲ್ಲ ಎಂದು ಮತ್ತೊಬ್ಬ ವಕೀಲರು ಹೇಳುತ್ತಾರೆ.

ಇದನ್ನೂ ಓದಿ: ಜಾತಿ ಗಣತಿಗೆ ಸಿದ್ದರಾಮಯ್ಯ ಸ್ವಾಗತ, ಸಾಮಾಜಿಕ, ಆರ್ಥಿಕ, ಶಿಕ್ಷಣ ಸಮೀಕ್ಷೆಗೆ ಆಗ್ರಹ...

ಮೇ 9ರಂದು ಮತ್ತೆ ವರದಿ ಬಗ್ಗೆ ಚರ್ಚೆ

ಹಿಂದುಳಿದ ವರ್ಗಗಳ ಆಯೋಗದ ವರದಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದೆ. ಮೇ 9 ರಂದು ಸಚಿವರು ಮತ್ತೊಂದು ಸುತ್ತು ಚರ್ಚೆ ನಡೆಸಲಿದ್ದಾರೆ. ಅಂತಿಮವಾಗಿ ಎಲ್ಲರೂ ಒಪ್ಪಿದರೆ ಆಯೋಗದ ವರದಿಯ ಶಿಫಾರಸು ಅನ್ವಯ ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೇ ಶಿಫಾರಸು ಮಾಡುತ್ತೇವೆ.

- ಶಿವರಾಜ್‌ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್