ದಾವಣಗೆರೆ(ಮಾ.22): ಉಕ್ರೇನ್‌ನಿಂದ ವಾಪಸ್ಸಾದ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾದ ಹಿನ್ನೆಲೆಯಲ್ಲಿ ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸೋಮವಾರ ಉಕ್ರೇನ್‌ನಲ್ಲಿ ಬಾಂಬ್‌ಗೆ ಬಲಿಯಾದ ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಚಳಗೇರಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಬಾರಿ ವೈದ್ಯಕೀಯ ಶಿಕ್ಷಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರ್ಯಾಯ ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದೆ ಎಂದರು.
ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್‌ನಲ್ಲಿನ ವೈದ್ಯಕೀಯ ಶಿಕ್ಷಣವೇ ಬೇರೆ ರೀತಿ ಇದೆ. ನಮ್ಮ ದೇಶದಲ್ಲೇ ಬೇರೆಯದೇ ರೀತಿಯಾಗಿದೆ. ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಬಂದರೂ, ಇಲ್ಲಿಯೂ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಉಕ್ರೇನ್‌ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನವೀನ್ ಅಂತಿಮ ದರ್ಶನ, ಪ್ರಧಾನಿ ಮೋದಿಗೆ ವಿಶೇಷ ಧನ್ಯವಾದ ತಿಳಿಸಿದ ಸಿಎಂ ಬೊಮ್ಮಾಯಿ
ಸರ್ಕಾರಿ ಶುಲ್ಕ ಕಡಿಮೆ ಇದ್ದರೂ ವೈದ್ಯಕೀಯ ಶಿಕ್ಷಣದ ವೆಚ್ಚ ಖಾಸಗಿ ವಲಯದಲ್ಲಿ ಹೆಚ್ಚುತ್ತಿದೆ. ಶೇ.90-95 ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿಲ್ಲ. ಈ ಕಾರಣಕ್ಕೆ ಮ್ಯಾನೇಜ್‌ಮೆಂಟ್, ಎನ್‌ಆರ್‌ಐ ಸೀಟು ಪಡೆಯಲು ಹೆಚ್ಚು ಹಣ ಕಟ್ಟಬೇಕಿದ್ದು, ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಶುಲ್ಕ ಕಡಿಮೆ ಮಾಡಲು ಎ, ಬಿ, ಸಿ ವರ್ಗಗಳನ್ನು ಮಾಡುವ ಚರ್ಚೆಯಾಗುತ್ತಿದೆ. ವೈದ್ಯಕೀಯ ಕೋರ್ಸ್ ವಿಚಾರದಲ್ಲಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆದಿದೆ ಎಂದು ಅವರು ತಿಳಿಸಿದರು.
ಸಂಸದರಾದ ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಶಿವಕುಮಾರ ಉದಾಸಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಜಿಲ್ಲಾಧಿಕಾರಿ ಮಹಾಂತೇಶ ಜಿ.ಬೀಳಗಿ, ಜಿಪಂ ಸಿಇಒ ಚನ್ನಪ್ಪ, ಎಸ್ಪಿ ಸಿ.ಬಿ.ರಿಷ್ಯಂತ್, ಮೇಯರ್ ಜಯಮ್ಮ ಗೋಪಿನಾಯ್ಕ, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮಾಜಿ ಮೇಯರ್ ಎಸ್.ಟಿ.ವೀರೇಶ, ಶಿವನಗೌಡ ಪಾಟೀಲ, ಅಕ್ಕಿ ಪ್ರಭು ಕಲ್ಬುರ್ಗಿ, ಕೆ.ಎಂ.ಸುರೇಶ ಇತರರು ಇದ್ದರು.
ನವೀನ್ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ, ಪೋಷಕರಿಗೆ ಸಾಂತ್ವನ
ಜನಸಾಗರದ ನಡುವೆ ನವೀನ್ ಅಂತಿಮ ಯಾತ್ರೆ
ಉಕ್ರೇನ್‌ನಲ್ಲಿ ಮೃತಪಟ್ಟವೈದ್ಯಕೀಯ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಚಳಗೇರಿಯಲ್ಲಿ ಜನಸಾಗರವೇ ಸೇರಿತ್ತು. ಸಾರ್ವಜನಿಕರ ದರ್ಶನ ಮುಗಿದ ನಂತರ ಮಧ್ಯಾಹ್ನ ಸುಮಾರು 1.10ರ ಸುಮಾರಿಗೆ ಗ್ರಾಮದಲ್ಲಿ ಅಂತಿಮ ಯಾತ್ರೆ ನಡೆಸಲಾಯಿತು. ಇದಕ್ಕಾಗಿ ಕ್ಯಾಂಟರ್ ವಾಹನವನ್ನು ವಿಶೇಷವಾಗಿ ಸಿದ್ಧಪಡಿಸಿ ಹೂವುಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ವಿವಿಧ ಬಡಾವಣೆಗಳಲ್ಲಿ ಹೊರಟ ಮೆರವಣಿಗೆ ಬಸ್ ತಂಗುದಾಣದ ಬಳಿ ಕೊನೆಗೊಂಡಿತು. ಈ ವೇಳೆ ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ನವೀನ್ ಮೃತದೇಹದ ಅಂತಿಮ ದರ್ಶನ ಪಡೆದು ಕಣ್ಣೀರಾದರು. ಅಬಾಲವೃದ್ಧರಾದಿಯಾಗಿ ಎಲ್ಲರೂ ಮೃತದೇಹಕ್ಕೆ ಹೂವುಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳು ಪಾರ್ಥಿವ ಶರೀರಕ್ಕೆ ಕೈ ಮುಗಿದು ಅಂತಿಮ ನಮನ ಅರ್ಪಿಸಿದರು.
ಉಕ್ರೇನ್‌ನಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ್ದ ಹಾವೇರಿ ಜಿಲ್ಲೆ ಚಳಗೇರಿಯ ವೈದ್ಯಕೀಯ ವಿದ್ಯಾರ್ಥಿ ನವೀನ ಗ್ಯಾನಗೌಡರ್ ಅವರ ಪಾರ್ಥೀವ ಶರೀರವನ್ನು ಮೃತನ ಪಾಲಕರು, ಕುಟುಂಬಸ್ಥರು ಸೋಮವಾರ ಸಂಜೆ ಧಾರ್ಮಿಕ ವಿಧಿ ವಿಧಾನಗಳ ನಂತರ ದಾವಣಗೆರೆ ಎಸ್ಸೆಸ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರಿಸಿದರು. ರಷ್ಯಾ ಬಾಂಬ್ ದಾಳಿಯಲ್ಲಿ ಬಲಿಯಾದ 21 ದಿನಗಳ ನಂತರ ದುಬೈ ಮಾರ್ಗವಾಗಿ ತಾಯ್ನಾಡಿಗೆ ನವೀನ ಪಾರ್ಥೀವ ಶರೀರ ದುಬೈ ಮಾರ್ಗವಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಅಲ್ಲಿಂದ ಹರಿಹರದ ತಾಲೂಕು ಆಸ್ಪತ್ರೆಗೆ ಪಾರ್ಥೀವ ಶರೀರವನ್ನು ತಂದು ಎಂಬಾಂಬಿಂಗ್ ಮಾಡಿ, ಚಳಗೇರಿಗೆ ಕಳಿಸಿ ಕೊಡಲಾಯಿತು.