'4 ತಿಂಗಳಿಂದ ಸೀಡಿ ಗ್ಯಾಂಗ್‌ ಬ್ಲ್ಯಾಕ್‌ಮೇಲ್, ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದೆ'

By Kannadaprabha News  |  First Published Mar 17, 2021, 7:45 AM IST

4 ತಿಂಗಳಿಂದ ನನಗೆ ಸೀಡಿ ಗ್ಯಾಂಗ್‌ ಬ್ಲ್ಯಾಕ್‌ಮೇಲ್‌: ಜಾರಕಿಹೊಳಿ| ಮರ್ಯಾದೆಗೆ ಅಂಜಿ ಆ ಗುಂಪಿಗೆ ಅಲ್ಪ ಪ್ರಮಾಣದ ಹಣ ನೀಡಿದ್ದೆ| ಮತ್ತೆ ದೊಡ್ಡ ಮೊತ್ತ ಕೇಳಿದ್ದರು, ಕೊಡದಿದ್ದಕ್ಕೆ ತೇಜೋವಧೆ ಮಾಡಿದರು: ರಮೇಶ್‌| ಸಿ.ಡಿ.ಯನ್ನು ಮಾಧ್ಯಮಗಳಲ್ಲಿ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದರು| ಎಸ್‌ಐಟಿ ಅಧಿಕಾರಿಗಳ ಮುಂದೆ ಮಾಜಿ ಸಚಿವ ಸ್ಫೋಟಕ ಹೇಳಿಕೆ


 ಬೆಂಗಳೂರು(ಮಾ.17): ನಾಲ್ಕು ತಿಂಗಳ ಹಿಂದೆಯೇ ಲೈಂಗಿಕ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ನನ್ನಿಂದ ಹಣ ಸುಲಿಗೆ ಮಾಡಲು ಸಿ.ಡಿ. ಸ್ಫೋಟದ ಗುಂಪು ಪ್ರಯತ್ನ ನಡೆಸಿತ್ತು. ಆದರೆ ದೊಡ್ಡ ಮೊತ್ತಕ್ಕೆ ಆ ಗುಂಪು ಬೇಡಿಕೆ ಇಟ್ಟಾಗ ನಿರಾಕರಿಸಿದ್ದಕ್ಕೆ ಸಿ.ಡಿ. ಬಹಿರಂಗ ಮಾಡಿದ್ದಾರೆ’ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಸ್ಫೋಟಕ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.

ಆದರೆ, ಎಸ್‌ಐಟಿ ವಿಚಾರಣೆ ವೇಳೆ ಕೃತ್ಯದ ಹಿಂದೆ ಇದ್ದಾರೆ ಎನ್ನಲಾದ ‘ಮಹಾನ್‌ ನಾಯಕ’ನ ಹೆಸರನ್ನು ಮಾಜಿ ಸಚಿವರು ಪ್ರಸ್ತಾಪಿಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

Tap to resize

Latest Videos

ಸೋಮವಾರ ರಾತ್ರಿ ಸದಾಶಿವನಗರದಲ್ಲಿರುವ ರಮೇಶ್‌ ಜಾರಕಿಹೊಳಿ ನಿವಾಸಕ್ಕೆ ತೆರಳಿದ ಎಸ್‌ಐಟಿಯ ಎಸಿಪಿ ಎಚ್‌.ಎನ್‌.ಧರ್ಮೇಂದ್ರ ನೇತೃತ್ವದ ತಂಡವು ಲೈಂಗಿಕ ವಿವಾದದ ಸಂಬಂಧ ಸುಮಾರು ಎರಡು ತಾಸಿಗೂ ಹೆಚ್ಚಿನ ಹೊತ್ತು ಮಾಜಿ ಸಚಿವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡು ಬಂದಿದೆ ಎಂದು ಮೂಲಗಳು ಹೇಳಿವೆ.

ರಾಜಕೀಯ ಏಳಿಗೆ ಸಹಿಸಲಾರದೆ ನನ್ನ ವಿರುದ್ಧ ದುಷ್ಕರ್ಮಿಗಳು ಷಡ್ಯಂತ್ರ ಹೆಣೆದಿರುವ ವಿಚಾರ ನಾಲ್ಕು ತಿಂಗಳ ಹಿಂದೆಯೇ ನನ್ನ ಆಪ್ತರಾದ ನೆಲಮಂಗಲ ಕ್ಷೇತ್ರದ ಮಾಜಿ ಶಾಸಕ ಎಂ.ವಿ.ನಾಗರಾಜ್‌ ಅವರಿಂದ ಗೊತ್ತಾಯಿತು. ಮಾಜಿ ಶಾಸಕರನ್ನು ಭೇಟಿಯಾಗಿದ್ದ ಕೆಲವರು, ರಮೇಶ್‌ ಜಾರಕಿಹೊಳಿಗೆ ಸೇರಿದ ಲೈಂಗಿಕ ಹಗರಣದ ಸಿ.ಡಿ. ಇದೆ. ಅದನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸಿ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದ್ದರು. ಆಗ ಸಿ.ಡಿ. ಮುಂದಿಟ್ಟು ಹಣಕ್ಕಾಗಿ ಆ ಗುಂಪು ಬ್ಲ್ಯಾಕ್‌ಮೇಲ್‌ ಮಾಡಿತು. ಕೊನೆಗೆ ಮರ್ಯಾದೆಗೆ ಅಂಜಿ ಆ ಗುಂಪಿಗೆ ನಾನು ಅಲ್ಪ ಪ್ರಮಾಣದ ಹಣ ನೀಡಿದ್ದೆ ಎಂದು ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.

ಇದಾದ ನಂತರ ಮತ್ತೆ ನಾಗರಾಜ್‌ ಅವರನ್ನು ಭೇಟಿಯಾಗಿ ದೊಡ್ಡ ಮೊತ್ತಕ್ಕೆ ಅವರು ಬೇಡಿಕೆ ಇಟ್ಟಿದ್ದರು. ಪದೇ ಪದೇ ಹಣಕ್ಕೆ ಕಿಡಿಗೇಡಿಗಳು ರಗಳೆ ಶುರು ಮಾಡಿದ್ದರು. ಆಗ ಹಣ ಕೊಡಲು ನಿರಾಕರಿಸಿದೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ರೂಪಿಸಿದ್ದ ರಾಜಕೀಯ ಕುತಂತ್ರಕ್ಕೆ ರಾಜಕೀಯವಾಗಿ ತಿರುಗೇಟು ನೀಡಲು ಯತ್ನಿಸಿದೆ. ಆದರೆ ವಿರೋಧಿಗಳ ಚಿತಾವಣೆಯಿಂದ ದುಷ್ಕರ್ಮಿಗಳು ನಕಲಿ ಸಿ.ಡಿ. ತಯಾರಿಸಿ ನನ್ನ ತೇಜೋವಧೆ ಮಾಡಿದ್ದಾರೆ ಎಂದು ಮಾಜಿ ಸಚಿವರು ಹೇಳಿದ್ದಾರೆಂದು ಗೊತ್ತಾಗಿದೆ.

ಸಿ.ಡಿ. ಸ್ಫೋಟದ 24 ಗಂಟೆ ಮುನ್ನವೇ ನನಗೆ ಹಿತೈಷಿಗಳಿಂದ ವಿಚಾರ ಗೊತ್ತಾಯಿತು. ಈ ಕೃತ್ಯದ ಹಿಂದೆ ಬಹುದೊಡ್ಡ ಸಂಚು ಅಡಗಿದೆ. ನಾನು ಎರಡನೇ ಬಾರಿ ಸಚಿವನಾಗಿದ್ದು ಕೆಲವರಿಗೆ ಅಸಹನೆ ಮೂಡಿಸಿತು. ಸವಾಲಾಗಿದ್ದ ಜಲಸಂಪನ್ಮೂಲ ಇಲಾಖೆಯನ್ನು ಸಮರ್ಥವಾಗಿ ರಾಜ್ಯದ ಜನರೇ ಮೆಚ್ಚುವಂತೆ ನಿರ್ವಹಿಸಿದ್ದೆ. ನೂರಾರು ಕೋಟಿ ವ್ಯಯಿಸಿದರೂ ರಾಜಕೀಯವಾಗಿ ನನ್ನನ್ನು ಕ್ಷೇತ್ರದಲ್ಲಿ ಹಣಿಯಲು ಸಾಧ್ಯವಿಲ್ಲವೆಂದು ಭಾವಿಸಿಯೇ ವಿರೋಧಿಗಳು ಈ ಹೀನ ಕೃತ್ಯ ಎಸಗಿದ್ದಾರೆ ಎಂದು ರಮೇಶ್‌ ಆರೋಪಿಸಿದ್ದಾರೆ ಎನ್ನಲಾಗಿದೆ.

ನನಗಿರುವ ಮಾಹಿತಿ ಪ್ರಕಾರ ನನ್ನ ವಿರುದ್ಧ ಬೆಂಗಳೂರಿನ ಎರಡು ಕಡೆ ಷಡ್ಯಂತ್ರ ನಡೆದಿದೆ. ಯಶವಂತಪುರ ಪೊಲೀಸ್‌ ಠಾಣೆ ಪಕ್ಕದ 4ನೇ ಮಹಡಿ ಹಾಗೂ ಒರಾಯನ್‌ ಮಾಲ್‌ ಅಕ್ಕಪಕ್ಕದ 5ನೇ ಮಹಡಿಯಲ್ಲಿ ಸಂಚು ನಡೆದಿದೆ. ಈ ಸಂಚಿಗೆ ಸುಮಾರು .20 ಕೋಟಿ ಖರ್ಚು ಮಾಡಿದ್ದಾರೆ. ಆ ಯುವತಿಗೆ .5 ಕೋಟಿ ಹಣ ಹಾಗೂ ವಿದೇಶದಲ್ಲಿ ಎರಡು ಫ್ಲ್ಯಾಟ್‌ ನೀಡಿದ್ದಾರೆ ಎಂಬ ಮಾಹಿತಿ ಇದೆ. ಈ ಎಲ್ಲದರ ಬಗ್ಗೆ ಸೂಕ್ತವಾಗಿ ತನಿಖೆ ಮಾಡಿದರೆ ಸತ್ಯ ಗೊತ್ತಾಗಲಿದೆÜ ಎಂದು ಮಾಜಿ ಸಚಿವ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.

ರಮೇಶ್‌ ಹೇಳಿದ್ದೇನು?

- 4 ತಿಂಗಳ ಹಿಂದೆ ನೆಲಮಂಗಲ ಮಾಜಿ ಶಾಸಕ ನಾಗರಾಜ್‌ರನ್ನು ಸೀಡಿ ಗ್ಯಾಂಗ್‌ ಸಂಪರ್ಕಿಸಿತ್ತು

- ಅಶ್ಲೀಲ ಸೀಡಿ ಇದೆ, ಅದನ್ನು ಬಯಲುಗೊಳಿಸಿ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿತ್ತು

- ಸೀಡಿ ಮುಂದಿಟ್ಟು ಆ ಗುಂಪು ಹಣಕ್ಕಾಗಿ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಿತು

- ಕೊನೆಗೆ ಮರ್ಯಾದೆಗೆ ಅಂಜಿ ಆ ಗುಂಪಿಗೆ ನಾನು ಅಲ್ಪ ಪ್ರಮಾಣದ ಹಣ ನೀಡಿದ್ದೆ

- ಇದಾದ ಬಳಿಕವೂ ನಾಗರಾಜ್‌ರನ್ನು ಭೇಟಿಯಾಗಿ ದೊಡ್ಡ ಮೊತ್ತಕ್ಕೆ ಸೀಡಿ ಗ್ಯಾಂಗ್‌ ಬೇಡಿಕೆ ಇಟ್ಟಿತು

- ಹಣಕ್ಕಾಗಿ ಪದೇ ಪದೇ ರಗಳೆ ತೆಗೆಯಿತು. ಹಣ ಕೊಡಲು ನಿರಾಕರಿಸಿದೆ

- ನಾನು ತಪ್ಪು ಮಾಡದ ಕಾರಣ ರಾಜಕೀಯ ಕುತಂತ್ರಕ್ಕೆ ತಿರುಗೇಟು ನೀಡಲು ಯತ್ನಿಸಿದೆ

- ಆದರೆ ವಿರೋಧಿಗಳ ಚಿತಾವಣೆಯಿಂದ ನಕಲಿ ಸಿ.ಡಿ. ತಯಾರಿಸಿ ನನ್ನ ತೇಜೋವಧೆ ಮಾಡಿದರು

- ಎಸ್‌ಐಟಿ ಅಧಿಕಾರಿಗಳ ಮುಂದೆ ರಮೇಶ್‌ ಜಾರಕಿಹೊಳಿ 2 ತಾಸು ಹೇಳಿಕೆ

click me!