ಕಾವೇರಿ ನದಿ ನೀರು ಹಂಚಿಕೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕೂಡಲೇ ಕೆಆರ್‌ಎಸ್ ಜಲಾಶಯದಿಂದ ನೀರನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಚಡ್ಡಿ ಮೆರವಣಿಗೆ, ಉರುಳುಸೇವೆ ನಡೆಸಿದರೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ದಿಢೀರ್ ರಸ್ತೆತಡೆ ನಡೆಸಿದರು.
ಮಂಡ್ಯ (ಸೆ.7): ಕಾವೇರಿ ನದಿ ನೀರು ಹಂಚಿಕೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಕೂಡಲೇ ಕೆಆರ್‌ಎಸ್ ಜಲಾಶಯದಿಂದ ನೀರನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಚಡ್ಡಿ ಮೆರವಣಿಗೆ, ಉರುಳುಸೇವೆ ನಡೆಸಿದರೆ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸದಸ್ಯರು ದಿಢೀರ್ ರಸ್ತೆತಡೆ ನಡೆಸಿದರು.
ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಸೆ.೨೧ಕ್ಕೆ ಮುಂದೂಡಿರುವುದು ರಾಜ್ಯದ ಕಾವೇರಿ ಕೊಳ್ಳದ ರೈತರ ಪಾಲಿಗೆ ಮರಣಶಾಸನವಾಗಿದೆ. ಈಗಾಗಲೇ ಕೆಆರ್‌ಎಸ್ ಜಲಾಶಯದಿಂದ ೧೮ ಟಿಎಂಸಿ ಅಡಿ ನೀರು ಖಾಲಿಯಾಗಿದೆ. ಸೆ.೨೧ರವರೆಗೆ ನೀರು ಹರಿಸಿದರೆ ಜಲಾಶಯ ಪೂರ್ಣ ಪ್ರಮಾಣದಲ್ಲಿ ಖಾಲಿಯಾಗಲಿದೆ. ಸಮರ್ಥ ವಾದ ಮಂಡಿಸಿ ವಸ್ತುಸ್ಥಿತಿ ಅರಿಯಲು ಸ್ಥಳಕ್ಕೆ ತಂಡವನ್ನು ಕಳುಹಿಸಿಕೊಡುವಂತೆ ನ್ಯಾಯಾಲಯದ ಗಮನ ಸೆಳೆಯುವಲ್ಲಿ ರಾಜ್ಯಸರ್ಕಾರ, ಕಾನೂನು ತಜ್ಞರು ವಿಫಲರಾಗಿರುವುದು ತಲೆತಗ್ಗಿಸುವ ಸಂಗತಿಯಾಗಿದೆ ಎಂದು ದೂರಿದರು.
ಕಾವೇರಿ ನೀರು ಹೋರಾಟ: ಬೆಂಗಳೂರು, ಮೈಸೂರು ಜನರು ನೀರಿಲ್ಲದೇ ಪೇಪರ್ ಬಳಸುವ ಸ್ಥಿತಿ ಬರುತ್ತದೆ
ದಿಢೀರ್ ರಸ್ತೆತಡೆ
ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ನದಿ ನೀರಿನ ವಿಚಾರಣೆ ಮುಂದೂಡಿದ ಬೆನ್ನಹಿಂದೆಯೇ ರೊಚ್ಚಿಗೆದ್ದ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು, ರೈತರು ಕಾವೇರಿ ಕೊಳ್ಳದ ಜಲಾಶಯಗಳಿಂದ ಹರಿಸುತ್ತಿರುವ ನೀರನ್ನು ಸ್ಧಗಿತ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ದಿಢೀರ್ ರಸ್ತೆ ತಡೆ ನಡೆಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ನಿರತರಾಗಿದ್ದ ರೈತರು, ಕನ್ನಡ, ಪ್ರಗತಿಪರ ಹೋರಾಟಗಾರರು ವಿಚಾರಣೆ ಮುಂದೂಡಿಕೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಬೆಂಗಳೂರು-ಮೈಸೂರು ಹೆದ್ದಾರಿಗಿಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು. ಬಾಯಿ ಬಡಿದುಕೊಂಡು ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಾಜ್ಯದ ರೈತರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿದೆ ಎಂದು ಕಿಡಿಕಾರಿದರು.
ನ್ಯಾಯಾಲಯದ ತೀರ್ಪು ಮೂರನೇ ಬಾರಿ ಮುಂದೂಡಿಕೆಯಾಗಿದೆ, ಈ ರೀತಿ ವಿಚಾರಣೆ ನಡೆಸದೆ ಇರುವುದು ಪ್ರತಿನಿತ್ಯ ನೀರು ಹರಿಸಲಿ ಎಂಬ ಕುತಂತ್ರವಾಗಿದೆ. ಈಗಾಗಲೇ ಜಲಾಶಯದಲ್ಲಿನ ಕುಡಿಯುವ ನೀರನ್ನು ಬಿಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಬದಿ ನೀರನ್ನು ಟ್ಯಾಂಕುಗಳಲ್ಲಿ ತುಂಬಿ ತಮಿಳುನಾಡಿಗೆ ಕಳುಹಿಸಲಿ. ಆಗಲಾದರೂ ಸರ್ಕಾರಕ್ಕೆ ಸಮಾಧಾನವಾಗಲಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿಯ ಸುನಂದಾ ಜಯರಾಂ, ಕೆ ಬೋರಯ್ಯ, ಗುರುಪ್ರಸಾದ್ ಕೆರಗೋಡು, ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ಬೇಕ್ರಿ ರಮೇಶ್, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಇ.ಬಸವರಾಜ್, ಕನ್ನಡ ಸೇನೆ ಮಂಜುನಾಥ್, ತಗ್ಗಳ್ಳಿ ವೆಂಕಟೇಶ್, ಕರವೇ ಚಿದಂಬರಂ, ಶಂಕರೇಗೌಡ, ಎಂ.ವಿ ಕೃಷ್ಣ, ರೈತ ಸಂಘದ ಮುದ್ದೇಗೌಡ, ಕೃಷ್ಣಕುಮಾರ್ ಇತರರಿದ್ದರು.
ಉರುಳುಸೇವೆ:
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕನ್ನಡಿಗರ ಪರ ಬರಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಡ್ಯದಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಿದರು.
ನಗರದ ಜಯ ಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಉರುಳು ಸೇವೆ ಆರಂಭಿಸಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಯೋಗೇಶ್‌ಗೌಡ, ಶ್ರೀಧರ್, ನಾಗಲಕ್ಷ್ಮಿ, ರೋಸಿ, ನಿರ್ಮಲಾ, ತಸ್ನಿಯ ಬಾನು, ಸೋಮಶೇಖರ್, ಗೋವಿಂದನಾಯಕ್, ಜಯಸಿಂಹ, ಯೇಸು, ರಂಜಿತ್‌ಗೌಡ, ಕೃಷ್ಣೇಗೌಡ, ದೇವರಾಜ್ ಉರುಳು ಸೇವೆ ಮಾಡಿದರು.
ಸುಮಾರು ಎರಡು ತಾಸು ಕಾಲ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆವರಗೆ ಉರುಳುವ ಮೂಲಕ ಕಾವೇರಿ ವಿಚಾರದಲ್ಲಿ ನ್ಯಾಯಕ್ಕಾಗಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಬಿಜೆಪಿಯ 26 ಮಂದಿ ಸಂಸದರು ಗುಲಾಮಗಿರಿಯಲ್ಲಿದ್ದಾರೆ: ಮುಖ್ಯಮಂತ್ರಿ ಚಂದ್ರು
ಚಡ್ಡಿ ಮೆರವಣಿಗೆ:
ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕನ್ನಡ ಸೇನೇ ಕಾರ್ಯಕರ್ತರು ನಗರದಲ್ಲಿ ಚಡ್ಡಿ ಮೆರವಣಿಗೆ ನಡೆಸಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪಟಾಪಟಿ ಚಡ್ಡಿ ಧರಿಸಿ ಖಾಲಿ ಬಿಂದಿಗೆಯೊಂದಿಗೆ ಬೀದಿಗಿಳಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಶಾಸಕರು, ಸಚಿವರ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರ ವಿರುದ್ಧವೂ ಘೋಷಣೆ ಕೂಗಿದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಸರ್ ಎಂ.ವಿ. ಪ್ರತಿಮೆ ಬಳಿ ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ತೆರಳಿ ಚಳವಳಿಯಲ್ಲಿ ಪಾಲ್ಗೊಂಡರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಗುತ್ತಲು ಚಂದ್ರು, ಜಯಮ್ಮ, ದರ್ಶನ್, ರಾಜೇಶ್, ನಂದೀಶ್ ನೇತೃತ್ವ ವಹಿಸಿದ್ದರು.